ಅಗಸ್ತ್ಯ ತೀರ್ಥದಲ್ಲಿ ಭಕ್ತರಿಂದ ಪುಣ್ಯಸ್ನಾನ
ಲಕ್ಷ್ಮೇಶ್ವರ: ಪಟ್ಟಣದ ಐತಿಹಾಸಿಕ ಪ್ರಸಿದ್ಧ ಅಗಸ್ತ್ಯ ತೀರ್ಥ ಕ್ಷೇತ್ರದಲ್ಲಿ ಅಗಸ್ತ್ಯ ಮುನಿಗಳು ತಪಸ್ಸು ಮಾಡಿ ಶಿವಲಿಂಗವನ್ನು ಪ್ರತಿಷ್ಠಾಪನೆ ಮಾಡಿದ್ದರೆಂದು ಐತಿಹಾಸಿಕ ಪ್ರತೀತಿ. ಈ ಅಗಸ್ತ್ಯ ತೀರ್ಥ ಪುಣ್ಯಕ್ಷೇತ್ರದ ಮುಂದಿನ ಹೊಂಡದಲ್ಲಿ ಸಂಕ್ರಾಂತಿಯಂದು ಸ್ನಾನ ಮಾಡಿದರೆ, ನಮ್ಮ ಪಾಪ ಕರ್ಮದೂರಾಗುವವು ಹಾಗೂ ಚರ್ಮ ರೋಗ ವಾಸಿಯಾಗುವವು ಎಂಬ ನಂಬಿಕೆ ಇರುವ ಹಿನ್ನೆಲೆಯಲ್ಲಿ ಸಾವಿರಾರು ಭಕ್ತರು ಮಂಗಳವಾರ ಸಂಕ್ರಾಂತಿಯಂದು ಪುಣ್ಯಸ್ನಾನ ಮಾಡಿ ಪುನೀತರಾದರು. ಪಟ್ಟಣದ ಆಗ್ನೇಯ ದಿಕ್ಕಿನಲ್ಲಿರುವ ಈ ಪುಣ್ಯ ಕ್ಷೇತ್ರದಲ್ಲಿ ಅಗಸ್ತ್ಯ ಮಹಾ ಮುನಿಗಳು ಕೆಲ ಕಾಲ ಇಲ್ಲಿ ತಂಗಿ ತಪಸ್ಸನ್ನು ಮಾಡಿ ಶಿವಲಿಂಗವನ್ನು ಸ್ಥಾಪನೆ ಮಾಡಿದ್ದರೆಂದು, ನಂತರ ಚಾಲುಕ್ಯರ ಕಾಲದಲ್ಲಿ ಈ ದೇವಾಲಯಕ್ಕೆ ದಾನ, ಧರ್ಮಗಳನ್ನು ಮಾಡಿ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿದ್ದಾರೆ ಎನ್ನುವ ಬಗ್ಗೆ ಇಲ್ಲಿರುವ ಐತಿಹಾಸಿಕ ಶಾಸನಗಳಿಂದ ತಿಳಿಯುತ್ತದೆ. ಅಗಸ್ತ್ಯ ತೀರ್ಥ ಕ್ಷೇತ್ರದ ಶಿವಲಿಂಗ ದೇವಸ್ಥಾನದ ಪಕ್ಕದಲ್ಲಿ ಇರುವ ಇನ್ನೊಂದು ಗುಡಿಯು ಅಣ್ಣ ತಂಗಿಯ ಗುಡಿಯಾಗಿದ್ದು, ಈ ದೇವಸ್ಥಾನದ ಇತಿಹಾಸವು ಬಹಳಷ್ಟು ರೋಚಕವಾಗಿದೆ. ಈ ದೇವಸ್ಥಾನದ ಒಳಗಡೆ ಇರುವ ಮೂರ್ತಿಗಳು ಅಚ್ಚರಿಗೆ ಕಾರಣವಾಗಿವೆ. ಏಕೆಂದರೆ ದೇವರ ಮೂರ್ತಿಗಳು ಇರಬೇಕಾದ ಜಾಗದಲ್ಲಿ ಹಿಂದೂ ಸಂಪ್ರದಾಯದ ಮೌಲ್ಯ ಎತ್ತಿ ಹಿಡಿಯುವ ಅಣ್ಣ ತಂಗಿಯರ ಮೂರ್ತಿಗಳು ಇರುವುದು ವಿಶೇಷ. ಏಕ ಶಿಲೆಯಲ್ಲಿ ಕೆತ್ತಿರುವ ಮೂರ್ತಿಗಳು ಅಣ್ಣ ಹಾಗೂ ತಂಗಿಯರದ್ದಾಗಿವೆ.
ದೇವಸ್ಥಾನದ ಇತಿಹಾಸ: ಒಮ್ಮೆ ಅಣ್ಣನು ತನ್ನ ತಂಗಿಯನ್ನು ಯಾವುದೋ ಕಾರಣಕ್ಕಾಗಿ ಕಾಲಿನಿಂದ ಒದ್ದು ಅವಮಾನ ಪಡಿಸಿದ್ದನೆಂದು, ಕೆಲ ದಿನಗಳ ನಂತರ ತಂಗಿಯನ್ನು ಒದ್ದ ಅಣ್ಣನ ಕಾಲಿನಲ್ಲಿ ಹುಳು ಬಿದ್ದು ಹಾಸಿಗೆ ಹಿಡಿಯುತ್ತಾನೆ. ಅಣ್ಣನಿಗೆ ತಾನು ಮಾಡಿದ ತಪ್ಪಿನ ಅರಿವಾಗಿ ತಂಗಿಯಲ್ಲಿ ಕ್ಷಮೆಯಾಚಿಸುತ್ತಾನೆ. ನಂತರ ತಂಗಿಯು ಅಣ್ಣನ ಕಾಲಿನಲ್ಲಿರುವ ಹುಳುಗಳನ್ನು ತೆಗೆದು ಅಣ್ಣನ ರೋಗವನ್ನು ಗುಣಪಡಿಸಿದಳು ಎಂಬ ನೀತಿ ಇಲ್ಲಿನ ಮೂರ್ತಿಗಳದ್ದಾಗಿದೆ.
ಅಶೋಕ ಸೊರಟೂರ