ಜನಮನಸೂರೆಗೊಂಡ ನಾಟಕ ಪ್ರದರ್ಶನ
ಮುಂಡರಗಿ: ಸ್ಥಳೀಯ ಚಂದನ ನಗರ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಗದಗ ಇವುಗಳ ಸಂಯುಕ್ತ ಅಶ್ರಯದಲ್ಲಿ ಈಚೆಗೆ ಪಟ್ಟಣದ ಎಂಸಿಎಸ್ ಶಾಲೆಯ ಆವರಣದಲ್ಲಿ ಇಲ್ಲಿನ ಸರ್ಕಾರಿ ಪಪೂ ಕಾಲೇಜಿನ ವಿದ್ಯಾರ್ಥಿಗಳಿಂದ ಪ್ರದರ್ಶನಗೊಂಡ ಮಕ್ಕಳ ಸಾಹಿತಿ ಡಾ. ನಿಂಗು ಸೊಲಗಿ ರಚಿಸಿದ ಬಂಡೆದ್ದ ಮುಂಡರಗಿ ಭೀಮರಾಯ ನಾಟಕವು ಜನಮನ ಸೂರೆಗೊಂಡಿತು.
1857ರಲ್ಲಿ ಸಿಪಾಯಿದಂಗೆಯ ಕಾಲಘಟ್ಟ. ಆ ಸಂದರ್ಭದಲ್ಲಿ ಅಸಂಘಟಿತ ಜನತೆ, ಅನಕ್ಷರತೆ, ಬರಗಾಲ, ಜಾತೀಯತೆ, ಕೋಮುಗಲಭೆ, ಯುದ್ಧ, ದಳ್ಳುರಿಗಳು ಹೊತ್ತಿ ಉರಿಯುತ್ತದ್ದವು. ಇಂತಹ ಸಂದರ್ಭದಲ್ಲಿ ಮುಂಡರಗಿ ಭೀಮರಾಯ ತಂದೆ ರಂಗರಾಯರ ಮಾತಿನಂತೆ ಬ್ರಿಟಿಷರ ಕಂಪನಿ ಸರ್ಕಾರದಲ್ಲಿ ಮಾಮ್ಲೆದಾರರಾಗಿ ನಿಯುಕ್ತಿ ಪಡೆಯುತ್ತಾರೆ. ಕುದುರೆ ಸವಾರಿಯಲ್ಲಿ ನಿಸ್ಸೀಮರಾಗಿದ್ದ ಗುಂಡೇಟಿನ ಗುರಿಕಾರರೂ ಆಗಿದ್ದ ಭೀಮರಾಯರನ್ನು ಬಳಸಿಕೊಂಡ ಬ್ರಿಟಿಷರು ಬರಗಾಲದ ಸಂದರ್ಭಲ್ಲಿಯೂ ಜನರಿಂದ ಕಂದಾಯ ವಸೂಲಿ ಮಾಡಬೇಕೆಂದು ಒತ್ತಡ ಹೇರುತ್ತಾರೆ.
ಜನರ ನೋವನ್ನು ಮನಗಂಡ ಭೀಮರಾಯ ಕಂಪನಿ ಸರ್ಕಾರದ ವಿರುದ್ಧ ತಿರುಗಿ ಬಿದ್ದು ಬಂಡಾಯದ ಕಹಳೆ ಊದುತ್ತಾನೆ. ಭೀಮರಾಯರು ಬ್ರಿಟಿಷರ ವಿರುದ್ಧ ಅನೇಕ ಹೋರಾಟಗಳನ್ನು ಮಾಡುತ್ತ ಬರುತ್ತಾರೆ. ನಂತರ ತಮ್ಮವರೇ ಮಾಡಿದ ಮೋಸದಿಂದ ಭೀಮರಾಯ ಮತ್ತು ಹಮ್ಮಿಗಿ ಕೆಂಚನಗೌಡರು ಕೊಪ್ಪಳ ಕೋಟೆಯಲ್ಲಿ ಬ್ರಿಟಿಷರ ಗುಂಡಿಗೆ ಬಲಿಯಾಗಿ ಪ್ರಾಣ ಕಳೆದುಕೊಳ್ಳುತ್ತಾರೆ.
ಸೊಲಗಿಯವರು ಬಾನುಲಿಗಾಗಿ ರಚಿಸಿದ ಈ ಐತಿಹಾಸಿಕ ನಾಟಕವನ್ನು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಪ್ರಥಮಬಾರಿಗೆ ನಾಟಕದ ಅಭಿರುಚಿಯನ್ನು ಬೆಳೆಸುವ ಮೂಲಕ ವಿದ್ಯಾರ್ಥಿಗಳಿಂದ ಜನಮೆಚ್ಚುಗೆ ಗಳಿಸುವಂತೆ ಅಭಿನಯಕ್ಕೆ ಕಾರಣರಾದ ಲಕ್ಕಲಕಟ್ಟೆಯ ರಂಗ ನಿರ್ದೇಶಕ ಶಶಿ ಪಾಟೀಲ ಅವರ ಪರಿಶ್ರಮ ಹಾಗೂ ಈ ನಾಟಕ ಅಭಿನಯಕ್ಕೆ ಅವಕಾಶ ನೀಡಿದ ಚಂದನ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಯುವರಾಜ ರಾಮೇನಹಳ್ಳಿಯವರ ಶ್ರಮ ನಿಜವಾಗಿಯೂ ಮೆಚ್ಚುವಂತಹದ್ದು.
ಪ್ರಾರಂಭದಲ್ಲಿ ಮುಂಡರಗಿ ಭೀಮರಾವ್ ಮನೆತನದ ವಿ.ಎಲ್. ನಾಡಗೌಡ್ರ ನಾಟಕವನ್ನು ಡೊಳ್ಳು ಭಾರಿಸುವ ಮೂಲಕ ಉದ್ಘಾಟಿಸಿದರು. ಶಾಸಕ ರಾಮಕೃಷ್ಣ ದೊಡ್ಡಮನಿ ಅಧ್ಯಕ್ಷತೆ ವಹಿಸಿದ್ದರು. ಕೊಟ್ರೇಶ ಅಂಗಡಿ, ಧ್ರುವಕುಮಾರ ಹೊಸಮನಿ, ಮಂಜುನಾಥ ಇಟಗಿ, ಲಿಂಗರಾಜಗೌಡ ಪಾಟೀಲ, ವೀರೇಶ ಸಜ್ಜನರ, ವಿಶ್ವನಾಥಗೌಡ ಪಾಟೀಲ ಹಾಗೂ ಚಂದನ ನಗರ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಯುವರಾಜ ರಾಮೇನಹಳ್ಳಿ ಹಾಗೂ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.