ನವಜಾತ ಶಿಶು ಅನ್ನನಾಳ ಶಸ್ತ್ರಚಿಕಿತ್ಸೆ ಯಶಸ್ವಿ
ಗದಗ: ಅನ್ನನಾಳದ ಹಾದಿ ಬಂದ್ ಆಗಿ ತಾಯಿ ಎದೆ ಹಾಲು ಶ್ವಾಸಕೋಶ ಸೇರಿ ಸಾವು ಬದುಕಿನ ಮಧ್ಯ ಹೋರಾಡುತ್ತಿದ್ದ ನವಜಾತ ಶಿಶುವಿಗೆ ನಗರದ ಮಹಾತ್ಮಾಗಾಂಧಿ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ರಾಜ್ಯ ಸರ್ಕಾರದ ಬಾಲ ಸಂಜೀವಿನಿ ಯೋಜನೆಯಡಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ.
ಕೊಪ್ಪಳ ಜಿಲ್ಲೆಯ ಹಟ್ಟಿಬೆಳಗಟ್ಟಿ ಗ್ರಾಮದ ಶಿವಪ್ಪ ಮಜ್ಜಗಿ ದಂಪತಿಗೆ 8 ದಿನಗಳ ಹಿಂದೆ ಜನಿಸಿದ್ದ ಹೆಣ್ಣು ಶಿಶುವಿಗೆ ಅನ್ನನಾಳವೇ ಬಂದ್ ಆಗಿತ್ತು. ಇದರ ಪರಿಣಾಮ ಮಗುವಿಗೆ ತಾಯಿ ಎದೆಹಾಲು ನೀಡಿದರೆ, ಮರಳಿ ಹೊರಗೆ ಬರುವುದು ಹಾಗೂ ಶ್ವಾಸಕೋಶ ಸೇರುತ್ತಿದ್ದರಿಂದ ಮಗುವಿನ ಜೀವ ಉಳಿಸಿಕೊಳ್ಳಲು ಗದಗ ನಗರದ ಮಹಾತ್ಮಾಗಾಂಧಿ ಮಲ್ಟಿಸ್ಪೆಷಾಲಿಟಿ ಮತ್ತು ಸಂಶೋಧನಾ ಕೇಂದ್ರದ ವೈದ್ಯರ ಬಳಿಗೆ ಧಾವಿಸಿದರು. ಹಣವಿಲ್ಲದೇ ಇಲ್ಲಿ ಚಿಕಿತ್ಸೆಗೆಂದು ಬಂದ ಆ ಕುಟುಂಬಕ್ಕೆ ನೆರವಾಗಿದ್ದು, ಸರ್ಕಾರದ ಬಾಲಸಂಜೀವಿನಿ ಯೋಜನೆ. ಈ ಯೋಜನೆಯಡಿ ಮಗುವಿಗೆ ಶಸ್ತ್ರಚಿಕಿತ್ಸೆ ನೀಡಲು ಮುಂದಾದ ವೈದ್ಯರ ತಂಡ, ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದೆ. ಮಗುವನ್ನು ತೀವ್ರ ನಿಗಾಘಟಕದಲ್ಲಿ ಕೃತಕ ಉಸಿರಾಟದೊಂದಿಗೆ ಇಡಲಾಗಿತ್ತು. ಎರಡು ದಿನದಲ್ಲಿ ಶಸ್ತ್ರಚಿಕಿತ್ಸೆಗೆ ಚೇತರಿಸಿಕೊಂಡ ಮಗುವಿಗೆ ಆಸ್ಪತ್ರೆಯ ವೈದ್ಯರ ತಂಡ ಸೂಕ್ತ ಸೂಪರ್ ಮೇಜರ್ ಶಸ್ತ್ರಚಿಕಿತ್ಸೆಯ ಮೂಲಕ ಕೆಳಭಾಗದ ಅನ್ನನಾಳವನ್ನು ಶ್ವಾಸನಾಳದಿಂದ ಬೇರ್ಪಡಿಸಿ ದಾರಿಕಟ್ಟಿದ್ದ ಮೇಲ್ಭಾಗದ ಅನ್ನನಾಳಕ್ಕೆ ಜೋಡಣೆ ನೀಡಿ, ಮಗು ಸೇವಿಸಿದ ಆಹಾರ ಅನ್ನನಾಳದ ಕೊಳವೆಯ ಮುಖಾಂತರವೇ ತೆರಳುವಂತೆ ಮಾಡಲಾಗಿದೆ. ಈ ಶಸ್ತ್ರಚಿಕಿತ್ಸೆಯನ್ನು ಡಾ. ರಾಜಶೇಖರ ಪಾಟೀಲ ನೇತೃತ್ವದಲ್ಲಿ ನಡೆಸಲಾಗಿದೆ. ಅರವಳಿಕೆ ತಜ್ಞ ಡಾ. ಶ್ವೇತಾಗೌಡ ಮತ್ತು ಡಾ. ಗುಡಿಸಾಗರ, ಚಿಕ್ಕಮಕ್ಕಳ ತಜ್ಞ ಡಾ. ವಿಜಯ ನೀಲಗುಂದ, ಡಾ. ಗಣೇಶ ಕುಂದಾಪುರ, ಡಾ. ಪ್ರಕಾಶ ಸಂಕನೂರ ವೈದ್ಯರ ತಂಡದ ಸಹಯೋಗದೊಂದಿಗೆ ಈ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಮಗುವಿನ ಆರೋಗ್ಯ ಉತ್ತಮವಾಗಿದೆ.
--
ರಸ್ತೆ ಅಪಘಾತ: ಶಾಸಕರಿಂದ ಪರಿಹಾರ ಚೆಕ್ ವಿತರಣೆ
ಲಕ್ಷ್ಮೇಶ್ವರ: ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆದಿದ್ದ ಪಟ್ಟಣದ ಶರಣಪ್ಪ ಕಾತರಕಿ ಎಂಬುವವರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಶಾಸಕ ರಾಮಕೃಷ್ಣ ದೊಡ್ಡಮನಿ ಗುರುವಾರ ಬೆಳಗ್ಗೆ ರು. 25 ಸಾವಿರ ಪರಿಹಾರದ ಚೆಕ್ ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ನಮ್ಮ ಸರ್ಕಾರವು ಬಡವರ, ದೀನದಲಿತರ, ನೊಂದವರ, ಶೋಷಿತ ವರ್ಗಗಳ ಪರವಾಗಿದ್ದು ಅವರ ಕಷ್ಟ ಸುಖಗಳಲ್ಲಿ ಸದಾ ಪಾಲ್ಗೊಳ್ಳುತ್ತದೆ. ಸರ್ಕಾರ ಶೌಚಾಲಯಗಳನ್ನು ನಿರ್ಮಿಸುವಲ್ಲಿ ಸಾಕಷ್ಟು ಹಣಕಾಸಿನ ಸಹಾಯ ನೀಡುತ್ತಿದೆ. ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು. ತಮ್ಮ ಸುತ್ತ ಮುತ್ತಲಿನ ವಾತಾವರಣದಲ್ಲಿ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು. ಲಕ್ಷ್ಮೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಣ್ಣ ಅಂಗಡಿ, ಪುರಸಭೆ ಸದಸ್ಯ ಬಸವರಾಜ ಓದುನವರ, ರಾಜು ಕುಂಬಿ, ಪರಮೇಶ ಲಮಾಣಿ, ನ್ಯಾಯವಾದಿ ಎ.ಎನ್. ನಾವಿ, ನೀಲಪ್ಪ ಶೆರಸೂರಿ, ಗ್ರಾಮ ಲೆಕ್ಕಾಧಿಕಾರಿ ಎನ್.ಆರ್. ಚೆನ್ನಪ್ಪಗೌಡರ ಮುಂತಾದವರು ಹಾಜರಿದ್ದರು.