ಪೋಲಿಯೋ ಮುಕ್ತ ದೇಶವಾಗಲಿ: ಶಾಸಕ ದೊಡ್ಡಮನಿ
ಮುಂಡರಗಿ: ಸಾರ್ವಜನಿಕರು 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಪೋಲಿಯೋ ಹನಿ ಹಾಕಿಸುವುದರ ಮೂಲಕ ಪೋಲಿಯೋ ಮುಕ್ತ ದೇಶವಾಗಲು ಸಹಕರಿಸಬೇಕು ಎಂದು ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.
ಅವರು ಭಾನುವಾರ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ತಾಲೂಕು ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸರ್ಕಾರದ ಇಂತಹ ಕಾರ್ಯಕ್ರಮಗಳಿಗೆ ಜನತೆ ಕೈ ಜೋಡಿಸಿದರೆ ಆರೋಗ್ಯವಂತ ಭಾರತ ಆಗುವುದರಲ್ಲಿ ಸಂಶಯವೇ ಇಲ್ಲವೆಂದು ಹೇಳಿದರು. ಐ.ಎಂ.ಎ ಅಧ್ಯಕ್ಷ ಡಾ. ಅನ್ನದಾನಿ ಮೇಟಿ ಮಾತನಾಡಿ, ಸರ್ಕಾರದ ಈ ಪೋಲಿಯೋ ಲಸಿಕೆಯಂತಹ ನಿರ್ಧಾರದಿಂದ ಇಂದು ಮುಂಡರಗಿ ತಾಲೂಕು ಪೋಲಿಯೋ ಮುಕ್ತ ತಾಲೂಕಾಗಿದೆ ಎಂದರು. ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಪ್ರಕಾಶ ಹೊಸಮನಿ ಮಾತನಾಡಿದರು.
ಪುರಸಭೆಯ ಸದಸ್ಯ ವೀರೇಶ ಸಜ್ಜನ, ಅಬ್ದುಲ್ ಖುರೇಶಿ, ಸುರೇಶ ಬಣಗಾರ, ಅಶೋಕ ಅಂಗಡಿ, ದೇವರಾಜ ಹಡಪದ, ಡಾ. ಹರ್ಷವರ್ಧನ್, ಡಾ. ಸತೀಶ ಹಾದಿಮನಿ, ಡಾ. ರವಿಶಂಕರ, ಡಾ. ಸುನಂದಾ, ಡಾ. ಎಂ.ವಿ. ಸಾಲಿ, ಎನ್.ಬಿ.ಅಳವಂಡಿ, ಎಸ್.ಎಸ್. ಸರ್ವದೆ, ಸಿಸ್ಟರ್ ತಂಗೋಡ ಉಪಸ್ಥಿತರಿದ್ದರು.