ಸುದ್ದಿ ಸಂಕ್ಷೇಪ
ಇಂದು ಪೂರ್ವಭಾವಿ ಸಭೆ
ಗದಗ: ಜಿಲ್ಲಾ ಪಂಚಮಸಾಲಿ ಯುವಘಟಕದ ವತಿಯಿಂದ ನಗರದಲ್ಲಿ ರಾಜ್ಯಮಟ್ಟದ ಯುವ ಸಮಾವೇಶ ನಡೆಸುವ ಕುರಿತು ಜ. 11ರ ಶನಿವಾರ ಬೆಳಗ್ಗೆ 10.30ಕ್ಕೆ ಸ್ಥಳೀಯ ಹುಡ್ಕೋ ಕಾಲೋನಿಯಲ್ಲಿರುವ ಸಚ್ಚಿದಾನಂದ ಮಠದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ.
ಕೂಡಲ ಸಂಗಮದ ಜಯಮೃತ್ಯುಂಜಯ ಶ್ರೀಗಳು ವಹಿಸುವರು. ಅತಿಥಿಗಳಾಗಿ ರಾಜ್ಯ ಯುವ ಘಟಕದ ಅಧ್ಯಕ್ಷರು ಹಾಗೂ ಕಾರ್ಯಕಾರಿಣಿ ಮಂಡಳಿಯ ಸದಸ್ಯರು, ರಾಷ್ಟ್ರಾಧ್ಯಕ್ಷರು, ಕಾರ್ಯಕಾರಿ ಮಂಡಳಿಯ ಸದಸ್ಯರು, ಗದಗ ಜಿಲ್ಲೆ ಹಾಗೂ ತಾಲೂಕಿನ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಪಾಲ್ಗೊಳ್ಳಲಿದ್ದಾರೆ.
ಜಿಲ್ಲೆಯ ಸಮಾಜದ ಬಾಂಧವರು, ಸಾರ್ವಜನಿಕರು ಆಗಮಿಸಿ ಸಲಹೆ ಸೂಚನೆಗಳನ್ನು ನೀಡುವಂತೆ ಗದಗ ಜಿಲ್ಲಾ ಯುವಘಟಕದ ಅಧ್ಯಕ್ಷ ಶಶಿಧರ ದಿಂಡೂರ, ಪ್ರಧಾನ ಕಾರ್ಯದರ್ಶಿ ಶರಣಪ್ಪ ಜಿಗಳೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
20ರಿಂದ ಭರ್ತಿ ರ್ಯಾಲಿ
ಗದಗ: ಜ. 20ರಿಂದ 30ರ ವರೆಗೆ ಕೆಎಲ್‌ಇ ಕ್ಯಾಂಪಸ್ ಬಿ.ಕೆ. ಕಾಲೇಜು ಚಿಕ್ಕೋಡಿಯಲ್ಲಿ ಭಾರತೀಯ ಭೂ ಸೇನಾ ಪಡೆಯಲ್ಲಿ ಭರ್ತಿ ರ್ಯಾಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಲ್ಲ ಅಭ್ಯರ್ಥಿಗಳು ಒಂದು ದಿನ ಮುಂಚಿತವಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಜ. 20ರಂದು ಸೋಲ್ಜರ್ ಕ್ಲರ್ಕ್, ಸ್ಟೋರ್ ಕೀಪರ್ ಟೆಕ್ನಿಕಲ್ ಮತ್ತು 28ರಂದು ಸೋಲ್ಜರ್ ಜನರಲ್ ಡ್ಯೂಟಿ ಸೋಲ್ಜರ್ ಟ್ರೇಡ್ಸ್‌ಮನ್, ಜ. 30ರಂದು ಸೋಲ್ಜರ್ ಟೆಕ್ನಿಕಲ್ ಮತ್ತು ಸೋಲ್ಜರ್ ನರ್ಸಿಂಗ್ ಬಳ್ಳಾರಿ ಜಿಲ್ಲೆಯವರು ಮಾತ್ರ ಭಾಗವಹಿಸಬಹುದಾಗಿದೆ. ಜ. 30ರಂದು ಸೋಲ್ಜರ್ ಕ್ಲರ್ಕ್, ಸ್ಟೋರ್ ಕೀಪರ್ ಟೆಕ್ನಿಕಲ್ ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಯವರು ಮಾತ್ರ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ವಿಂಗ್ ಕಮಾಂಡರ್ (ನಿ) ಉಪನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಧಾರವಾಡ ಇವರ ಕಚೇರಿಯನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.
ತರಬೇತಿ: ಅರ್ಜಿ ಆಹ್ವಾನ
ಗದಗ: 2013-14ನೇ ಸಾಲಿಗೆ ಜಿಲ್ಲೆಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರಿಂದ ಹಿಂದುಳಿದ ವರ್ಗಗಳ ಕಾನೂನು ಪದವೀಧರರಿಗೆ ಈ ಇಲಾಖೆಯಿಂದ ತರಬೇತಿಗೆ ಆಯ್ಕೆ ಮಾಡಬೇಕಾಗಿದ್ದು, ಖಾಲಿ ಉಳಿದ ಸ್ಥಾನಗಳಿಗೆ ಅರ್ಹ ಅಭ್ಯರ್ಥಿಗಳಾದ ಪ್ರವರ್ಗ-1, 2ಎ, 3ಎ ಅಭ್ಯರ್ಥಿಗಳಿಗೆ ಮಾತ್ರ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಹಾಗೂ ಅರ್ಹ ಹಿಂದುಳಿದ ವರ್ಗಗಳ ಕಾನೂನು ಪದವೀಧರರು ಭರ್ತಿ ಮಾಡಿದ ಅರ್ಜಿಗಳನ್ನು ಗದಗ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳಿಗೆ ಜ. 20ರಂದು ಸಂಜೆ 5ರ ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಜಿಲ್ಲಾಧಿಕಾರಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಗದಗ ಇಲ್ಲಿಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.