ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ರಾಜ್ಯ ಸರ್ಕಾರ ವಿಫಲ: ನಾಗೇಂದ್ರ

Lingaraj Badiger
Updated On : 13 Jan 2014, 12:47 pm

ಕನ್ನಡಪ್ರಭ ವಾರ್ತೆ, ಗದಗ, ಜ. 12
ರಾಜ್ಯದ ಕೊಳಚೆ ಪ್ರದೇಶಗಳಲ್ಲಿ ವಾಸಿಸುವ 40 ಲಕ್ಷ ಜನರ ಹಿತ ಕಾಯುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ರಾಜ್ಯ ಬಿಜೆಪಿ ಸ್ಲಂಮೋರ್ಚಾ ಅಧ್ಯಕ್ಷ ಎಲ್. ನಾಗೇಂದ್ರ ಹೇಳಿದರು.
ಅವರು ಭಾನುವಾರ ನಗರದ ವೀರೇಶ್ವರ ಪುಣ್ಯಾಶ್ರಮದ ಸಭಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ರಾಜ್ಯದಲ್ಲಿ 2300 ಘೋಷಿತ ಹಾಗೂ 422 ಅಘೋಷಿತ ಸೇರಿದಂತೆ ಒಟ್ಟು 2722 ಕೊಳಚೆ ಪ್ರದೇಶಗಳಿದ್ದು, ಇಲ್ಲಿ ಅತ್ಯಂತ ಕನಿಷ್ಠ ಮೂಲಭೂತ ಸೌಲಭ್ಯಗಳ ಕೊರತೆಯ ಮಧ್ಯೆ ಜನರು ನಿಕೃಷ್ಟ ಬದುಕು ಸಾಗಿಸುತ್ತಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿ ಸದಾನಂದಗೌಡ ಅವರ ಅಧಿಕಾರಾವಧಿಯಲ್ಲಿ ರಾಜ್ಯದ ಸ್ಲಂಗಳ ಅಭಿವೃದ್ಧಿಗಾಗಿ ರು. 75 ಕೋಟಿ ಬಿಡುಗಡೆಗೊಳಿಸಲಾಗಿತ್ತು. ಆದರೆ ಕಳೆದ 8 ತಿಂಗಳುಗಳಿಂದ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಪ್ರಾರಂಭಿಸದೇ ಇರುವುದು ವಿಷಾದಕರ ಸಂಗತಿಯಾಗಿದೆ. ಕೇವಲ ಕೆಲವೇ ವರ್ಗದ ಜನರನ್ನು ಓಲೈಕೆ ಮಾಡುವಲ್ಲಿ ತೊಡಗಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಸರ್ಕಾರ ಕೆಲ ವರ್ಗಗಳ ಸಾಲ ಬಡ್ಡಿ ಮನ್ನಾ ಮಾಡಿದ್ದು, ಬಡ ಜನರ ಬಗ್ಗೆ ನೈಜ ಕಾಳಜಿ ಇದ್ದಲ್ಲಿ ಸ್ಲಂ ನಿವಾಸಿಗಳ ಸುಮಾರು ರು. 65 ಕೋಟಿ ಸಾಲ ಮನ್ನಾಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಿ. ಇದೂವರೆಗೂ ರಾಜ್ಯದ ಕೊಳಚೆ ನಿವಾಸಿಗಳಿಗೆ ಶಿವಮೊಗ್ಗ ಹೊರತುಪಡಿಸಿ ಇನ್ನುಳಿದ ಕಡೆಗಳಲ್ಲಿ ಹಕ್ಕುಪತ್ರಗಳ ವಿತರಣೆಯಾಗಿಲ್ಲ. ತಕ್ಷಣ ಹಕ್ಕುಪತ್ರ ವಿತರಣೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕಿದೆ. ರಾಜ್ಯದಲ್ಲಿ ಸ್ವಾತಂತ್ರ್ಯಾ ನಂತರ 33 ವರ್ಷಗಳ ಅಧಿಕಾರದಲ್ಲಿ ಕೊಳಚೆ ಪ್ರದೇಶಗಳಲ್ಲಿ 62238 ಮನೆಗಳನ್ನು ನಿರ್ಮಿಸಲಾಗಿದ್ದು, ಬಿಜೆಪಿಯ ಕಳೆದ 5 ವರ್ಷಗಳ ಅಧಿಕಾರಾವಧಿಯಲ್ಲಿ 41745 ಮನೆಗಳನ್ನು ಕಟ್ಟಲಾಗಿದೆ. ಕಾಂಗ್ರೆಸ್ ಸರ್ಕಾರದ ಈ ದಿವ್ಯ ನಿರ್ಲಕ್ಷ್ಯ ವಿರೋಧಿಸಿ ಫೆ. ಅಂತ್ಯದವರೆಗೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ತಾಲೂಕು ಮಟ್ಟದಲ್ಲಿ ಪ್ರತಿಭಟನೆ ಕೈಗೊಳ್ಳಲಾಗುತ್ತಿದೆ. ನಂತರ ಮಾರ್ಚ್ ಮೊದಲ ವಾರದಲ್ಲಿ ರಾಜ್ಯದ ಎಲ್ಲ ಕೊಳಚೆ ನಿವಾಸಿಗಳನ್ನು ಬೆಂಗಳೂರಿನಲ್ಲಿ ಸೇರಿಸುವ ಮೂಲಕ ಬೃಹತ್ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದರು. ರಾಜ್ಯ ಉಪಾಧ್ಯಕ್ಷ ಎ.ಎಂ. ಸಂಜಯ, ರಾಜ್ಯ ಕಾರ್ಯದರ್ಶಿ ವೀರೇಶ ಅಂಚಟಗೇರಿ, ವಾಕರಾರಸ ಸಂಸ್ಥೆಯ ಮಾಜಿ ಅಧ್ಯಕ್ಷ ಎಂ.ಎಸ್. ಕರಿಗೌಡ್ರ, ಜಿಲ್ಲಾ ಘಟಕದ ಅಧ್ಯಕ್ಷ ಅರವಿಂದ ಹುಲ್ಲೂರ, ಶ್ರೀನಿವಾಸ ಹುಬ್ಬಳ್ಳಿ, ಹನುಮಂತಪ್ಪ ಅಳವಂಡಿ, ಮಹೇಶ ಕೋಟಿ, ಚಂದ್ರಕಾಂತ ವರ್ಣೇಕರ ಮುಂತಾದವರು ಉಪಸ್ಥಿತರಿದ್ದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement