ಮಹಮ್ಮದ ಪೈಗಂಬರ ಬದುಕು ಮಾದರಿ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಜ. 10
ಆಧ್ಯಾತ್ಮ ಸನ್ಮಾರ್ಗದ ಮೂಲಕ ಸಮಾಜದಲ್ಲಿನ ಮೌಢ್ಯ, ಕಂದಾಚಾರ ತೊಲಗಿಸಿ ವಿಶ್ವ ಭಾತೃತ್ವದ ಮಾನವೀಯತೆ ಮೌಲ್ಯ ಪ್ರತಿಪಾದಿಸಿ, ಮುಸ್ಲಿಂ ಧರ್ಮ ಸಂಸ್ಥಾಪಿಸಿ, ಭಾವೈಕ್ಯತೆಯ ಹರಿಕಾರರೆನಿಸಿದ ಪ್ರವಾದಿ ಹಜರತ್ ಮಹಮ್ಮದ ಪೈಗಂಬರರ ಬದುಕು ವಿಶ್ವಕ್ಕೆ ಮಾದರಿ ಎಂದು ಮೌಲಾನಾ ಮಹಮ್ಮದ ಜಮಾ ಹೇಳಿದರು.
ಬುಧವಾರ ಸಂಜೆ ಸ್ಥಳೀಯ ನಾಲಗಾರ ಬಡಾವಣೆಯಲ್ಲಿ ಮದಿನಾ ಬಾರ್‌ಬೆಂಡಿಗ್ ಹಾಗೂ ನೌಜವಾನ್ ಕಮಿಟಿ ವತಿಯಿಂದ ನಡೆದ ಹಜರತ್ ಮಹಮ್ಮದ ಪೈಗಂಬರ ತತ್ವಾದರ್ಶ ಜನ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಮಾನವನ ಜೀವನದ ಶಿಷ್ಟಾಚಾರಗಳಲ್ಲಿ ವ್ಯತ್ಯಾಸ ಕಂಡಾಗ ಸೃಷ್ಟಿಕರ್ತನು ಸೂಫಿ ಶರಣ ಸಂತರಂತಹ ಮಹಾತ್ಮರನ್ನು ಸೃಷ್ಟಿಸಿ ಮಾನವನ ಸಕಲ ಭೌತಿಕ ಪರಿಶುದ್ಧತೆಯ ಅಗತ್ಯಗಳನ್ನು ಪೂರೈಸುತ್ತಾನೆ ಎಂಬುದು ನಂಬಿಕೆ. ಅಂತಹ ಮಹಾನ್ ಶರಣರ ಸಾಲಿನಲ್ಲಿರುವ ಪ್ರವಾದಿ ಎಂದೇ ಕರೆಯಿಸಿಕೊಂಡು ಮೌಢ್ಯ, ಕಂದಾಚಾರದ ಅಂಧತ್ವದಲ್ಲಿ ಬೆಂದಿದ್ದ ಮುಸ್ಲಿಂ ಸಮುದಾಯದ ಕಣ್ಣು ತೆರೆಯಿಸಿ ಆಧ್ಯಾತ್ಮ ಮತ್ತು ಧಾರ್ಮಿಕತೆಯ ಮಾರ್ಗದೆಡೆಗೆ ಕರೆದೊಯ್ದ ಪೈಗಂಬರರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಮೌಲಾನಾ ಖಲೀಲ ಖಾಜಿ ಮಾತನಾಡಿ, ಮಹಮ್ಮದರು ಸಮಾನತೆ ಮತ್ತು ನ್ಯಾಯದ ವಾಹಕರಾಗಿ ಸರಳ, ಸಜ್ಜನಿಕೆಯಿಂದ ಬಡವರ ಮತ್ತು ದುರ್ಬಲರ ರಕ್ಷಕನಾಗಿ, ವಿಶ್ವವೇ ಬೆರಗುಗೊಳಿಸುವಂತಹ ಭಾತೃತ್ವದ ಸಂದೇಶ ನೀಡಿದ ಮಹಾನ್ ಸಂತರೆನಿಸಿದ್ದಾರೆ. ಜಾತಿ-ಮತ-ಕುಲ-ಭೇದ ಮರೆತು ಮಾನವ ಕುಲ ಒಂದೇ ಎಂಬ ಭಾವನೆಯಿಂದ ಬದುಕುವುದು ಅವಶ್ಯವಿದೆ ಎಂದರು.
ಇದೇ ಸಂದರ್ಭದಲ್ಲಿ ಸಾಮೂಹಿಕ ಅನ್ನ ಸಂತರ್ಪಣೆ ನಡೆಯಿತು. ರಫೀಕ್ ಮೌಲಾನಾ, ಮೌಲಾನಾ ತಲಹಾ ನೂರಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಹಜರತಲಿ ಖಿಲ್ಲೇದಾರ, ಖಾಜೇಸಾಬ ರೋಣದ, ಅಸ್ಲಾಂ ಬೆಂಗಳೂರಿ, ಜಾಕೀರ್ ಗೊಡೇಕಾರ, ಮಹಮ್ಮದಸಾಬ ಗೊಡೇಕಾರ, ನಾಸೀರ ಸುರಪುರ, ಸಲೀಂ ಮನಿಯಾರ, ಹಸನ ತಟಗಾರ, ಉಸ್ಮಾನ ಸಗರ, ಫಾರೂಕ್ ಬಂಗಾರಗುಂಡ, ರಾಜು ಮಾಣಿಕಬಾಯಿ, ಅಲ್ತಾಫ್ ರೋಣದ, ಆಸೀಫ್ ಮಂಡಲಗೇರಿ, ಫಿರೋಜ್ ಮೋಮಿನ್, ಯಾಸಿನ್ ಮಾರನಬಸರಿ, ಮೈಬೂಬ ನಾಲಬಂದ, ಮೆಹಬೂಬ ರೋಣದ, ತೌಶಿಫ ಮಂಡಲಗೇರಿ, ಸಮೀರ ಮಾರನಬಸರಿ, ನಜೀರ ಸೌದಾಗರ, ಬುಡ್ಡಾ ಮನಿಯಾರ, ಮೆಹಬೂಬ ಸುರಪುರ, ಮುಚ್ಚಾಲಿ ಮಾಣಿಕಬಾಯಿ, ಅನ್ವರ ಗೊಡೇಕಾರ ಮುಂತಾದವರು ಉಪಸ್ಥಿತರಿದ್ದರು.