ರೋಣ: ಫೆಬ್ರವರಿಯಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ
ರೋಣ: ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿಣಿ ಸಭೆ ಸೇರಿ ಜಿಲ್ಲಾ 6ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಫೆಬ್ರವರಿ ಮೊದಲ ವಾರ ರೋಣ ಪಟ್ಟಣದಲ್ಲಿ ನಡೆಸಲು ಸರ್ವಾನುಮತದಿಂದ ತೀರ್ಮಾನ ಕೈಗೊಳ್ಳಲಾಯಿತು.
ಸಭೆಯಲ್ಲಿ ಮಾತನಾಡಿದ ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಡಾ. ಶಿವಪ್ಪ ಕುರಿ, ಗದಗ ಜಿಲ್ಲೆಯಾದ ನಂತರ 5 ಸಮ್ಮೇಳನಗಳು ವಿವಿಧ ಸ್ಥಳಗಳಲ್ಲಿ ಯಶಸ್ವಿಯಾಗಿ ನಡೆದಿದ್ದು, 6ನೇ ಸಮ್ಮೇಳನ ಜಿಲ್ಲೆಯ ರೋಣ ಪಟ್ಟಣದಲ್ಲಿ ಅದ್ಧೂರಿಯಾಗಿ ಹಾಗೂ ಅರ್ಥಪೂರ್ಣವಾಗಿ ನಡೆಸಲಾಗುವುದು. ಸಮ್ಮೇಳನದ ಉದ್ಘಾಟನೆಯನ್ನು ನೆರವೇರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಆಹ್ವಾನಿಸುವಂತೆ, ಜನವರಿ 15 ರಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲರು, ರೋಣ ಶಾಸಕರು ಹಾಗೂ ಸ್ವಾಗತ ಸಮಿತಿ ಅಧ್ಯಕ್ಷರಾದ ಜಿ.ಎಸ್. ಪಾಟೀಲರ ನೇತೃತ್ವದಲ್ಲಿ ಕಸಾಪ ಪದಾಧಿಕಾರಿಗಳೊಂದಿಗೆ ಭೇಟಿ ಮಾಡಿ ಸಮ್ಮೇಳನ ದಿನಾಂಕ ನಿಗದಿಗೊಳಿಸಲು ತೀರ್ಮಾನಿಸಲಾಯಿತು ಎಂದರು.
ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಲು ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳ, ಸಂಘಸಂಸ್ಥೆಗಳ ಪದಾಧಿಕಾರಿಗಳ, ಕಸಾಪ ಗೌರವಾನ್ವಿತ ಸದಸ್ಯರು, ಕನ್ನಡ ಪರ ಸಂಘಟನೆಗಳ, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ನೌಕರರ ಸಂಘಟನೆಗಳ ಪದಾಧಿಕಾರಿಗಳ, ಹಿರಿಯ ಸಾಹಿತಿಗಳ, ಕನ್ನಡಾಭಿಮಾನಿಗಳ ಸಹಕಾರ ಕೋರಲಾಗುವುದು. ಸಾಹಿತ್ಯ ಸಮ್ಮೇಳನದ ಗೋಷ್ಠಿಗಳಿಗೆ ನಾಡಿನ ಪ್ರಖ್ಯಾತ ಸಾಹಿತಿಗಳನ್ನು ಆಹ್ವಾನಿಸುವುದು. ಜಿಲ್ಲೆಯಲ್ಲಿರುವ ಕವಿಗಳಿಗೆ, ವಿದ್ವಾಂಸರಿಗೆ, ವಿಮರ್ಶಕರಿಗೆ, ಶಿಕ್ಷಣ ತಜ್ಞರಿಗೆ, ಸಾಮಾಜಿಕ ಚಿಂತಕರಿಗೆ ಹಾಗೂ ಕಲಾವಿದರನ್ನು ಆಹ್ವಾನಿಸಲು ನಿರ್ಣಯಿಸಲಾಯಿತು. ಜಿಲ್ಲೆಯಲ್ಲಿರುವ ಉಳಿದ ನಾಲ್ಕು ತಾಲೂಕುಗಳ ಸಮ್ಮೇಳನಗಳನ್ನು ಮಾರ್ಚ್ ತಿಂಗಳೊಳಗಾಗಿ ನಡೆಸುವುದು, ಜಿಲ್ಲೆಯ ವಿವಿಧ ಮಹನೀಯರ ದತ್ತಿ ಉಪನ್ಯಾಸ ಕಾರ್ಯಕ್ರಮಗಳನ್ನು ನಡೆಸುವುದು, ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯದಲ್ಲಿಯೇ ವಿನೂತನವಾಗಿ ಜಾರಿಗೆ ತಂದಿರುವ ಶನಿವಾರ ಸಾಹಿತ್ಯ ಸಂಜೆ, ಪಂಚಾಯತಿ ಸಾಂಸ್ಕೃತಿಕ ಸೌರಭ, ಶಾಲಾ-ಕಾಲೇಜು ಸಾಹಿತ್ಯ ಸಿಂಚನ ಕಾರ್ಯಕ್ರಮಗಳ ಯಶಸ್ಸಿಗಾಗಿ ಶ್ರಮಿಸಲು ನಿರ್ಧರಿಸಲಾಯಿತು.