ಗ್ರಾಪಂ ಕಾರ್ಯದರ್ಶಿಗೆ ರು. 5 ಸಾವಿರ ದಂಡ
ಶಿವಕುಮಾರ ಕುಷ್ಟಗಿ
ಕನ್ನಡಪ್ರಭ ವಾರ್ತೆ, ಗದಗ, ಜ. 17
ಸರ್ಕಾರದ ವಿವಿಧ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡುವಂತೆ ನಾಗರಿಕನೋರ್ವ ವಿನಂತಿ ಮಾಡಿದ್ದು, ಅದನ್ನು ಸಕಾಲಕ್ಕೆ ನೀಡದ ಹಿನ್ನೆಲೆಯಲ್ಲಿ ಆರ್ಟಿಐ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಆದರೆ ನ್ಯಾಯಾಲಯಕ್ಕೂ ಕೂಡಾ ಅಧಿಕಾರಿಗಳು ಹಾಜರಾಗದೇ ಅಗೌರವ ತೋರಿದ ಹಿನ್ನೆಲೆಯಲ್ಲಿ ಆರ್.ಟಿ.ಐ. ನ್ಯಾಯಾಲಯ ಗ್ರಾಪಂ ಕಾರ್ಯದರ್ಶಿಗೆ 5 ಸಾವಿರ ದಂಡ ವಿಧಿಸಿದೆ.
ಏನಿದು ಪ್ರಕರಣ: ಗದಗ ತಾಲೂಕಿನ ನಾಗಾವಿ ಗ್ರಾಪಂ ವ್ಯಾಪ್ತಿಯ ಕಳಸಾಪುರ ಗ್ರಾಮದಲ್ಲಿ ಬಸವ ವಸತಿ ಸೇರಿದಂತೆ ವಿವಿಧ ಕಾಮಗಾರಿಗಳ ಅನುಷ್ಠಾನ ಹಾಗೂ ಫಲಾನುಭವಿಗಳ ಆಯ್ಕೆ ಸಮಗ್ರ ಮಾಹಿತಿಯನ್ನು ನೀಡುವಂತೆ ಅದೇ ಗ್ರಾಮದ ಮುತ್ತು ನಾಯ್ಕರ್ ಎನ್ನುವವರು 2012ರ ನವೆಂಬರ್ 17ರಂದು ಅರ್ಜಿ ಸಲ್ಲಿಸಿದ್ದಾರೆ. ಆದರೆ ಗ್ರಾಪಂ ಅಧಿಕಾರಿಗಳು ಮಾತ್ರ ಇಂದಿಗೂ ಅವರಿಗೆ ಮಾಹಿತಿ ನೀಡುತ್ತಿಲ್ಲ. ಅದಕ್ಕಾಗಿ ಸಕಾರಣವನ್ನು ಕೊಡುತ್ತಿಲ್ಲ. ಇದರಿಂದ ಬೇಸತ್ತ ಅವರು ಮಾಹಿತಿ ಆಯೋಗಕ್ಕೆ ಮೇಲ್ಮನವಿಯನ್ನು ಸಲ್ಲಿಸಿದ್ದಾರೆ. ಇದನ್ನು ಪುರಸ್ಕರಿಸಿದ ಆಯೋಗ 2013ರ ಏಪ್ರಿಲ್ 22ರಂದು ಗ್ರಾಪಂ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿ 7 ದಿನಗಳೊಳಗೆ ಅವರಿಗೆ ಮಾಹಿತಿ ನೀಡಿ, ಅದರ ಕುರಿತು ಆಯೋಗದ ಗಮನಕ್ಕೆ ತನ್ನಿ ಇಲ್ಲವೇ 2013ರ ಜೂನ್ 25ರಂದು ಬೆಂಗಳೂರಿನಲ್ಲಿರುವ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗಲು ಆದೇಶ ಹೊರಡಿಸಿದ್ದರು. ಇದಕ್ಕೂ ಕೂಡಾ ನಾಗಾವಿ ಪಂಚಾಯ್ತಿ ಕಾರ್ಯದರ್ಶಿಯಾಗಲಿ ಅದಕ್ಕಿಂತ ಹಿರಿಯ ಅಧಿಕಾರಿಗಳಾಗಲಿ ಹಾಜರಾಗಲಿಲ್ಲ.
ರು. 5 ಸಾವಿರ ದಂಡ: ಆರ್ಟಿಐ ನ್ಯಾಯಾಲಯ 2013ರ ಸೆಪ್ಟೆಂಬರ್ 25ರಂದು ಪ್ರಕರಣವನ್ನು ಮುಂದೂಡಿ ಅಂದು ತಪ್ಪದೇ ಹಾಜರಾಗುವಂತೆ ಸೂಚನೆ ನೀಡಿತ್ತು. ಅದಕ್ಕೂ ಕೂಡಾ ನಾಗಾವಿ ಪಂಚಾಯ್ತಿ ಯಾವ ಅಧಿಕಾರಿಗಳು ಬರಲಿಲ್ಲ. ಇದರಿಂದ ಆಯೋಗವು ನಾಗಾವಿ ಗ್ರಾಪಂ ಕಾರ್ಯದರ್ಶಿ ಮಣ್ಣೂರ ಎನ್ನುವವರಿಗೆ ರು. 5 ಸಾವಿರ ದಂಡವನ್ನು ವಿಧಿಸಿದ್ದು ತಕ್ಷಣವೇ ಸರ್ಕಾರ ಖಾತೆ 0070-60-118-0-03 ಭರಿಸಬೇಕು ಮತ್ತು ಮುಂದಿನ ವಿಚಾರಣೆಯ ದಿನಾಂಕದೊಳಗೆ ಮಾಹಿತಿದಾರರಿಗೆ ತಪ್ಪದೇ ಮಾಹಿತಿ ಪೂರೈಸಬೇಕು ಮತ್ತು ವಿಚಾರಣೆಗೂ ಹಾಜರಾಗಲು ಸೂಚನೆ ನೀಡಿದೆ.
ಸೂಚನೆ: ಆಯೋಗದ ವಿಚಾರಣೆಗೆ ಹಾಜರಾಗದೇ ಆಯೋಗಕ್ಕೆ ಅಗೌರವ ತೋರುತ್ತಿರುವ ಕಾರ್ಯದರ್ಶಿ ತಕ್ಷಣವೇ ದಂಡದ ಹಣವನ್ನು ಸರ್ಕಾರಕ್ಕೆ ಭರಿಸಬೇಕು ಮತ್ತು ಮಾಹಿತಿ ನೀಡಲು ವಿಳಂಬ ಮಾಡುತ್ತಿರುವ ಕಾರ್ಯದರ್ಶಿ ಯಾವ ಕಾರಣಕ್ಕೆ ಈ ರೀತಿ ನಡೆದುಕೊಳ್ಳುತ್ತಿದ್ದಾರೆ ಎನ್ನುವ ಕುರಿತು ತಾಪಂ ಇಓ ರೇವಣ್ಣ ಹಾಗೂ ಜಿಪಂ ಸಿಇಓ ವೀರಣ್ಣ ತುರಮರಿ ಅವರು ಕೂಡಲೇ ಗಮನ ನೀಡಬೇಕು. ಈ ಕುರಿತು ಆಯೋಗಕ್ಕೂ ತಕ್ಷಣವೇ ವರದಿ ಸಲ್ಲಿಸಲು ಅವರಿಗೂ ಸೂಚನೆ ನೀಡಲಾಗಿದೆ.