ಯುವಜನತೆಗೆ ಬದುಕು ಕಟ್ಟಿಕೊಡಲು ಬದ್ಧ
ಕನ್ನಡಪ್ರಭ ವಾರ್ತೆ, ಗದಗ, ಜ. 12
ಪಟ್ಟಣಕ್ಕೆ ಒಲಸೆ ಹೋಗುತ್ತಿರುವ ಯುವಜನತೆಯನ್ನು ಮರಳಿ ಹಳ್ಳಿಗೆ ಬರುವ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶಗಳನ್ನು ಅಭಿವೃದ್ಧಿಪಡಿಸಿ ಯುವ ಜನತೆಗೆ ಸ್ವಾವಲಂಬಿ ಬದುಕನ್ನು ಕಟ್ಟಿಕೊಡಲು ಸರ್ಕಾರ ಮುಂದಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ತಾಲೂಕಿನ ಹುಲಕೋಟಿ ಗ್ರಾಮದಲ್ಲಿ ಭಾನುವಾರ ಕೆ.ಎಚ್.ಪಾಟೀಲ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡ ಉದ್ಘಾಟನೆಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಯುವಜನತೆಯ ಸ್ವಾವಲಂಬಿ ಬದುಕಿಗಾಗಿ ಮೂಲ ಸೌಕರ್ಯ ಒದಗಿಸುವ ಜತೆಗೆ ಅವರಿಗೆ ತರಬೇತಿ, ಉದ್ಯೋಗ ಸೃಷ್ಟಿ ಸೇರಿದಂತೆ ಇನ್ನಿತರ ಕಾರ್ಯಕ್ರಮದ ಮೂಲಕ ಯುವಜನತೆಯನ್ನು ಹಳ್ಳಿಯತ್ತ ಸೆಳೆಯಲಾಗುವುದು. ಗ್ರಾಮೀಣಾಭಿವೃದ್ಧಿ ಇಲಾಖೆಯ ಮೂಲಕ ಗ್ರಾಮೀಣ ಪ್ರದೇಶಗಳನ್ನು ತ್ಯಾಜ್ಯಮುಕ್ತ, ಋಣಮುಕ್ತ, ಬಯಲು ಬಹಿರ್ದೆಸೆ ಮುಕ್ತವಾಗಿ ಮಾಡಬೇಕೆಂಬ ಸಂಕಲ್ಪ ತೊಟ್ಟಿದ್ದು, ಹುಲಕೋಟಿಯ ಮಾದರಿಯಲ್ಲಿ ರಾಜ್ಯದ ಪ್ರತಿ ಗ್ರಾಮವನ್ನು ಅಭಿವೃದ್ಧಿಪಡಿಸಲು ಕ್ರಮಕೈಗೊಳ್ಳಲಾಗುವುದು. ಸಾರ್ವಜನಿಕ ಬದುಕಿಗೆ ಅತ್ಯವಶ್ಯವಾಗಿ ಬೇಕಾಗುವ ಯೋಜನೆಗಳ ಅನುಷ್ಠಾನ ಶೀಘ್ರಗತಿಯಲ್ಲಿ ನಡೆಯಬೇಕು ಎಂದರು. ನೂತನ ಆರೋಗ್ಯ ಕೇಂದ್ರ ಉದ್ಘಾಟಿಸಿದ ಯುವಜನ ಸೇವಾ ಮತ್ತು ಕ್ರೀಡಾ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ಪ್ರತಿಯೊಬ್ಬರೂ ಅವಕಾಶಕ್ಕಾಗಿ ಬೆನ್ನುಹತ್ತದೆ, ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಅಂದಾಗ ಮಾತ್ರ ಅವಕಾಶಗಳು ತಮ್ಮನ್ನು ಹುಡುಕುತ್ತಾ ಬರುತ್ತವೆ. ದಿ. ಕೆ.ಎಚ್.ಪಾಟೀಲರು ರಾಜಕೀಯ, ಸಾಮಾಜಿಕ, ಸಹಕಾರಿ, ಶಿಕ್ಷಣ, ಕೃಷಿ ಕ್ಷೇತ್ರಗಳಲ್ಲಿ ಹಲವಾರು ಚಿಂತನೆಗಳ ಮೂಲಕ ಹೊಸ ಬದುಕನ್ನು ಕಟ್ಟಿಕೊಂಡವರು. ಅಂತಹವರ ಹೆಸರಿನಲ್ಲಿ ಆರೋಗ್ಯ ಕೇಂದ್ರ ಸ್ಥಾಪನೆ ನಿಜಕ್ಕೂ ಶ್ಲಾಘನೀಯವಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಂಡು ಉತ್ತಮ ಆರೋಗ್ಯದ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕಾಗಿ ಕೈಜೋಡಿಸಬೇಕು ಎಂದರು. ಮಾಜಿ ಶಾಸಕ ಡಿ.ಆರ್. ಪಾಟೀಲ, ಜಿಪಂ ಅಧ್ಯಕ್ಷೆ ಕಮಲಮ್ಮ ಸಜ್ಜನರ, ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ, ಜಿಪಂ ಸಿಇಒ ವೀರಣ್ಣ ತುರಮರಿ, ರಾಜ್ಯ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ವಸಂತ ಲದ್ವಾ, ತಾಪಂ ಅಧ್ಯಕ್ಷ ಹನುಮಪ್ಪ ಇಂಗಳಹಳ್ಳಿ, ಜಿಪಂ ಸದಸ್ಯ ರೇವಣೆಪ್ಪ ಕೊಂಡಿಕೊಪ್ಪ, ಎಪಿಎಂಸಿ ಉಪಾಧ್ಯಕ್ಷ ಸಿದ್ದಲಿಂಗೇಶ್ವರಗೌಡ ಪಾಟೀಲ, ತಾಪಂ ಸದಸ್ಯೆ ವಿಜಯಲಕ್ಷ್ಮಿ ತಮ್ಮನಗೌಡರ, ಗ್ರಾಪಂ ಅಧ್ಯಕ್ಷ ಸಿ.ಬಿ. ಕರಿಕಟ್ಟಿ, ಉಪಾಧ್ಯಕ್ಷೆ ಪರಶುರಾಮ ಕೋರಿ, ಡಾ. ಎಸ್.ಆರ್. ನಾಗನೂರ, ಡಾ. ಪುಷ್ಪಾ ಕುರ್ತಕೋಟಿ ಮುಂತಾದವರು ಇದ್ದರು. ಮಳಲಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಡಿಎಚ್‌ಒ ಡಾ. ಡಿ.ಬಿ. ಚನ್ನಶೆಟ್ಟಿ ಸ್ವಾಗತಿಸಿದರು. ಕೆ.ಬಿ. ತಳಗೇರಿ ನಿರೂಪಿಸಿದರು. ಡಾ. ವೈ.ಕೆ. ಭಜಂತ್ರಿ ವಂದಿಸಿದರು.