ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಗ್ಯಾಸ್ ಬೆಲೆ ಏರಿಕೆ: ಪ್ರತಿಭಟನೆ

Lingaraj Badiger
Updated On : 16 Jan 2014, 10:57 am

ಕನ್ನಡಪ್ರಭ ವಾರ್ತೆ, ಮುಂಡರಗಿ, ಜ. 15
ಕೇಂದ್ರದ ಯುಪಿಎ ಸರ್ಕಾರ ಪದೇ ಪದೇ ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆ ಮಾಡುವ ಮೂಲಕ ಜನ ಸಾಮಾನ್ಯರ ಮೇಲೆ ಹೊರೆ ಮಾಡುತ್ತಿದ್ದು, ಕೂಡಲೇ ಸರ್ಕಾರ ಇವುಗಳ ಬೆಲೆ ಕಡಿಮೆಗೊಳಿಸಬೇಕು ಎಂದು ತಾಲೂಕು ಕನ್ನಡ ಜನಾಭಿವೃದ್ಧಿ ವೇದಿಕೆ ವತಿಯಿಂದ ಪ್ರತಿಭಟನೆ ಜರುಗಿಸಿ, ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಂಜುನಾಥ ಇಟಗಿ ಮಾತನಾಡಿ, ತಮ್ಮ ಅಲ್ಪ ದುಡಿಮೆಯಲ್ಲಿ ಜೀವನ ಸಾಗಿಸುತ್ತಿರುವ ಆಟೋ ಚಾಲಕರ ಗ್ಯಾಸ್ ಸಿಲಿಂಡರ್ ದರವನ್ನು ಹೆಚ್ಚಳ ಮಾಡಿದ್ದು, ಅದರಂತೆ ಅನೇಕ ದಿನಬಳಕೆ ವಸ್ತುಗಳು ಬಡವರ ಹಾಗೂ ಸಾಮಾನ್ಯ ಜನರ ಕೈಗೆಟುಕದಂತಾಗಿದೆ.
ಆದ್ದರಿಂದ ಕೇಂದ್ರ ಸರ್ಕಾರ ಕೂಡಲೇ ಬೆಲೆ ಏರಿಕೆಯನ್ನು ಹಿಂಪಡೆಯುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದರು. ಕನ್ನಡ ಜನಾಭಿವೃದ್ಧಿ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ದೇವಪ್ಪ ಇಟಗಿ, ಯುವಸೇವಾ ಸಂಘದ ಅಧ್ಯಕ್ಷ ಪವನ್‌ಚೋಪ್ರಾ, ತಾಲೂಕು ಕನ್ನಡ ಜನಾಭಿವೃದ್ಧಿ ವೇದಿಕೆ ಅಧ್ಯಕ್ಷ ಮಂಜುನಾಥ ಕಟ್ಟಿಮನಿ ಮಾತನಾಡಿದರು. ಸಂತೋಷ ಹಿರೇಮನಿ, ಮಜ್ಜೂರೇಶ ಪೂಜಾರ, ಶಿವಾನಂದ ದೊಡ್ಡಮನಿ, ಪ್ರವೀಣ ವಡ್ಡಟ್ಟಿ, ಹನುಮಂತ ಹದಗಾರ, ಮಾರುತಿ ಕವಲೂರ, ಮಲ್ಲು ಬಂಡಿವಡ್ಡರ, ನಾಗರಾಜ ಮುರುಡಿ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.
--
ಸರ್ಕಾರದ ಯೋಜನೆ ಸದುಪಯೋಗವಾಗಲಿ
ರೋಣ: ದೇಶದ ಪ್ರಗತಿ ಮತ್ತು ಭವಿಷ್ಯದ ಜೀವನ ಉಜ್ವಲಕ್ಕಾಗಿ ಸತತ ಅಧ್ಯಯನಶೀಲತೆ ಅತ್ಯಗತ್ಯವಾಗಿದ್ದು, ಆ ದಿಸೆಯಲ್ಲಿ ವಿದ್ಯಾರ್ಥಿಗಳು ಶ್ರಮವಹಿಸಿ ಸಾಧನೆ ಮಾಡಬೇಕು. ಶಿಕ್ಷಣದ ಉನ್ನತಿಗೆ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳ ಸದುಪಯೋಗವಾಗಬೇಕು ಎಂದು ಕಾಂಗ್ರೆಸ್ ಯುವ ಮುಖಂಡ ಮಿಥುನ್ ಪಾಟೀಲ ಹೇಳಿದರು.  ಅವರು ಈಚೆಗೆ ಪಟ್ಟಣದ ನೀರಾವರಿ ಕಾಲೋನಿ ಹತ್ತಿರವಿರುವ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಉಚಿತ ಸೈಕಲ್ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.  ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವು ಗ್ರಾಮೀಣ ಪ್ರದೇಶದ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲತೆ ಕಲ್ಪಿಸಲು ಹಾಗೂ ಶೈಕ್ಷಣಿಕ ಪ್ರಗತಿಗಾಗಿ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಅವುಗಳು ಮಕ್ಕಳಿಗೆ ಸಮರ್ಪಕವಾಗಿ ತಲುಪಬೇಕು. ರಾಜ್ಯ ಸರ್ಕಾರ ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಣೆಗಾಗಿ ಕ್ಷೀರಭಾಗ್ಯ ಯೋಜನೆ ಜಾರಿಗೆ ತಂದಿದೆ. ಸಮವಸ್ತ್ರ, ಶಿಷ್ಯವೇತನ, ಬಿಸಿಯೂಟ, ಉಚಿತ ಪಠ್ಯ ಪುಸ್ತಕ ಮತ್ತು ಉಚಿತ ಸೈಕಲ್ ಸೇರಿದಂತೆ ಅನೇಕ ಸೌಕರ್ಯಗಳನ್ನು ಒದಗಿಸಿದೆ. ಶಿಕ್ಷಣದಿಂದ ಯಾರೂ ವಂಚಿತರಾಗಬಾರದು ಎಂದು ಉಚಿತ ಮತ್ತು ಕಡ್ಡಾಯ ಶಿಕ್ಷಣ ಮತ್ತು ಶಿಕ್ಷಣದ ಹಕ್ಕು ಕಾಯ್ದೆ ಜಾರಿಗೆ ತರಲಾಗಿದೆ ಎಂದರು. ಮುಖ್ಯೋಪಾಧ್ಯಾಯ ಸಿ.ಎನ್. ಕಂದಗಲ್ ಅಧ್ಯಕ್ಷತೆ ವಹಿಸಿದ್ದರು. ವಿ.ಬಿ. ಸೋಮನಕಟ್ಟಿಮಠ ಹಾಗೂ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement