ಬೋರ್ವೆಲ್, ಚರಂಡಿ ಸ್ವಚ್ಛತೆಗೆ ಆಗ್ರಹಿಸಿ ಪ್ರತಿಭಟನೆ
ಗದಗ: ಬೋರ್ವೆಲ್ ದುರಸ್ತಿಗೊಳಿಸದ ಹಾಗೂ ಚರಂಡಿ ಸ್ವಚ್ಛಗೊಳಿಸದ ನಗರಸಭೆ ಸಿಬ್ಬಂದಿ ಕ್ರಮ ಖಂಡಿಸಿ ಬೆಟಗೇರಿಯ ಕನ್ಯಾಳ ಅಗಸಿಯ ಮಹಿಳೆಯರು ಶುಕ್ರವಾರ ಕನ್ಯಾಳ ಅಗಸಿಯಲ್ಲಿ ಪ್ರತಿಭಟನೆ ನಡೆಸಿದರು. ನಿತ್ಯದ ಬಳಕೆಗಾಗಿ ಅವಶ್ಯವಿರುವ ನೀರು ಒದಗಿಸುತ್ತಿದ್ದ ಬೋರ್ವೆಲ್ ಕೆಟ್ಟು ತಿಂಗಳಾಗುತ್ತ ಬಂದಿದೆ. ಈ ಕುರಿತು ನಗರ ಸಭೆ 6ನೇ ವಾರ್ಡಿನ ಸದಸ್ಯರು ಹಾಗೂ ಅಧಿಕಾರಿಗಳಿಗೆ ತಿಳಿಸಿದರೂ ಯಾರೂ ಸ್ಪಂದಿಸುತ್ತಿಲ್ಲ. ನಿತ್ಯದ ಬಳಕೆಗೆ ಅಗತ್ಯವಾದ ಬೋರ್ವೆಲ್ ನೀರು ದೊರೆಯುವಂತೆ ಮಾಡಲು ತಕ್ಷಣ ಅಧಿಕಾರಿಗಳು ಬೋರ್ವೆಲ್ ದುರಸ್ತಿ ಮಾಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಈ ಭಾಗದಲ್ಲಿ ಚರಂಡಿ ಸ್ವಚ್ಛಗೊಳಿಸದೆ ಚರಂಡಿಗಳಲ್ಲಿ ತಾಜ್ಯ ಸಂಗ್ರಹಗೊಂಡು ದುರ್ವಾಸನೆ ಬೀರುತ್ತಿವೆ. ಸೊಳ್ಳೆಗಳ ಹಾವಳಿ ಹೆಚ್ಚಿದೆ. ಇದರಿಂದ ಭಯಾನಕ ರೋಗಗಳು ಹರಡುವ ಭೀತಿ ಎದುರಾಗಿದೆ ಎಂದು ದೂರಿದ ಪ್ರತಿಭಟನಾ ನಿರತ ಮಹಿಳೆಯರು ತಕ್ಷಣ ಚರಂಡಿ ಸ್ವಚ್ಛಗೊಳಿಸಲು ಒತ್ತಾಯಿಸಿದರು.