ಸಹಸ್ರಲಿಂಗ ದೇವಸ್ಥಾನ ಶಿಥಿಲಾವಸ್ಥೆ
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಜ. 15
ಚಾಲುಕ್ಯರ, ರಾಷ್ಟ್ರಕೂಟರ ಹಾಗೂ ಅವರ ನಂತರದ ಕಾಲದಲ್ಲಿ ಲಕ್ಷ್ಮೇಶ್ವರವು ಹಲವಾರು ದೇವಸ್ಥಾನಗಳಿಗೆ ಮತ್ತು ಧಾರ್ಮಿಕ ಕೇಂದ್ರಗಳಿಗೆ ಹೆಸರುವಾಸಿಯಾದ ನಗರವಾಗಿತ್ತು. ಪುಲಿಗೇರೆ 300 ತಿರುಳ್ಗನ್ನಡ ನಾಡು ಎನ್ನುವ ಹೆಸರು ಲಕ್ಷ್ಮೇಶ್ವರಕ್ಕೆ ಇತ್ತು ಎಂಬುವುದು ಇತಿಹಾಸದಿಂದ ತಿಳಿಯುತ್ತದೆ. ಆದರೆ, ಇಂತಹ ಇತಿಹಾಸ ಪ್ರಸಿದ್ಧವಾದ ಪಟ್ಟಣದಲ್ಲಿನ ಹಲವಾರು ದೇವಾಲಯಗಳು ಈಗ ದುಸ್ಥಿತಿ ತಲುಪುತ್ತಿರುವುದು ನೋವಿನ ಸಂಗತಿ. ಅವುಗಳ ಸಾಲಿನಲ್ಲಿ ಈಗ ಸಹಸ್ರಲಿಂಗ ದೇವಸ್ಥಾನವು ಸೇರಿಕೊಂಡಿದೆ.
ಪಟ್ಟಣದ ಹೊರವಲಯದಲ್ಲಿನ ತಟ್ಟಿ ಕಿವುಡ ಮತ್ತು ಮೂಕ ಮಕ್ಕಳ ವಸತಿ ಶಾಲೆಯ ಸಮೀಪದಲ್ಲಿರುವ ಸಹಸ್ರಲಿಂಗ ದೇವಾಲಯವು ಸುಂದರವಾದ ದೇವಾಲಯಗಳಲ್ಲಿ ಒಂದಾಗಿತ್ತು. ಈ ದೇವಸ್ಥಾನದ ವಿಶೇಷವೆಂದರೆ ಗರ್ಭಗುಡಿಯಲ್ಲಿ ಇರುವ ಬೃಹತ್ ಶಿವಲಿಂಗದಲ್ಲಿ ಒಟ್ಟು 999 ಸಣ್ಣ ಲಿಂಗಗಳನ್ನು ಕೆತ್ತಲಾಗಿದೆ. ಪೌರಾಣಿಕತೆ ಹಾಗೂ ಹಿರಿಯರ ವಾಡಿಕೆಯ ಮಾತಿನಂತೆ ಈ ದೇವಸ್ಥಾನದಲ್ಲಿನ ಶಿವಲಿಂಗದ ಮೇಲೆ ಇನ್ನೊಂದು ಲಿಂಗವನ್ನು ಕೆತ್ತಿದ್ದರೆ ಲಕ್ಷ್ಮೇಶ್ವರವು ದಕ್ಷಿಣ ಭಾರತದ ಮತ್ತೊಂದು ರಾಮೇಶ್ವರವಾಗುತ್ತಿತ್ತು ಎಂಬುದು ಸ್ಥಳೀಯರ ಅಭಿಪ್ರಾಯ.
ಬಾದಾಮಿ ಚಾಲುಕ್ಯರ ಕಾಲದಲ್ಲಿ ನಿರ್ಮಾಣ: ಈ ದೇವಸ್ಥಾನವನ್ನು ಸಂಪೂರ್ಣವಾಗಿ ಕಲ್ಲಿನಲ್ಲಿ ಕೆತ್ತಲಾಗಿದ್ದು, ಇದು ಬಾದಾಮಿ ಚಾಲಕ್ಯರ ಕಾಲದಲ್ಲಿ ನಿರ್ಮಾಣವಾಗಿರುವ ಸುಂದರವಾದ ದೇವಾಲಯವಾಗಿದೆ. ದೇವಾಲಯಕ್ಕೆ ಎರಡು ಭಾಗಗಳಿದ್ದು, ಮೊದಲನೆಯ ಭಾಗವು ನವರಂಗ ಮಂಟಪದಿಂದ ಕೂಡಿದ್ದು, ಎರಡನೆಯ ಭಾಗವು ಗರ್ಭ ಗುಡಿಯಾಗಿದೆ. ಗರ್ಭಗುಡಿಯ ಒಳಗೆ ಪಾಣಿಪೀಠದ ಮೇಲೆ ಶಿವಲಿಂಗವನ್ನು ಸ್ಥಾಪಿಸಲಾಗಿದ್ದು, ಈ ಶಿವಲಿಂಗದ ಮೇಲೆ 999 ಲಿಂಗಗಳನ್ನು ಕೆತ್ತಲಾಗಿದೆ. ಸುಮಾರು ಸಹಸ್ರ ವರ್ಷಗಳ ಹಿಂದೆ ಈ ದೇವಾಲಯವನ್ನು ನಿರ್ಮಿಸಲಾಗಿದೆ ಎನ್ನಲಾಗುತ್ತಿದೆ.
ಶಿಥಿಲಾವಸ್ಥೆಗೆ ತಲುಪಿದ ದೇವಾಲಯ: ಇಂತಹ ದೇವಾಲಯದ ಎಡಭಾಗದ ಗೋಡೆಗಳು, ಶಿಖರದ ಮೇಲ್ಭಾಗವು ಬಿದ್ದು ಹೋಗಿದ್ದು, ದೇವಸ್ಥಾನದ ಗೋಡೆಯ ಮೇಲೆ ಹುಲ್ಲುಕಡ್ಡಿ, ಗಿಡ ಗಂಟಿಗಳು ಬೆಳೆದು ದೇವಾಲಯವು ಶಿಥಿಲಾವಸ್ಥೆಗೆ ತಲುಪಿದೆ. ಸುಂದರವಾದ ದೇವಾಲಯವು ನಿರ್ವಹಣೆ ಇಲ್ಲದೇ ಈಗಲೋ ಆಗಲೋ ಸಂಪೂರ್ಣವಾಗಿ ಬಿದ್ದು ಹೋಗುವ ಹಂತಕ್ಕೆ ಇತಿಹಾಸ ಪ್ರಸಿದ್ದ ಸಹಸ್ರಲಿಂಗ ದೇವಾಲಯ ತಲುಪಿದೆ. ಈ ದೇವಸ್ಥಾನದ ಬಗ್ಗೆ ಪ್ರಾಚ್ಯ ಮತ್ತು ಪುರಾತತ್ವ ಇಲಾಖೆಯ ಅಧಿಕಾರಿಗಳಾಗಲಿ, ಪಟ್ಟಣದ ಪುರಸಭೆಯವರಾಗಲಿ ಇತ್ತ ಕಡೆಗೆ ತಿರುಗಿಯೂ ನೋಡಿಲ್ಲ.
ಇದರ ಬಗ್ಗೆ ನಿರ್ಲಕ್ಷ್ಯ ತೋರಿರುವುದು ಇಲ್ಲಿನ ಜನರಲ್ಲಿ ಅಸಮಾಧಾನ ಮೂಡಿಸಿದೆ. ಇನ್ನಾದರೂ ಪ್ರಾಚ್ಯ ವಸ್ತು ಮತ್ತು ಪುರಾತತ್ವ ಇಲಾಖೆಯವರು ಇತ್ತ ಗಮನ ನೀಡಿ ದೇವಾಲಯದ ಜೀರ್ಣೋದ್ಧಾರ ಕಾರ್ಯ ಮಾಡುವರೋ ಎನ್ನುವುದನ್ನು ಕಾದು ನೋಡಬೇಕಿದೆ.
- ಅಶೋಕ ಸೊರಟೂರ