ಉದ್ಯೋಗ ಖಾತ್ರಿಯಿಂದ ಅಭಿವೃದ್ಧಿ
ಕನ್ನಡಪ್ರಭ ವಾರ್ತೆ, ರೋಣ, ಜ. 10
ಹೊಲಗಳ ರಸ್ತೆ ಅಭಿವೃದ್ಧಿ, ಒಳಗಟ್ಟಿ, ಬದು ನಿರ್ಮಾಣ, ಕೆರೆ ಅಭಿವೃದ್ಧಿ, ನಿರುದ್ಯೋಗ ನಿವಾರಣೆ, ಶೌಚಾಲಯ ನಿರ್ಮಾಣ ಸೇರಿದಂತೆ ಗ್ರಾಮೀಣ ಪ್ರದೇಶ ಜನತೆ ಅನುಕೂಲಕರವಾದ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಿಂದ ಗ್ರಾಮೀಣ ಪ್ರದೇಶದ ಸಮಗ್ರ ಅಭಿವೃದ್ಧಿಯಾಗುತ್ತದೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಈಚೆಗೆ ತಾಲೂಕಿನ ಕೊತಬಾಳ ಮತ್ತು ಮಾಡಲಗೇರಿ ಗ್ರಾಮದಲ್ಲಿ ರು. 36 ಲಕ್ಷ ವೆಚ್ಚದಲ್ಲಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಎನ್‌ಆರ್‌ಇಜಿ ಯೋಜನೆ ಮೂಲಕ ರಾಜ್ಯ ಸರ್ಕಾರ 15 ಮಹತ್ತರ ಅಂಶಗಳುಳ್ಳ ಯೋಜನೆಯನ್ನು ಅನುಷ್ಠಾನಗೊಳಿಸದೆ. ಇವುಗಳ ಸದುಪಯೋಗವನ್ನು ಗ್ರಾಮೀಣ ಪ್ರದೇಶದ ಜನತೆ ಮತ್ತು ರೈತರು ಪಡೆದುಕೊಳ್ಳಬೇಕು. ಕೊತಬಾಳ ಗ್ರಾಮದಿಂದ ಮುಗಳಿ ಗ್ರಾಮದವರೆಗಿನ ರಸ್ತೆ ಅಭಿವೃದ್ಧಿಗೆ ರು. 1 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದ್ದು, ಸದ್ಯದಲ್ಲಿಯೇ ಟೆಂಡರ್ ಕರೆಯಲಾಗುವುದು.
ಕೊತಬಾಳದಿಂದ ಮುದೇನಗುಡಿ ಗ್ರಾಮದ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಕೂಡಲೇ ಪ್ರಾರಂಭಿಸಲಾಗುವುದು. ಗ್ರಾಮದಲ್ಲಿನ ದುರ್ಗಾದೇವಿ ಮತ್ತು ಮರದಮ್ಮದೇವಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಅನುದಾನ ಬಿಡುಗಡೆ ಮಾಡಲಾಗಿದೆ. ಕೊತಬಾಳ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ರು. 10 ಲಕ್ಷದಲ್ಲಿ ಯಾಳಗಿಯವರ ಮನೆಯಿಂದ ನಾಲ್ವಾಡದ ಮನೆಯವರೆಗಿನ ಚರಂಡಿ ನೀರು ಹೊರ ಹಾಕುವ ಕಾಮಗಾರಿ ಕೈಗೊಳ್ಳಲಾಗಿದೆ ಎಂದರು.
ಮಾಡಲಗೇರಿ ಗ್ರಾಮದಲ್ಲಿ ರು. 16.5 ಲಕ್ಷ ವೆಚ್ಚದಲ್ಲಿ ಭಾರತ ನಿರ್ಮಾಣ ರಾಜೀವ್‌ಗಾಂಧಿ ಸೇವಾ ಕೇಂದ್ರವನ್ನು ನಿರ್ಮಿಸಲಾಗುವುದು. ಗ್ರಾಮದ ಕೆಳಗಿನ ಒಣಿಯಿಂದ ಪಂಚಾಯಿತಿವರೆಗಿನ ರಸ್ತೆಯನ್ನು ರು. 10 ಲಕ್ಷ ವೆಚ್ಚದಲ್ಲಿ ಸಿ.ಸಿ. ರಸ್ತೆಯಾಗಿ ಅಭಿವೃದ್ಧಿಪಡಿಸಲಾಗುವುದು. ಗ್ರಾಮದಲ್ಲಿನ ಎಲ್ಲ ರಸ್ತೆಗಳನ್ನು ಅಭಿವೃದ್ಧಿ ಪಡಿಸಲು ಹಂತ ಹಂತವಾಗಿ ಅನುದಾನ ಬಿಡುಗಡೆ ಮಾಡಲಾಗುವುದು. ಗ್ರಾಮೀಣ ಪ್ರದೇಶದ ಜನತೆಗೆ ಅಗತ್ಯ ಸೌಲಭ್ಯ ಕಲ್ಪಿಸುವಲ್ಲಿ ಮೊದಲ ಆದ್ಯತೆ ನೀಡಲಾಗುವುದು ಎಂದರು. ತಾಪಂ ಸದಸ್ಯ ಧರ್ಮಣ್ಣ ಬೂಸಗೌಡ್ರ, ಎಪಿಎಂಸಿ ಸದಸ್ಯ ಪರಶುರಾಮ ಅಳಗವಾಡಿ, ನ್ಯಾಯವಾದಿ ವಿ.ಆರ್. ಗುಡಿಸಾಗರ, ವಿ.ಬಿ. ಸೋಮನಕಟ್ಟಿಮಠ, ತಾಪಂ ಇಒ ಎಸ್.ಎಂ. ಪಿಡಶೆಟ್ಟಿ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಅಮೃತಗೌಡ ಗೌಡರ, ವೀರಣ್ಣ ಯಾಳಗಿ, ಸಿದ್ದು ಯಾಳಗಿ, ಡಾ. ಶಶಿಧರ ಹಟ್ಟಿ, ಅಭಿಯಂತ ಮಲ್ಲಿಕಾರ್ಜುನ ಮುಂತಾದವರು ಉಪಸ್ಥಿತರಿದ್ದರು.