ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಕ್ರೀಡಾ ಕಲಿಗಳ ಬೆಳೆಸಿದ ವೀರ

Mainashree
Updated On : 11 Jan 2014, 11:27 am

ಕನ್ನಡಪ್ರಭ ವಾರ್ತೆ, ನರೇಗಲ್ಲ, ಜ. 10.
ತಮಗೆ ವಹಿಸಿದ್ದ ತರಗತಿಯನ್ನು ಮುಗಿಸಿ ಶಾಲೆ ಬಿಡುವ ವೇಳೆಗೆ ಕಾಯುವ ಶಿಕ್ಷಕರೇ ಈಗ ಅಧಿಕ. ಇಂತಹ ದಿನಮಾನಗಳಲ್ಲಿ ಬೋಧನೆಯ ಜತೆಗೆ ವಿಶಿಷ್ಟ ಕ್ರೀಡೆಗಳನ್ನು ವಿದ್ಯಾರ್ಥಿಗಳಿಗೆ ಕಲಿಸಿ 40ಕ್ಕೂ ಅಧಿಕ ಮಕ್ಕಳನ್ನು ರಾಜ್ಯ, ರಾಷ್ಟ್ರ ಹಾಗೂ ಅಂತರ್ ರಾಷ್ಟ್ರೀಯ ಮಟ್ಟದ ಕ್ರೀಡೆಯಲ್ಲಿ ಭಾಗವಹಿಸುವಂತೆ ಮಾಡಿದ್ದಾರೆ ಶಿಕ್ಷಕ ವೀರಭದ್ರಪ್ಪ.
ತರಬೇತಿ: ಇಲ್ಲಿಗೆ ಸಮೀಪದ ಜಕ್ಕಲಿ ಗ್ರಾಮದ ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕ ವೀರಭದ್ರಪ್ಪ ಅಂದಾನಪ್ಪ ಕುಂಬಾರ ವಿದ್ಯಾರ್ಥಿಗಳ ಏಳ್ಗೆಗಾಗಿ ಸದಾ ಸಿದ್ಧ. ಗೊತ್ತಿಲ್ಲದಿದ್ದರೂ ವಿವಿಧ ಕ್ರೀಡೆಗಳನ್ನು ಕಲಿತು ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ ವೀರಭದ್ರಪ್ಪ
8 ಮಕ್ಕಳು ರಾಷ್ಟ್ರಮಟ್ಟಕ್ಕೆ: ಶಾಲಾ ಅವಧಿಯಲ್ಲಿ ಬೋಧನೆ ಹಾಗೂ ಶೈಕ್ಷಣಿಕ ಚಟುವಟಿಕೆ ನಂತರದ ಅವಧಿಯಲ್ಲಿ ಮಲ್ಲಗಂಬ ಹಾಗೂ ಜಂಪ್‌ರೋಪ್‌ನಂತಹ ಅಂತರ್ ರಾಷ್ಟ್ರೀಯ ಕ್ರೀಡೆಗಳ ತರಬೇತಿ, ಮಕ್ಕಳಲ್ಲಿ ಕ್ರೀಡಾ ಆಸಕ್ತಿ ಹೆಚ್ಚಿಸುತ್ತಿದ್ದಾರೆ. ಮಾರನಬಸರಿಯಲ್ಲಿ ಸಲ್ಲಿಸಿದ 5 ವರ್ಷಗಳ ಸೇವಾವಧಿಯಲ್ಲಿ ಒಟ್ಟು 8 ಮಕ್ಕಳನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ದ ಕೀರ್ತಿ ಇವರದ್ದು. ಬಳಿಕ ಸಮೀಪದ ಜಕ್ಕಲಿಗೆ ವರ್ಗಾವಣೆಯಾದರು. ಕೇವಲ 2 ತಿಂಗಳಲ್ಲಿ ತರಬೇತಿಗೊಳಿಸಿದ ಮಕ್ಕಳಲ್ಲಿ 2012ರ ಸೆಪ್ಟೆಂಬರ್ 18 ಹಾಗೂ 19ರಂದು ಗದಗ ಜಿಲ್ಲೆಯ ರಾಮಗಿರಿಯಲ್ಲಿ ನಡೆದ ರಾಜ್ಯಮಟ್ಟದ ಮಲ್ಲಗಂಬ ಕ್ರೀಡೆಯಲ್ಲಿ 15 ಹೆಣ್ಣು ಹಾಗೂ 13 ಗಂಡು ಮಕ್ಕಳು ಭಾಗವಹಿಸಲು ಪ್ರೇರಣೆ ನೀಡಿದ್ದರು.
ಅವರಲ್ಲಿ ಇಬ್ಬರು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದರು. 2012ರಲ್ಲಿ ಕೊಪ್ಪಳ ಜಿಲ್ಲೆಯ ಸಿದ್ದಾಪುರದಲ್ಲಿ ನಡೆದ ರಾಜ್ಯಮಟ್ಟದ ಸಿನಿಯರ್ ಹಾಗೂ ಜ್ಯೂನಿಯರ್ ಜಂಪ್‌ರೋಪ್  ಕ್ರೀಡೆಯಲ್ಲಿ 15 ಜನ ಭಾಗವಹಿಸಿ ಅದರಲ್ಲಿ 10 ಮಕ್ಕಳು ಗೆಲವು ಸಾಧಿಸಿದ್ದರು. ಬಳಿಕ ಅವರು ತಮಿಳುನಾಡಿನ ಅರ್ಕಟ್‌ನಲ್ಲಿ ನಡೆದ ರಾಷ್ಟ್ರಮಟ್ಟದ ಕ್ರೀಡೆಯಲ್ಲಿ ಮೊದಲ ಬಾರಿಗೆ ಭಾಗವಹಿಸಿ 4 ಕಂಚಿನ ಪದಕ ಗೆಲ್ಲುವ ಮೂಲಕ ಶಿಕ್ಷಕನಲ್ಲಿರುವ ಆತ್ಮವಿಶ್ವಾಸವನ್ನು ಇನ್ನೂ ಇಮ್ಮುಡಿಗೊಳಿಸಿದ್ದರು.
3 ಬಂಗಾರದ ಪದಕ: ಆ ಮಕ್ಕಳಿಗೆ ತರಬೇತಿ ಮುಂದುವರಿಸಿದ ಶಿಕ್ಷಕ 2013ರ ಫೆಬ್ರುವರಿ 17ರಿಂದ 21ರ ವರೆಗೆ ಉತ್ತರಪ್ರದೇಶದ ಮೀರಟ್‌ನಲ್ಲಿ ನಡೆದ ರಾಷ್ಟ್ರೀಯ ಜ್ಯೂನಿಯರ್ ಹಾಗೂ ಸಬ್ ಜ್ಯೂನಿಯರ್ ಜಂಪ್‌ರೋಪ್ ಕ್ರೀಡೆಯಲ್ಲಿ 4 ಮಕ್ಕಳು ಭಾಗವಹಿಸುವಂತೆ ಮಾಡಿದ್ದರು. ಅದರಲ್ಲಿ 3 ಬಂಗಾರ, 7 ಬೆಳ್ಳಿ ಹಾಗೂ 2 ಕಂಚಿನ ಪದಕ ಗೆಲ್ಲಲು ಯಶಸ್ವಿಯಾದರು. ನಂತರ ಈ ನಾಲ್ಕು ಮಕ್ಕಳು ದೆಹಲಿಯ ಇಂದಿರಾಗಾಂಧಿ ಇಂಡೋರ್ ಸ್ಟೇಡಿಯಂನಲ್ಲಿ ನಡೆದ ಸೌತ್ ಏಶಿಯನ್ ಕ್ರೀಡೆಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿ ವೈಯಕ್ತಿಕವಾಗಿ ತೇಜಶ್ವಿನಿ ಕುಂಬಾರ 3 ಬಂಗಾರ, 1 ಬೆಳ್ಳಿ, ಸಂತೋಷ ಯಳಮಲಿ 3 ಬಂಗಾರ, ನಯನಾ ಕಿನ್ನಾಳ ಹಾಗೂ ಪೂರ್ಣಿಮಾ ಅಕ್ಕಿ ತಲಾ 2 ಬೆಳ್ಳಿ ಪದಕಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಇದು ಶಿಕ್ಷಕನಿಗೆ ದೊರೆತ ಬಹುದೊಡ್ಡ ಯಶಸ್ಸು.
ಇಂತಹ ಒಬ್ಬ ಅಪರೂಪದ ಶಿಕ್ಷಕ ನಮ್ಮ ಭಾಗದಲ್ಲಿರುವುದು ಸಂತಸ ತಂದಿದೆ. ಯಾವುದೇ ಫಲಾಪೇಕ್ಷೆ ಇಲ್ಲದೇ ಮಕ್ಕಳ ಗೆಲುವಲ್ಲೇ ತಮ್ಮ ಗೆಲುವನ್ನು ಕಂಡು, ಯಾವುದೇ ತಾರತಮ್ಯವಿಲ್ಲದೇ ಸೇವೆ ಸಲ್ಲಿಸುತ್ತಿರುವ ವೀರಭದ್ರಪ್ಪ ಕುಂಬಾರ ಅವರ ಕಾರ್ಯ ಇತರ ಶಿಕ್ಷಕರಿಗೆ ಮಾದರಿ.
- ಅಬ್ದುಲ್ ರಜಾಕ್,
ಟೈಲರ್ ರಾಜ್ಯ ಜಂಪ್‌ರೋಪ್ ಸಂಸ್ಥೆಯ ಕಾರ್ಯದರ್ಶಿ
ನಾವು ಮಾಡುವ ಕೆಲಸದಲ್ಲಿ ನಮಗೆ ವಿಶ್ವಾಸ, ಗೌರವವಿರಬೇಕು. ಅಂದಾಗ ಏನೆಲ್ಲ ಸಾಧಿಸಲು ಸಾಧ್ಯ. ಅಂತಹ ಸಾಧನೆಯನ್ನು ಮಕ್ಕಳಿಂದ ಮಾಡಿಸಿ, ಅವರ ಸಾಧನೆಯಲ್ಲಿಯೇ ನಮ್ಮ ಸಾಧನೆಯನ್ನು ಕಂಡುಕೊಳ್ಳಬೇಕು ಎನ್ನುವದೊಂದೇ ನನ್ನ ಹಂಬಲ. ವಿಪರ್ಯಾಸವೆಂದರೆ ಸೌತ್ ಏಶಿಯನ್‌ನಲ್ಲಿ ಭಾಗವಹಿಸಿ ಹಲವಾರು ಪದಕ ಗೆಲ್ಲುವ ಹುಮ್ಮಸ್ಸಿದ್ದರೂ ಆರ್ಥಿಕ ಕೊರತೆಯಿಂದ ಹಿನ್ನಡೆಯಾಗಿದೆ. ರಾಜ್ಯ ಸರ್ಕಾರ ಮತ್ತು ಕ್ರೀಡಾ ಇಲಾಖೆ ಕ್ರೀಡಾಪಟುಗಳಿಗೆ ನೆರವು ನೀಡದಿರುವುದು ದುರದೃಷ್ಟಕರ. ಒಂದುವೇಳೆ ಸೌಲಭ್ಯ ದೊರೆತಲ್ಲಿ ಗ್ರಾಮೀಣ ಮಕ್ಕಳಿಂದ ದೇಶದ ಕೀರ್ತಿ ಪತಾಕೆಯನ್ನು ವಿದೇಶಿ ಅಂಗಳದಲ್ಲಿ ಬಾನೆತ್ತರಕ್ಕೆ ಹಾರಿಸುವ ಮಹದಾಸೆ ನನ್ನದು.
- ವಿ.ಎ.ಕುಂಬಾರ, ಶಿಕ್ಷಕ

ನಿಂಗರಾಜ ಬೇವಿನಕಟ್ಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement