ಮಕ್ಕಳಿಗೆ ಪೋಲಿಯೋ ಹನಿ ಅವಶ್ಯ: ಜಿ.ಎಸ್. ಪಾಟೀಲ್
ರೋಣ: ಪ್ರತಿಯೊಂದು ಮಗುವಿಗೂ ಪೋಲಿಯೋ ಹನಿ ಹಾಕಿಸಬೇಕು ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಅವರು ಭಾನುವಾರ ಪಟ್ಟಣದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರ್ಯಾಲಯದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಪುರಸಭೆ ರೋಣ ಇವರುಗಳ ಆಶ್ರಯದಲ್ಲಿ ಜರುಗಿದ 2014ನೇ ಸಾಲಿನ ಮೊದಲನೇ ಹಂತದ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಮಕ್ಕಳಿಗೆ ಪೋಲಿಯೋ ಹನಿ ಹಾಕುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು. ಪುರಸಭೆ ಅಧ್ಯಕ್ಷ ಮುತ್ತಣ್ಣ ಸಂಗಳದ ಮಾತನಾಡಿ, ಸರ್ಕಾರ ಮಕ್ಕಳ ಆರೋಗ್ಯ ರಕ್ಷಣೆಗಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಅವುಗಳ ಕುರಿತು ಸಾರ್ವಜನಿಕರು ತಿಳಿಯಬೇಕು ಎಂದರು.
ಕಾರ್ಯಕ್ರಮದಲ್ಲಿ ತಾಲೂಕ ನೋಡಲ್ ಅಧಿಕಾರಿ ಡಾ. ಎಚ್. ಸಿದ್ದಪ್ಪ, ಸಿಡಿಪಿಒ ಬಿ.ಎಸ್. ಮೋಕಾಶಿ, ತಾಲೂಕು ವೈದ್ಯಾಧಿಕಾರಿ ಡಾ. ಎಂ.ಬಿ. ಪೊಲೀಸ್‌ಪಾಟೀಲ, ಭವಾನಿ ಬೇಟಗೇರಿ, ಕುಮಾರಸ್ವಾಮಿ ಹಿರೇಮಠ, ಹಿರಿಯ ಆರೋಗ್ಯ ಸಹಾಯಕ ಎಸ್.ಎನ್. ಪಾಟೀಲ, ಕೆ.ಎಲ್. ಅಟಗಲ್, ಆನಂದ ಜವಾರಿ, ಮಾರುತಿ ಚಲವಾದಿ, ಸಂಗಮ್ಮ ಬಡಿಗೇರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.