ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಚಿಗುರಿದ ಮಾವು, ರೈತನ ಕನಸು

Lingaraj Badiger
Updated On : 17 Jan 2014, 10:43 am

ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಜ. 16
ಸತತ ಬರ ಎದುರಿಸುವ ಗದಗ ಜಿಲ್ಲೆಯಲ್ಲಿ ಈ ಬಾರಿ ಮಾವಿನ ಫಸಲು ನಿರೀಕ್ಷೆಗೂ ಮೀರಿ ಬರುವ ಎಲ್ಲ ಲಕ್ಷಣಗಳು ಗೋಚರವಾಗುತ್ತಿವೆ.
ಮಾವಿನ ಮರಗಳು ಹೆಚ್ಚಿನ ಹೂ ಬಿಟ್ಟಿವೆ. ಹೂವಿನಿಂದ ಮರಗಳು ಮೈದುಂಬಿಕೊಂಡಿವೆ. ಇದರಿಂದ ರೈತರು ಉತ್ತಮ ಫಸಲಿನ ಆಶಾಭಾವನೆ ಹೊಂದಿದ್ದಾರೆ.
ಗದಗ ಜಿಲ್ಲೆಯ ರೋಣ ತಾಲೂಕಿನ ಗಜೇಂದ್ರಗಡ, ಗೊಗೇರಿ, ವದೆಗೋಳ, ಉಣಚಗೇರಿ, ಲಕ್ಕಲಕಟ್ಟಿ, ನಾಗೇಂದ್ರಗಡ, ನೆಲ್ಲೂರು, ಶಾಂತಗೇರಿ, ಮುಶಿಗೇರಿ, ಸೂಡಿ, ಸೇರಿದಂತೆ ಇನ್ನಿತರ ಹಲವಾರು ಪ್ರದೇಶದಲ್ಲಿ ಮಾವಿನ ಗಿಡದ ತುಂಬೆಲ್ಲ ಹೂಗಳೇ ಕಾಣಿಸುತ್ತಿವೆ. ಹೂವು ಬಿಡುವ ಋತುಮಾನ ಪ್ರಾರಂಭದ ಈ ದಿನಗಳಲ್ಲಿ ಮೈತುಂಬ ಹೂ ಮುಡಿದುಕೊಂಡು ಬಳುಕುತ್ತಿರುವ ಮಾಮರಗಳಿಗೆ ಯಾವ ತೊಂದರೆಯೂ ಬಾರದಿರಲಿ ಎಂದು ರೈತ ಸಮೂಹ ಪ್ರಕೃತಿ ಮಾತೆಯಲ್ಲಿ ಮೊರೆ ಇಡುತ್ತಿದ್ದಾರೆ.
ಬಂಪರ್ ಕಾಯಿಯ ನಿರೀಕ್ಷೆ: ರೈತರು ಬೆಳೆದಿರುವ ಮಾವಿನ ಗಿಡಗಳಲ್ಲಿ ಈಗ ಎಲ್ಲಿ ನೋಡಿದರಲ್ಲಿ ಮಾವಿನ ಗಿಡಗಳು ಹೂವಿನಿಂದ ತುಂಬಿ ತುಳುಕುತ್ತಿವೆ. ಈಗ ಕಾಣಿಸಿಕೊಂಡಿರುವ ಹೂಗಳೆಲ್ಲ ಕಾಯಿ ಕಟ್ಟಲು ಸಾಧ್ಯವಿಲ್ಲ. ಉಳಿದ ಕಾಯಿ ಕಟ್ಟಿದರೂ ಬಂಪರ್ ಬೆಳೆ ನಿಶ್ಚಿತ. ಮಾವು ಉಷ್ಣ ವಲಯದ ಬೆಳೆಯಾಗಿರುವುದರಿಂದ ಸವಳು ಭೂವಿ ಹೊರತುಪಡಿಸಿ, ನೀರು ಬಸಿದು ಹೋಗುವ ಕಂದು ಮಣ್ಣಿನ ಪ್ರದೇಶದಲ್ಲಿ ಬೆಳೆಯುತ್ತದೆ. ಈಗಾಗಲೇ ರೋಣ ತಾಲೂಕಿನ 300 ಹೆಕ್ಟೇರ್ ಪ್ರದೇಶಗಳಲ್ಲಿ ಮಾವು ಬೆಳೆಯಲಾಗುತ್ತಿದೆ. ಕೆಲವು ರೈತರು ಮಾತ್ರ ಮಳೆ ಆಧರಿಸಿ ಮಾವು ಬೆಳೆದರೆ, ಇನ್ನುಳಿದ ರೈತರು ನೀರಾವರಿ ಆಶ್ರಿತ ಜಮೀನಿನಲ್ಲಿ ಮಾವು ಬೆಳೆದಿದ್ದಾರೆ. ಉಣಚಗೇರಿ ಸರಹದ್ದಿನ ಗಡಿ ಪ್ರದೇಶದ ರೈತ ಸುಭಾನಸಾಬ ಆರಗಿದ್ದಿ ತಮ್ಮ 4 ಎಕರೆ ಜಮೀನಿನಲ್ಲಿ ವಿದೇಶದಲ್ಲಿ ಹೆಚ್ಚು ಬೇಡಿಕೆಯುಳ್ಳ ಕೇಸರ ಮತ್ತು ಆಪುಸ್ ತಳಿಯ 400 ಗಿಡಗಳು, ನಾಲ್ಕನೇ ವರ್ಷದಲ್ಲಿದ್ದು ಈ ವರ್ಷ ಫಲ ನೀಡಲಿವೆ. ಹಾಗೂ ಬೇನಿಷ್ ತಳಿಯ 150 ಗಿಡಗಳು ಮೂರು ವರ್ಷದ್ದಾಗಿವೆ. ಗಿಡಗಳಿಗೆ ಯಾವ ರೋಗ ಬಾಧೆ ತಗುಲದಂತೆ ಪ್ರತಿವರ್ಷ ಭೂಮಿಯಲ್ಲಿ ಜೈವಿಕ ಹಾಗೂ ರಾಸಾಯನಿಕ ಗೊಬ್ಬರ ಸಿಂಪರಣೆ ಮಾಡಲಾಗುತ್ತದೆ. ಮಾವಿನ ಗಿಡಗಳಿಗೆ ತಗುಲುವ ಎಲೆ ಕಜ್ಜಿಗಿ ರೋಗ, ಜಿಗಿ ರೋಗ ಮತ್ತು ಹೂವು ತುಂಬಿಕೊಂಡ ಬಳಿಕ ಬೂದು ರೋಗ ತಗುಲುವ ಸಾಧ್ಯತೆ ಹೆಚ್ಚು. ಈ ನಿಟ್ಟಿನಲ್ಲಿ ಇಂತಹ ರೋಗ ಬಾಧೆ ತಗುಲದಂತೆ ಕಾಲಕಾಲಕ್ಕೆ ತೋಟಗಾರಿಕಾ ಅಧಿಕಾರಿಗಳ ಸಲಹೆಯಂತೆ ಔಷಧಿ ಸಿಂಪಡಿಸಲಾಗಿದೆ ಎಂದರು. ಈಗಾಗಲೇ 4 ಎಕರೆ ಜಮೀನಿನಲ್ಲಿ ಬೆಳೆದಿರುವ ಮಾವು ಬೆಳೆಗೆ ಅಂದಾಜು ರು. 5 ಲಕ್ಷ ಖರ್ಚು ಮಾಡಲಾಗಿದ್ದು, ಈ ಬಾರಿ ಮುಂಗಾರು ಪ್ರಾರಂಭದಲ್ಲೇ ಕೈಕೊಟ್ಟ ಹಿನ್ನೆಲೆಯಲ್ಲಿ ಜಮೀನಿನಲ್ಲಿ ಕೊಳವೆ ಬಾವಿ ಕೊರೆಯಿಸಿ ರು. 1.5ಲಕ್ಷ ವೆಚ್ಚದಲ್ಲಿ ಸಂಪೂರ್ಣ ಕಲ್ಲಿನಿಂದ ನಿರ್ಮಿಸಿ ಬೋರ್‌ವೆಲ್‌ನ ನೀರನ್ನು ಹೊಂಡದಲ್ಲಿ ಸಂಗ್ರಹಿಸಿ, ಹನಿ ನೀರಾವರಿ ಮೂಲಕ ಗಿಡಗಳಿಗೆ ನೀರುಣಿಸಲಾಗಿದೆ. ಇನ್ನೇನು ಗಿಡಗಳು ಕಾಯಿ ಬಿಡುವ ಹಂತದಲ್ಲಿದ್ದು ಈ ಸಂದರ್ಭದಲ್ಲಿ ರಸ ಹೀರುವ ಕೀಟ ಹಾಗೂ ಕಾಯಿ ರಸ ಹೀರುವ ಜಿಗಿ ನೊಣ ಕಾಣಿಸಿಕೊಳ್ಳಬಹುದೆಂಬ ಆತಂಕದಲ್ಲಿದ್ದೇವೆ. ಯಾವುದೇ ರೋಗ ಬಾಧೆ ಕಾಣಿಸದೇ ಭೂತಾಯಿ ಕೃಪೆ ತೋರಿದರೆ ಗಿಡವೊಂದಕ್ಕೆ 200 ಕಾಯಿ ಬಿಡಬಹುದು. ಮನೆಯ ಮಕ್ಕಳಂತೆ ಮುದ್ದಾಗಿ ಮಾವಿನ ಗಿಡಗಳನ್ನು ಬೆಳೆಸಲಾಗಿದೆ. ಈ ಬಾರಿ ಬಂಪರ್ ಮಾವಿನ ಬೆಳೆ ಬರಬಹುದೆಂಬ ನಿರೀಕ್ಷೆಯಲ್ಲಿದ್ದೇವೆ ಎನ್ನುತ್ತಾರೆ ಈ ರೈತರು.
- ಡಿ.ಜಿ. ಮೋಮಿನ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement