ಸುದ್ದಿ ಸಂಕ್ಷೇಪ
ಮಕ್ಕಳ ಬೆಳವಣಿಗೆಯಲ್ಲಿ ಪಾಲಕರ ಪಾತ್ರ ಮಹತ್ವದ್ದು
ಗದಗ: ವಿದ್ಯಾರ್ಥಿಯ ಸರ್ವಾಂಗೀಣ ಬೆಳವಣಿಗೆಯಾಗಬೇಕಾದರೆ ಶಿಕ್ಷಕ, ವಿದ್ಯಾರ್ಥಿ ಹಾಗೂ ಪಾಲಕರು ಈ ಮೂವರ ಪಾತ್ರ ಅಗತ್ಯವಾದುದು. ಶಾಲೆಯ ಕಲಿಕೆಯಲ್ಲಿ ಶಿಕ್ಷಕ ಎಷ್ಟು ಜವಾಬ್ದಾರನೋ ಅಷ್ಟೇ ಜವಾಬ್ದಾರಿ ಪಾಲಕರದ್ದಾಗಿದೆ ಎಂದು ಡಾ. ಸತೀಶ ಹೊಂಬಾಳಿ ಹೇಳಿದರು.
ಈಚೆಗೆ ಸ್ಥಳೀಯ ಸಿದ್ದಲಿಂಗ ನಗರದಲ್ಲಿರುವ ಬಸವೇಶ್ವರ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಪಾಲಕರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪಾಲಕರು ಮನೆಯಲ್ಲಿ ಮಕ್ಕಳನ್ನು ದೂರದರ್ಶನದಿಂದ, ಮೊಬೈಲ್ ಬಳಕೆಯಿಂದ, ವಾಹನ ಓಡಿಸುವುದರಿಂದ ದೂರವಿಡಬೇಕು. ಮನೆಯಲ್ಲಿ ಓದುವ ವಾತಾವರಣ ನಿರ್ಮಿಸಬೇಕು. ಜ್ಞಾಪಕಶಕ್ತಿ ಹಾಗೂ ಏಕಾಗ್ರತೆ ಹೆಚ್ಚಿಸಲು ಹಣ್ಣು-ಹಂಪಲ, ತರಕಾರಿ ಮೊಳಕೆಕಾಳು ಮುಂತಾದ ಪೌಷ್ಟಿಕ ಆಹಾರ ಕೊಡಬೇಕು. ಜತೆಗೆ ಪ್ರೀತಿ-ವಿಶ್ವಾಸ, ಭರವಸೆ, ಧೈರ್ಯ ತುಂಬಬೇಕು. ಮಕ್ಕಳು ಕನಿಷ್ಠ 6 ಗಂಟೆ ನಿದ್ದೆ ಮಾಡಬೇಕು ಹಾಗೂ ಮಕ್ಕಳ ಬೆಳವಣಿಗೆಯಲ್ಲಿ ಪಾಲಕರ ಪಾತ್ರ ತುಂಬ ಮಹತ್ವಪೂರ್ಣವಾಗಿದ್ದು, ಈ ಕುರಿತು ಪಾಲಕರು ಹೆಚ್ಚಿನ ಕಾಳಜಿ ವಹಿಸಿ ಮಕ್ಕಳ ಶ್ರೆಯೋಭಿವೃದ್ಧಿಗೆ ಶ್ರಮಿಸುವಂತೆ ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಮುಖ್ಯೋಪಾಧ್ಯಾಯ ಶಿವನಗೌಡ ಗೌಡರ ಪ್ರಾಸ್ತಾವಿಕ ಮಾತನಾಡಿದರು. ಈ ಸಂದರ್ಭದಲ್ಲಿ ಶಾಲಾ ವ್ಯವಸ್ಥಾಪಕ ಎಂ.ಸಿ. ಕಿಣಗಿ ಹಾಗೂ ಆಂಗ್ಲ ಮಾಧ್ಯಮದ ಮುಖ್ಯೋಪಾಧ್ಯಾಯರಾದ ಪ್ರಭಾಕುಮಾರಿ ಬಿ.ಎಂ. ಹಾಗೂ ಪಾಲಕರು ಉಪಸ್ಥಿತರಿದ್ದರು. ಶಿಕ್ಷಕ ಸಿ.ಎಸ್. ಮಾನ್ವಿ ಸ್ವಾಗತಿಸಿದರು. ಎಂ.ಎಸ್. ರಾಮಣ್ಣವರ, ಕೆ.ವಿ. ಕೋರಡ್ಡಿ ನಿರೂಪಿಸಿದರು. ಬಿ.ಕೆ. ನಿಂಬನಗೌಡರ ವಂದಿಸಿದರು.
ಬಿ.ವಿ. ಶೆಲವಡಿ ಆರೋಪ ಸತ್ಯಕ್ಕೆ ದೂರ
ಗದಗ: ಡಿಸೆಂಬರ್ 14, 2013ರಂದು ಪ್ರಕಟವಾದ ವರದಿಯಲ್ಲಿ ಗದಗ ಘಟಕದ ಮಾಜಿ ನಿರ್ವಾಹಕ ಬಿ.ವಿ. ಶೆಲವಡಿ ಎನ್ನುವವರು ಗದಗ ವಿಭಾಗೀಯ ಕಚೇರಿಯ ಸಂಚಲಾನಾಧಿಕಾರಿ ಎಂ.ಎ. ಖಾದ್ರಿ ಎನ್ನುವವರು ನನಗೆ 1 ಸಾವಿರ ಲಂಚ ನೀಡುವಂತೆ ಪೀಡಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಮೊದಲು ಅವರ ಆರೋಪದ ಆಧಾರದಲ್ಲಿಯೇ ಸಂಸ್ಥೆಯ ಭದ್ರತಾ ಶಾಖೆಯಿಂದ ತನಿಖೆ ನಡೆಸಿದ್ದು, ಈ ತನಿಖೆಯಲ್ಲಿ ದೂರುದಾರರ ಆರೋಪ ನಿರಾಧಾರ ಎಂದು ಈಗಾಗಲೇ ಸಾಬೀತಾಗಿದೆ. ಅವರು ಮತ್ತೆ ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಬಿ.ಎನ್. ಗದ್ದಿಕೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.