ಮೂಲಸೌಕರ್ಯ ವಂಚಿತ ವಸತಿ ನಿಲಯ
ಡಿ.ಜಿ. ಮೋಮಿನ್
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಜ. 11
ಸಮೀಪದ ರಾಜೂರ ಗ್ರಾಮ ಹಿಂದುಳಿದ ಸಮುದಾಯ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಬೇಕಾದ ವಸತಿ ನಿಲಯ ಮಕ್ಕಳ ಪಾಲಿಗೆ ಜೈಲುವಾಸವಾಗಿದೆ. ಮಲಗಲು ಹರಿದಿರುವ ಬೆಡ್, ತುಕ್ಕು ಹಿಡಿದು ಯಾವಾಗಲಾದರು ಮುರಿದು ಬೀಳುವ ಮಂಚ, ಊಟಕ್ಕೆ ಮನೆಯ ಪ್ಲೇಟು, ಓದಲು ಮನಸ್ಸು ಬಾರದ ಪರಿಸರ ಜತೆ ಹಲವಾರು ಮೂಲಭೂತ ಸಮಸ್ಯೆಯಿಂದ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.
ಗ್ರಾಮೀಣ ಪ್ರದೇಶದ ಹಿಂದುಳಿದ ಮಕ್ಕಳಿಗೆ ಬಡತನವೇ ಶೈಕ್ಷಣಿಕ ಪ್ರಗತಿಗೆ ಮಾರಕವಾಗಬಾರದು ಎಂದು ಸರ್ಕಾರ ಕೋಟ್ಯಂತರ ಅನುದಾನ ವೆಚ್ಚ ಮಾಡುತ್ತಿದೆ. ಆದರೆ, ಅಂಥ ಯೋಜನೆ ಸರಿಯಾಗಿ ಅರ್ಹ ಫಲಾನುಭವಿಗಳಿಗೆ ತಲುಪಿಲ್ಲ ಎಂಬುದಕ್ಕೆ ಈ ಹಾಸ್ಟೆಲ್ ಸಾಕ್ಷಿಯಾಗಿದೆ. ಈ ವಸತಿ ನಿಲಯದ ವ್ಯವಸ್ಥೆ ಬಗ್ಗೆ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಪಾಲಕರು ದೂರಿದ್ದಾರೆ.
ಮಕ್ಕಳ ಮನದಲ್ಲಿ ಬೇರೂರಿದ ಆತಂಕ:ಗ್ರಾಮೀಣ ಮಕ್ಕಳು ಶೈಕ್ಷಣಿಕವಾಗಿ ಮುಂಚೂಣಿ ಸಾಧಿಸುವ ಮಹೋನ್ನತ ಉದ್ದೇಶದಿಂದ ಸೂಡಿಯಲ್ಲಿ ನಿರ್ಮಿಸುತ್ತಿರುವ ಹಿಂದುಳಿದ ವಿದ್ಯಾರ್ಥಿಗಳ ವಸತಿ ನಿಲಯದ ವಿದ್ಯಾರ್ಥಿಗಳು ಶೋಷಣೆಗೆ ಒಳಗಾಗಿದ್ದಾರೆ.
ಗ್ರಾಮದ ಭೀಮಾಂಬಿಕೆ ಓಣಿಯಲ್ಲಿ ಸಮಾಜ ಕಲ್ಯಾಣ ಇಲಾಖೆ ಸುಪರ್ದಿಯ ಸರ್ಕಾರಿ ಸಾರ್ವಜನಿಕ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಬೆಳಗ್ಗೆ 5ಕ್ಕೆ ಗ್ರಾಮದ ಶಿವಪ್ಪ ಭೂಮದ ವಸತಿ ನಿಲಯಕ್ಕೆ ಸಿಮೆಂಟ್ ಕಳ್ಳತಕ್ಕೆ ಬಂದಿದ್ದಾನೆ. ವಸತಿ ನಿಲಯ ಕೊಠಡಿಯಲ್ಲಿ ಇಡಲಾದ ಸಿಮೆಂಟ್ ತೆಗೆದುಕೊಂಡು ಹೋಗುವಾಗ ಇದೇ ವಸತಿ ನಿಲಯದ ವಿದ್ಯಾರ್ಥಿ ಮಂಜುನಾಥ ಮೂರಮನಿ ಎಂಬುವನಿಗೆ ಎಚ್ಚರವಾಗಿದೆ. ಇದನ್ನು ಪ್ರಶ್ನಿಸಿದಕ್ಕೆ ಅವನಿಗೆ ಗದರಿಸಿ ಅವನ ಮೇಲೆ ಗಾದಿ ಎಸೆದು ಪರಾರಿಯಾಗಿದ್ದಾನೆ.
ಹೋಗುವಾಗ ಇದೇ ವಸತಿ ನಿಲಯದ 10ನೇ ತರಗತಿ ವಿದ್ಯಾರ್ಥಿ ಅಮರೇಶನಿಂದ ಹೆದರಿಸಿ ಸೈಕಲ್ ಪಡೆದು ಅದೇ ಸೈಕಲ್ನಿಂದ ಸಿಮೆಂಟ್ ಹೊತ್ತುಕೊಂಡು ಹೋಗಿದ್ದಾನೆ. ಬೆಳಗ್ಗೆ ಗ್ರಾಮದ ಕೆಲ ಹಿರಿಯರು ಸೇರಿ ಕಳ್ಳನಿಂದ ಮರಳಿ ಸಿಮೆಂಟ್ ಪಡೆದಿದ್ದಾರೆ. ಈ ಘಟನೆಯಲ್ಲಿ ಏನಾದರೂ ಅಹಿತಕರ ಘಟನೆ ನಡೆದಿದ್ದರೆ ಯಾರು ಹೊಣೆ.. ಎಂದು ಸಾರ್ವಜನಿಕರ ಅಳಲಾಗಿದೆ. ಇದಕ್ಕೂ ಮೊದಲು ಕಳ್ಳನು ಹಾಸ್ಟೆಲ್ಗೆ ಬಂದು ಹೋಗುತ್ತಿದ್ದನು.
ವಸತಿ ನಿಲಯ ವಿದ್ಯಾರ್ಥಿಗಳಿಗೆ ಓದಿ ಎಂದು ಬಡಿದು ಹೋಗುತ್ತಿದ್ದನು. ಅಡುಗೆ ಸಿಬ್ಬಂದಿಗೆ ಊಟ ಸರಿಯಾಗಿಲ್ಲ. ನಿಮ್ಮನ್ನ ಕಿತ್ತೊಗೆಯುತ್ತೇನೆ ಎಂದು ಹೆದರಿಸುತ್ತಿದ್ದನು.
ಇಂತಹ ಪ್ರಕರಣಗಳು ಜರಗುತ್ತಿದ್ದರೂ ಸಹ ಇಲ್ಲಿನ ಸಿಬ್ಬಂದಿ ವರ್ಗ ಹಗುರವಾಗಿ ಪರಗಣಿಸಿದೆ. ಕೂಡಲೇ ಆರೋಪಿಗೆ ಶಿಕ್ಷೆಯಾಗಬೇಕು. ಇಂತಹ ಘಟನೆ ಮರುಕಳಿಸದಂತೆ ನೋಡಿಕೊಂಡು ಕಾವಲುಗಾರನನ್ನು ನೇಮಿಸಿ ವಿದ್ಯಾರ್ಥಿಗಳಿಗೆ ರಕ್ಷಣೆ ಒದಗಿಸಬೇಕು. ಅಂದಾಗ ಮಾತ್ರ ವಿದ್ಯಾರ್ಥಿಗಳು ಇಲ್ಲಿ ನೆಮ್ಮದಿಯಿಂದ ಇರಲು ಸಾಧ್ಯ ಎಂಬುದು ಸ್ಥಳೀಯ ನಿವಾಸಿಗಳ ಅಭಿಪ್ರಾಯ.
ರಾಜೂರ ಗ್ರಾಮದ ಹಾಸ್ಟೆಲ್ ಕಟ್ಟಡ ಕಾಮಗಾರಿಗೆ ಬಳಸುವ ಸಿಮೆಂಟ್ ಚೀಲ ಕಳವು ಮಾಡಿರುವ ಕಳ್ಳನು ವಸತಿ ನಿಲಯ ಬಾಲಕರಿಗೆ ಪ್ರಾಣ ಬೆದರಿಕೆ ಹಾಕಿರುವ ಪ್ರಕರಣ ನಡೆದಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಅಡಗಿರುವ ಆತಂಕ ದೂರ ಮಾಡಲು ಯಾರೂ ಮುಂದಾಗಿಲ್ಲ.
- ಕಳಕೇಶ ಉಕ್ಕಿಸಲ, ಸಿಪಿಐ(ಎಂ) ಮುಖಂಡ
ವಸತಿ ಶಾಲೆಯಲ್ಲಿನ ಸಮಸ್ಯೆ ಕುರಿತು ಈಗಾಗಲೇ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಕೂಡಲೇ ಮಕ್ಕಳ ಶ್ರೇಯೋಭಿವೃದ್ಧಿಗೆ ಅನುಕೂಲ ಆಗುವಂತೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು.
- ಎಲ್.ಪಿ. ಅಂಗಡಿ, ಹಾಸ್ಟೆಲ್ ವಾರ್ಡನ್