ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಜಿಲ್ಲಾ ಸಮ್ಮೇಳನಕ್ಕೆ ಸಿದ್ದರಾಮಯ್ಯ, ಮೊಯ್ಲಿಗೆ ಆಹ್ವಾನ

Lingaraj Badiger
Updated On : 16 Jan 2014, 10:49 am

ಕನ್ನಡಪ್ರಭ ವಾರ್ತೆ, ರೋಣ, ಜ. 15
ಗದಗ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಬರುವ ಫೆಬ್ರವರಿ ಮೊದಲ ವಾರದಲ್ಲಿ ನಡೆಸಲು ತೀರ್ಮಾನಿಸಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಉದ್ಘಾಟನೆಗೊಳಿಸಲು ನಿರ್ಧರಿಸಲಾಗಿದೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಅವರು ಈ ಕುರಿತು ಮಂಗಳವಾರ ಪಟ್ಟಣದ ಜಿಲ್ಲಾ ಸಾಹಿತ್ಯ ಸಮ್ಮೇಳನ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತ         ನಾಡಿದರು.
ಈಗಾಗಲೇ ಸಿಎಂ ಸಿದ್ದರಾಮಯ್ಯವರಿಗೆ ಆಹ್ವಾನ ನೀಡಲಾಗಿದ್ದು, ಬರುವುದಾಗಿ ಒಪ್ಪಿಗೆ ಸೂಚಿಸಿದ್ದಾರೆ. ಅದರಂತೆ ಫೆಬ್ರವರಿ ಮೊದಲ ವಾರದಲ್ಲಿ ಸಮ್ಮೇಳನ ನಡೆಸಲು ಕೆಲವೇ ದಿನಗಳಲ್ಲಿ ದಿನಾಂಕ ನಿಗದಿಪಡಿಸಲಾಗುವುದು ಹಾಗೂ ಸಮ್ಮೇಳನಕ್ಕೆ ಕೇಂದ್ರ ಇಂಧನ ಸಚಿವ ಎಂ. ವೀರಪ್ಪ ಮೊಯ್ಲಿ ಅವರನ್ನು ಆಹ್ವಾನಿಸಲಾಗುವುದು. 1992ರಲ್ಲಿ ರೋಣದಲ್ಲಿ ಜರುಗಿದ ಅಖಂಡ ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅಂದಿನ ಮುಖ್ಯಮಂತ್ರಿಯಾಗಿದ್ದ ಎಂ. ವೀರಪ್ಪ ಮೋಯ್ಲಿಯವರಿಂದ ಉದ್ಘಾಟಿಸಲಾಗಿತ್ತು. ಆದ್ದರಿಂದ ಈ ಬಾರಿ ಅವರನ್ನು ಸಮ್ಮೇಳಕ್ಕೆ ಆಹ್ವಾನಿಸಲಾಗುವುದು ಎಂದರು.
2 ದಿನಗಳ ಕಾಲ ಸಮ್ಮೇಳನ:  ಸಮ್ಮೇಳನವು 2 ದಿನಗಳ ಕಾಲ ನಡೆಯಲಿದ್ದು, ಉದ್ಘಾಟನಾ ಸಮಾರಂಭ, ಸಮಾರೋಪ ಸಮಾರಂಭ, ಬಹಿರಂಗ ಸಭೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಮಕ್ಕಳ ಗೋಷ್ಠಿ, ವಿದ್ಯಾವಂತ ನಿರುದ್ಯೋಗ ಯುವಕರ ಗೋಷ್ಠಿ, ಮಹಿಳಾ ಗೋಷ್ಠಿ ಸೇರಿದಂತೆ 5 ಗೋಷ್ಠಿಗಳು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಸನ್ಮಾನ ಹಾಗೂ ರಾಜ್ಯ, ಜಿಲ್ಲೆ ಹಾಗೂ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಈ ಸಮಿತಿಯಲ್ಲಿ ಸಂಘಟಕರು, ವಿವಿಧ ಇಲಾಖೆ ಮುಖ್ಯಸ್ಥರು ಹಾಗೂ ನೌಕರರು ಇರಲಿದ್ದಾರೆ. ಸ್ವಾಗತ ಸಮಿತಿಯನ್ನು ಈಗಾಗಲೇ ರಚಿಸಲಾಗಿದ್ದು, ಗೌರವಾಧ್ಯಕ್ಷರಾಗಿ ಸಚಿವ ಎಚ್.ಕೆ. ಪಾಟೀಲ, ಸ್ವಾಗತಾಧ್ಯಕ್ಷರಾಗಿ ಶಾಸಕ ಬಿ.ಆರ್. ಯಾವಗಲ್, ಶಾಸಕ ರಾಮಕೃಷ್ಣ ದೊಡ್ಡಮನಿ ಹಾಗೂ ವಿವಿಧ ಹುದ್ದೆಗಳಲ್ಲಿ ಹಾಲಿ ಹಾಗೂ ಮಾಜಿ ಸಂಸದರು, ಶಾಸಕರು ಹಾಗೂ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಸೇರಿಸಿಕೊಂಡು ಸ್ವಾಗತ ಸಮಿತಿ ರಚಿಸಲಾಗಿದೆ ಎಂದರು. ಇವತ್ತಿನಿಂದ ಸಮ್ಮೇಳನದವರೆಗೂ ನಿರಂತರವಾಗಿ ಸಮ್ಮೇಳನದ ಯಶಸ್ಸಿಗಾಗಿ ಸಭೆಗಳು ನಡೆಯಲಿವೆ. ಸಮ್ಮೇಳನದ ಯಶಸ್ಸಿಗೆ ಜಿಲ್ಲಾ ಮತ್ತು ತಾಲೂಕಿನ ಎಲ್ಲ ಸಾರ್ವಜನಿಕರು ಮುಕ್ತವಾಗಿ ಪಾಲ್ಗೊಳ್ಳಬೇಕು. ಪ್ರತಿಯೊಬ್ಬರ ಸಲಹೆ, ಸಹಕಾರ ಅತ್ಯಗತ್ಯವಾಗಿದೆ ಎಂದರು.
ಜ. 17ರಂದು ಸಭೆ: ಕಸಾಪ ಜಿಲ್ಲಾಧ್ಯಕ್ಷ ಡಾ. ಶಿವಪ್ಪ ಕುರಿ ಮಾತನಾಡಿ, ಸಮ್ಮೇಳನ ಅರ್ಥಪೂರ್ಣವಾಗಿ ನಡೆಸುವ ಕುರಿತು ರೂಪುರೇಷೆ ಹಮ್ಮಿಕೊಳ್ಳಲು ಜ. 17ರಂದು ಪಟ್ಟಣದ ಅಂದಾನಪ್ಪ ದೊಡ್ಡಮೇಟಿ ಸಭಾಭವನದಲ್ಲಿ ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ. ಬೆಳಗ್ಗೆ 11 ಗಂಟೆಗೆ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕ ಸಂಘಟನೆಗಳ ಪದಾಧಿಕಾರಿಗಳ, ನೌಕರ ಸಂಘಗಳ ಪದಾಧಿಕಾರಿಗಳ, ಖಾಸಗಿ ಶಿಕ್ಷಣ ಸಂಸ್ಥೆಗಳ ಪದಾಧಿಕಾರಿಗಳ ಹಾಗೂ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಭೆಯನ್ನು ಕರೆಯಲಾಗಿದೆ. ಮಧ್ಯಾಹ್ನ 1 ಗಂಟೆಗೆ ರೋಣ ತಾಲೂಕು ವಿವಿಧ ಇಲಾಖೆಗಳ ಮುಖ್ಯಸ್ಥರ ಸಭೆ ಕರೆಯಲಾಗಿದೆ. ಮಧ್ಯಾಹ್ನ 2 ಗಂಟೆಗೆ ರೋಣ ತಾಲೂಕು ಕಸಾಪ ಆಜೀವ ಸದಸ್ಯರ ಹಾಗೂ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳ ಸಭೆಯನ್ನು ಕರೆಯಲಾಗಿದೆ ಎಂದರು.
ಕಾರ್ಯದರ್ಶಿ ಶರಣು ಗೋಗೇರಿ, ಶಿವರಾಜ ಗುರಿಕಾರ, ತಹಸೀಲ್ದಾರ್ ಎ.ಜಿ. ಪಂಡಿತ, ಬಿಇಒ ಡಿ.ಐ. ಅಸುಂಡಿ, ಪುರಸಭೆ ಅಧ್ಯಕ್ಷ ಮುತ್ತಣ್ಣ ಸಂಗಳದ, ವಿ.ಆರ್. ಗುಡಿಸಾಗರ, ವಿವಿಧ ತಾಲೂಕ ಕಸಾಪ ಅಧ್ಯಕ್ಷ ಕಿಶೋರಬಾಬು ನಾಗರಕಟ್ಟಿ, ಪಿ.ಸಿ. ಕಲಹಾಳ, ಕೆ.ಎ. ಬಳಿಗಾರ, ಬಿ.ಎಸ್. ಹಿರೇಮಠ, ಮಹಿಳಾ ಸದಸ್ಯೆ ಪ್ರಮೀಳಾ ಕೋರಧಾನಿಮಠ, ವಿ.ಬಿ. ಸೋಮನಕಟ್ಟಿಮಠ, ವಿ.ಎನ್.ಅಮಾತಿಗೌಡ್ರ, ಕೆ.ವಿ. ಪಾಟೀಲ, ಸಿ.ಜಿ. ಹುಡೇದಗಡ್ಡಿ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement