ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಕಾಮಗಾರಿ ಮುಗಿಯುವ ಮುನ್ನವೇ ರಸ್ತೆ ಹರೋಹರ...

Lingaraj Badiger
Updated On : 17 Jan 2014, 10:51 am

ಕನ್ನಡಪ್ರಭ ವಾರ್ತೆ, ರೋಣ, ಜ. 16
ತಾಲೂಕಿನ ಅರಹುಣಸಿ ಮತ್ತು ಮೇಲ್ಮಠ ಮಧ್ಯದ ಸುಮಾರು 200 ಮೀಟರ್‌ನಷ್ಟು ರಸ್ತೆ ಕಳೆದ ಒಂದೂವರೆ ವರ್ಷದಿಂದ ಅರ್ಧಕ್ಕೆ ನಿಂತಿದ್ದು, ಇದರಿಂದ ಸಾರ್ವಜನಿಕರಿಗೆ, ರೈತರ ಎತ್ತು ಚಕ್ಕಡಿಗಳಿಗೆ, ವಾಹನ ಸವಾರರಿಗೆ ತೀವ್ರ ತೊಂದರೆಯಾಗಿದೆ. ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳು, ಗುತ್ತಿಗೆದಾರರ ಗಮನಕ್ಕೆ ತಂದರೂ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ.
ಇದರಿಂದ ಸರ್ಕಾರದ ಉದ್ದೇಶ ಮತ್ತು ಬಿಡುಗಡೆಯಾದ ಕೋಟ್ಯಾಂತರ ಅನುದಾನ ಮಣ್ಣು ಪಾಲಾಗಿದೆ.
ರೋಣ ಪಟ್ಟಣದಿಂದ ಹಿರೇಮಣ್ಣೂರ, ಅರಹುಣಸಿ ಮಾರ್ಗವಾಗಿ ಮೇಲ್ಮಠ ಗ್ರಾಮಕ್ಕೆ ಸಂಪರ್ಕ ಕಲ್ಪಿಸಲು ಒಳ ರಸ್ತೆಯೊಂದನ್ನು ನಿರ್ಮಿಸಲಾಗಿದೆ. ಕಾಟಾಚಾರಕ್ಕೆ ಎಂಬಂತೆ ರಸ್ತೆ ನಿರ್ಮಿಣವಾಗಿದ್ದು, ಕೆಲಕಡೆ ಅರ್ಧಕ್ಕೆ ನಿಂತಿದೆ. ರಸ್ತೆಯುದ್ದಕ್ಕೂ ಡಾಂಬರ್ ಕಿತ್ತು ಹೋಗಿದ್ದು, ರಸ್ತೆ ಸಮತಟ್ಟಾಗಿರದೇ ತೆಗ್ಗು, ದಿನ್ನೆಗಳಿಂದ ಕೂಡಿದೆ. ಅಲ್ಲಲ್ಲಿ ಬಿರುಕು ಬಿಟ್ಟಿದ್ದು, ವಾಹನಗಳು ಸಂಚರಿಸುವುದಿರಲಿ ಜನತೆ, ಜಾನುವಾರು ಸಂಚರಿಸಲೂ ಬಾರದಂತಾಗಿದೆ. ಈ ರಸ್ತೆ ಉಪಯೋಗಕ್ಕಿಂತ ತೊಂದರೆಯೇ ಹೆಚ್ಚಿದೆ ಎನ್ನುತ್ತಾರೆ ಅರಹುಣಸಿ ಗ್ರಾಮಸ್ಥರು.  
ರು. 450 ಲಕ್ಷ ಅನುದಾನ: ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ತಾಲೂಕಿನ ಕೇಂದ್ರ ಸ್ಥಾನವಾದ ರೋಣದಿಂದ ಬಾಸಲಾಪುರ, ಹಿರೇಮಣ್ಣೂರ, ಅರಹುಣಸಿ, ಮೇಲ್ಮಠ ಗ್ರಾಮದವರೆಗೆ 15 ಕಿ.ಮೀದಷ್ಟು ರಸ್ತೆ ಅಭಿವೃದ್ಧಿಗೆ ರು. 450 ಲಕ್ಷ ಮುಂಜೂರಾಗಿದೆ. 2001ರಲ್ಲಿ ಕಾಮಗಾರಿ ಪ್ರಾರಂಭವಾಗಿ 2010ಕ್ಕೆ ಪೂರ್ಣಗೊಳ್ಳಬೇಕಿತ್ತು. 2015 ರವರೆಗೆ ಇದರ ನಿರ್ವಹಣೆ ಅವಧಿಯಿದೆ. ವಿಪರ್ಯಾಸವೆಂದರೆ  2009ರ ಬಳಿಕ ಕಾಮಗಾರಿ ಪ್ರಾರಂಭಿಸಲಾಗಿದೆ. ಕಾಮಗಾರಿಯ ಅವಧಿ ಮುಗಿಯುತ್ತದೆ ಎಂಬ ತರಾತುರಿಯಲ್ಲಿ ರಸ್ತೆಯನ್ನು ಗುಣಮಟ್ಟದಿಂದ ಕೂಡಿರುವಂತೆ ನೋಡಿಕೊಳ್ಳದೇ ಕಾಟಾಚಾರಕ್ಕೆ ಎಂಬಂತೆ ಸಂಪೂರ್ಣ ಕಪಳೆಯಾಗಿದೆ ನಿರ್ಮಿಸಿದ್ದಾರೆ.
ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರು ಈ ವರೆಗೂ ಯಾವದೇ ಕ್ರಮಕ್ಕೆ ಮುಂದಾಗದೇ ಕೇವಲ ಹಾರಿಕೆಯ ಉತ್ತರ ನೀಡುತ್ತಾರೆ. ಮಳೆಗಾಲ ಬಂತೆಂದರೆ ಇಲ್ಲಿಂದ ಮುಂದೆ ಹೋಗಲು ಆಗುವುದಿಲ್ಲ. ಕಳೆದ ವರ್ಷ ಮಳೆಗಾಲದಲ್ಲಿ ನಾನಾ ರೀತಿಯ ತೊಂದರೆ ಅನುಭವಿಸಿದ್ದೇವೆ. ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಈ ಕುರಿತು ಮೌನ ವಹಿಸಿದ್ದು ಬೇಸರ ತಂದಿದೆ ಎನ್ನುತ್ತಾರೆ ಗ್ರಾಮದ ರೈತರಾದ ಮುತ್ತಣ್ಣ ಚೌಡರಡ್ಡಿ, ಮಲ್ಲನಗೌಡ ಪಾಟೀಲ, ಅಮರೇಶಗೌಡ ಗರಡ್ಡಿ.
ಶಾಸಕರ ಗಮನಕ್ಕೂ ತರಲಾಗಿದೆ: ಕಳೆದ ಡಿಸೆಂಬರ್ 25ರಂದು ಬರ ಅಧ್ಯಯನ ತಂಡ ತಾಲೂಕಿನ ಅರಹುಣಸಿ ಗ್ರಾಮಕ್ಕೆ ಆಗಮಿಸಿದ ಸಂದರ್ಭದಲ್ಲಿ ಗ್ರಾಮಸ್ಥರ ಪರವಾಗಿ ಮಾಹಿತಿ ನೀಡಲು ಬಂದಿದ್ದ ಶಾಸಕ ಜಿ.ಎಸ್. ಪಾಟೀಲ ಅವರಿಗೆ 200 ಮೀಟರ್‌ನಷ್ಟು ರಸ್ತೆ ಅರ್ಧಕ್ಕೆ ನಿಂತ ಕುರಿತು ಹಾಗೂ ಸಂಪೂರ್ಣ ಕಳಪೆಯಾದ ಕುರಿತು ಗ್ರಾಮಸ್ಥರು ತಿಳಿಸಿದ್ದಾರೆ. ಈ ಕುರಿತು ಮಾಹಿತಿ ಪಡೆದು ಅರ್ಧಕ್ಕೆ ನಿಂತ ರಸ್ತೆ ಕಾಮಗಾರಿಯನ್ನು ಕೂಡಲೇ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳ ಮತ್ತು ಗುತ್ತಿಗೆದಾರರಿಗೆ ಸೂಚನೆ ನೀಡಲಾಗುವುದು ಎಂದು ಭರವಸೆ ನೀಡಿದ್ದರು ಎಂದು ಗ್ರಾಮದ ರೈತ ಮುಕಂಡ ಮುತ್ತಣ್ಣ ಚೌಡರಡ್ಡಿ ತಿಳಿಸಿದರು.
- ಪಿ.ಎಸ್. ಪಾಟೀಲ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement