ಪಿಎಸ್ಐ ಬಂಡೆ ನಿಧನ: ಶ್ರದ್ಧಾಂಜಲಿ
ಗದಗ: ಗುಲ್ಬರ್ಗದಲ್ಲಿ ಕರ್ತವ್ಯದ ಮೇಲಿದ್ದ ಪಿಎಸ್ಐ ಮಲ್ಲಿಕಾರ್ಜುನ ಬಂಡೆ ಸಾವಿನ ನಿಮಿತ್ತ ವಿವಿಧ ಹಿಂದೂ ಸಂಘಟನೆಗಳು ಬುಧವಾರ ರಾತ್ರಿ ನಗರದ ಮಹಾತ್ಮಾಗಾಂಧಿ ವೃತ್ತದಲ್ಲಿ ಶ್ರದ್ಧಾಂಜಲಿ ಸಲ್ಲಿಸಿದವು.
ಘಟನೆಯನ್ನು ಕೂಡಲೇ ಸರ್ಕಾರ ಸಿಬಿಐ ತನಿಖೆಗೆ ವಹಿಸಬೇಕೆಂದು ಆಗ್ರಹಿಸಲಾಯಿತು. ಶ್ರೀರಾಮ ಸೇನೆಯ ಜಿಲ್ಲಾ ಸಂಚಾಲಕ ರಾಜೂ ಖಾನಪ್ಪನವರ ಮಾತನಾಡಿ, ಪ್ರಾಣದ ಹಂಗು ತೊರೆದು ಹಗಲಿರುಳು ಸಮಾಜದ ಹಿತಕ್ಕಾಗಿ ಶ್ರಮಿಸುತ್ತಿರುವ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗೆ ಸರ್ಕಾರ ಸೂಕ್ತ ನೆರವು, ಸಹಕಾರ ನೀಡಬೇಕು. ಗುಲ್ಬರ್ಗದಲ್ಲಿ ರೌಡಿಗಳನ್ನು ಮಟ್ಟಹಾಕುವಲ್ಲಿ ಶ್ರಮಿಸುತ್ತಿರುವಾಗಲೇ ಪ್ರಾಣಾರ್ಪಣೆ ಮಾಡಿದ ಮಲ್ಲಿಕಾರ್ಜುನ ಬಂಡೆಯವರ ಸಾವಿಗೆ ಸರ್ಕಾರವೇ ನೇರ ಹೊಣೆ. ಸರ್ಕಾರ ಬಂಡೆಯವರನ್ನು ಗುಂಡೇಟಿನಿಂದ ಗಾಯಗಳಾದ ಕೂಡಲೇ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿದೇಶಕ್ಕೆ ಕರೆದುಕೊಂಡು ಹೋಗಿದ್ದಲ್ಲಿ ಅವರನ್ನು ಬದುಕಿಸಿಕೊಳ್ಳಬಹುದಾಗಿತ್ತು. ಆದರೆ ಸರ್ಕಾರ ಶೀಘ್ರ ನಿರ್ಧಾರವನ್ನು ಕೈಗೊಳ್ಳಲು ವಿಳಂಬ ಮಾಡಿದ್ದರಿಂದ ದಕ್ಷ ಪೊಲೀಸ್ ಅಧಿಕಾರಿಯೊಬ್ಬರನ್ನು ಕಳೆದುಕೊಳ್ಳುವಂತಾಯಿತು. ಬಂಡೆಯವರ ಕುಟುಂಬ ವರ್ಗಕ್ಕೆ ಸರ್ಕಾರ ರು. 1 ಕೋಟಿ ಪರಿಹಾರ ನೀಡಬೇಕು. ಕುಟುಂಬದ ಸದಸ್ಯರಿಗೆ ಸರ್ಕಾರಿ ನೌಕರಿ ನೀಡಬೇಕೆಂದು ಆಗ್ರಹಿಸಿದರು. ಗುಲ್ಬರ್ಗದಲ್ಲಿ ಕೆಲ ರಾಜಕೀಯ ವ್ಯಕ್ತಿಗಳು ಸಮಾಜ ವಿರೋಧಿ ಶಕ್ತಿಗಳೊಂದಿಗೆ ಶಾಮೀಲಾಗಿದ್ದಾರೆ. ಈ ಎಲ್ಲ ಕೃತ್ಯಗಳನ್ನು ಅರಿತಿದ್ದ ಪಿಎಸ್ಐ ಮಲ್ಲಿಕಾರ್ಜುನ ಬಂಡೆ, ಈ ಶಕ್ತಿಗಳನ್ನು ಸದೆಬಡಿಯಲು ಪ್ರಯತ್ನಿಸಿದಾಗ ಈ ಘಟನೆ ನಡೆದಿದೆ. ಒಂದು ವೇಳೆ ಪಿಎಸ್ಐ ಮಲ್ಲಿಕಾರ್ಜುನ ಬಂಡೆ ಬದುಕಿದ್ದರೆ ಈ ದುಷ್ಟ ಶಕ್ತಿಗಳ ಬಣ್ಣ ಬಯಲಾಗುತ್ತದೆಯೆಂಬ ಆತಂಕದಲ್ಲಿದ್ದ ಕೆಲ ರಾಜಕೀಯ ವ್ಯಕ್ತಿಗಳು ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸುವಲ್ಲಿ ವಿಳಂಬ ನೀತಿ ಅನುಸರಿಸುವಂತೆ ಮಾಡಿದ್ದಾರೆಂದು ಆರೋಪಿಸಿದರು. ಮುತ್ತಣ್ಣ ಭರಡಿ, ಸುರೇಶ ಹಾದಿಮನಿ, ವಿಶ್ವನಾಥ ಅಂಗಡಿ, ಗಣೇಶ ನಾಕೋಡ, ಬಸಯ್ಯ ನಂದಿಕೋಲಮಠ, ಶ್ರೀಕಾಂತ ಬಾಖಳೆ, ಬಸವರಾಜ ಕುರ್ತಕೋಟಿ, ರಾಜೂ ಗದ್ದಿ, ರಾಜೇಶ ಶಿದ್ಲಿಂಗ, ಕನಕದಾಸ ಪುಣೇಕರ, ಬಿ.ಜಿ. ಉಂಕಿ, ಎಂ.ಆರ್. ಸತ್ಯರಡ್ಡಿ, ಎಸ್.ಎಚ್. ಅಂಗಡಿ, ಕೋಟೇಶ, ಎಚ್.ಎಸ್. ಕೆಂಚರೆಡ್ಡಿ, ಸದಾನಂದಸಿಂಗ ಗುರ್ಲಹೊಸೂರ, ಈರಣ್ಣ ಗಾಣಿಗೇರ, ಸೋಮಶೇಖರ ಮೇಟಿ ಮುಂತಾದವರು ಉಪಸ್ಥಿತರಿದ್ದರು.