ಶಾಲೆ ಸ್ಥಳಾಂತರ: ಮಕ್ಕಳಿಗೆ ಗಂಡಾಂತರ
ಗಜೇಂದ್ರಗಡ: ಸಮೀಪದ ದಕ್ಷಿಣ ಕಾಶಿ ಪ್ರಸಿದ್ಧಿ ಐತಿಹಾಸಿಕ ಕಾಲಕಾಲೇಶ್ವರ ದೇಗುಲ ಸನ್ನಿಧಿ ಬಳಿಯ ಕಾಲಕಾಲೇಶ್ವರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕಿತ್ತೂರ ರಾಣಿ ಚನ್ನಮ್ಮಾ ಬಾಲಕಿಯರ ವಸತಿ ಶಾಲೆ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಿದ ಪರಿಣಾಮ ಎರಡೂ ಶಾಲೆಯ ನೂರಾರು ಮಕ್ಕಳು ಸಮಸ್ಯೆ ಎದುರಿಸುವಂತಾಗಿದೆ.
ಕಿತ್ತೂರ ರಾಣಿ ಚನ್ನಮ್ಮ ಶಾಲೆಗೆ ಸ್ವಂತ ಕಟ್ಟಡ ಇಲ್ಲಾ. ಹೀಗಾಗಿ ಕಾಲಕಾಲೇಶ್ವರ ದೇಗುಲ ಎದುರಿನ ರುದ್ರಪಾದಗಟ್ಟಿ ಬೆಟ್ಟದ ಕೆಳಗಿರುವ ಮೊರಾರ್ಜಿ ವಸತಿ ಶಾಲೆಯಲ್ಲಿ ಕಿತ್ತೂರ ರಾಣಿ ಚನ್ನಮ್ಮ ಶಾಲೆ ನಡೆಸಲಾಗುತ್ತಿದೆ. ಜನರ ಒಡನಾಟದಲ್ಲಿ ವಿಶಾಲತೆ ಪ್ರತೀಕದಂತೆ ಕಾಣುವ ಬೆಟ್ಟಗುಡ್ಡಗಳ ಜತೆಗೆ ಪ್ರಕೃತಿ ಮಾತೆ ಮಡಿಲಲ್ಲಿರುವ ಈ ವಸತಿ ಶಾಲೆಯ ಮಕ್ಕಳು ಯಾವಾಗಲೂ ಒಂದಿಲ್ಲೊಂದು ಅವಾಂತರಗಳಿಗೆ ಸಿಲುಕುವುದು ಸಾಮಾನ್ಯವಾಗಿದೆ.
ಹೆಚ್ಚಿದ ವಿದ್ಯಾರ್ಥಿಗಳು: ಒಟ್ಟು 250 ವಿದ್ಯಾರ್ಥಿಗಳು ಕಲಿಯುವ ಸಾಮರ್ಥ್ಯದ ಮೊರಾರ್ಜಿ ವಸತಿ ಶಾಲೆಯಲ್ಲಿ 6 ರಿಂದ 10ನೇ ತರಗತಿ 232 ಮತ್ತು ಕಿತ್ತೂರ ರಾಣಿ ಚನ್ನಮ್ಮ ಶಾಲೆಯ 170 ವಿದ್ಯಾರ್ಥಿನಿಯರು ಸೇರಿ ಒಟ್ಟು 402 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಒಟ್ಟು 8 ತರಗತಿ ಕೊಠಡಿಯಲ್ಲಿ 5 ಕಿತ್ತೂರ ರಾಣಿ ಚೆನ್ನಮ್ಮಾ ಶಾಲೆ ಮಕ್ಕಳಿಗೆ ಮತ್ತು ಮೂರು ಮೊರಾರ್ಜಿ ಶಾಲೆಗೆ ಬಳಸಲಾಗುತ್ತಿದೆ. 18 ಮಕ್ಕಳು ವಾಸಿಸುವ ಒಂದು ಕೊಠಡಿಯಲ್ಲಿ 32 ಮಕ್ಕಳು ಇದ್ದಾರೆ. ಇದು ನೀರು ಇಳಿಯದ ಗಂಟಲಲ್ಲಿ ಕಡುಬು ತುರುಕಿದಂತಾಗಿದೆ.
ಡೈನಿಂಗ್ ಟೇಬಲ್ ಸಮಸ್ಯೆ: ಕಿತ್ತೂರ ರಾಣಿ ಚೆನ್ನಮ್ಮ ಬಾಲಕಿಯರ ವಸತಿ ಶಾಲೆ ಕಟ್ಟಡ ಆಮೆಗತಿಯಿಂದ ಸಾಗಿದೆ. ಹೀಗಾಗಿ ಮೊರಾರ್ಜಿ ಶಾಲೆಯಲ್ಲಿ ಊಟ ನೀಡುವಲ್ಲಿ ತಾರತಮ್ಯ ನಡೆಯುತ್ತಿದೆ. ಮುರಿದಿರುವ ಕೆಲ ಡೈನಿಂಗ್ ಟೇಬಲ್‌ಗಳೇ ಮಕ್ಕಳ ಪಾಲಿಗೆ ಗತಿ. ಈ ಡೈನಿಂಗ್ ಟೇಬಲ್‌ಗಳ ಮೇಲೆ ಬಾಲಕರು ಕುಳಿತು ಊಟ ಮಾಡುವಂತಿಲ್ಲ. ನೆಲಕ್ಕೆ ಕುಳಿತು ಊಟ ಮಾಡುತ್ತಾರೆ. ಬಾಲಕಿಯರಿಗೆ ಮಾತ್ರ ಡೈನಿಂಗ್ ಟೇಬಲ್ ಬಳಸುವಂತೆ ಸೂಚಿಸಲಾಗಿದೆ.
ರಸ್ತೆ ಅವ್ಯವಸ್ಥೆ: ಕಾಯಂ ಪ್ರಾಂಶುಪಾಲರು, ವಾರ್ಡನ್ ಇಲ್ಲದ ಈ ವಸತಿ ಶಾಲೆಗೆ ಮುಳ್ಳಿನಿಂದ ಹದಗೆಟ್ಟ ರಸ್ತೆ ಇದೆ. ಪಾಠ ಬೋಧಿಸುವ ಶಿಕ್ಷಕರು, ಪಠ್ಯಪುಸ್ತಕ ಜತೆಗೆ ಮಕ್ಕಳು ಅರ್ಧ ವಾರ್ಷಿಕ ರಜೆ ಕಳೆದು ಈಗ ವಸತಿ ಶಾಲೆಗೆ ಹಾಜರಾಗಿದ್ದಾರೆ. ಆದರೆ, ಪಾಲಕರು ಮಕ್ಕಳನ್ನು ಕಾಣಲು ಶಾಲೆಗೆ ಹೋಗುವ ಅಂದಾಜು ಅರ್ಧ ಕಿ.ಮೀ. ಕಲ್ಲು, ಮುಳ್ಳಿನ ರಸ್ತೆಯಲ್ಲೇ ಸಾಗಬೇಕು. ಇದು ಪಾಲಕರನ್ನು ಕೆರಳಿಸುವಂತೆ ಮಾಡಿದೆ. ಬೋಧನೆ ಮತ್ತು ಕಲಿಕೆಗೆ ಸಂಬಂಧಿಸಿದ ಚಟುವಟಿಕೆ ಈ ವಸತಿ ಶಾಲೆಯಲ್ಲಿ ಎಂದಿನಂತೆ ಶುರುವಾಗಿವೆ. ಇಲ್ಲಿ ವಿಶಾಲವಾದ ಮೈದಾನವಿದೆ. ಸುಸಜ್ಜಿತ ಕಟ್ಟಡ ಇದ್ದರೂ ವಸತಿ ಶಾಲೆಯ ಮಕ್ಕಳಿಗೆ ರಾತ್ರಿ ಹೊತ್ತು ಸುರಕ್ಷತೆ ಇಲ್ಲದಂತಾಗಿದೆ. ಸಮಾಜ ಕಲ್ಯಾಣ ಇಲಾಖೆ ಸುಪರ್ದಿಯಲ್ಲಿರುವ ಈ ವಸತಿ ಶಾಲೆ ಶಿಕ್ಷಣಕ್ಕಾಗಿ ಸರ್ಕಾರ ಪ್ರತಿ ವರ್ಷ ಹಲವಾರು ಕೋಟಿ ಅನುದಾನ ಒದಗಿಸುತ್ತಿದೆ. ಆದರೂ ಶಾಲೆಗೆ ತೆರಳಲು ರಸ್ತೆಯಂತಹ ಮೂಲ ಸೌಲಭ್ಯ ಕಲ್ಪಿಸುವಲ್ಲಿ ಅಧಿಕಾರಿಗಳು ಎಡವಿದ್ದಾರೆ. ಈ ಸಮಸ್ಯೆ ನಿವಾರಣೆಗೆ ಜಿಲ್ಲಾಡಳಿತ ಮುಂದಾಗಲು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕಾಲಕಾಲೇಶ್ವರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕಿತ್ತೂರ ರಾಣಿ ಚನ್ನಮ್ಮ ಬಾಲಕಿಯರ ವಸತಿ ಶಾಲೆ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಿದ ಪರಿಣಾಮ ಎರಡೂ ವಸತಿ ಶಾಲೆ ನೂರಾರು ಮಕ್ಕಳಿಗೆ ತೊಂದರೆಯಾಗಿದೆ. ಶೀಘ್ರದಲ್ಲಿ ಕಿತ್ತೂರ ರಾಣಿ ಚನ್ನಮ್ಮ ಬಾಲಕಿಯರ ವಸತಿ ಶಾಲೆ ನಿರ್ಮಾಣವಾದರೆ ಎಲ್ಲ ತೊಂದರೆ ನಿವಾರಣೆಯಾಗಲಿದೆ.
ಪ್ರಭಾರಿ ವಾರ್ಡನ್
ಸದಾ ಒಂದಿಲ್ಲೊಂದು ಸಮಸ್ಯೆಯಿಂದ ಬಳಲುತ್ತಿರುವ ಕಾಲಕಾಲೇಶ್ವರ ಮೊರಾರ್ಜಿ ದೇಸಾಯಿ ಹಾಗೂ ಕಿತ್ತೂರು ರಾಣಿ ಚನ್ನಮ್ಮ ಬಾಲಕಿಯರ ವಸತಿ ಶಾಲೆಗೆ ಮೂಲ ಸೌಲಭ್ಯ ಒದಗಿಸಲು ಆಗ್ರಹಿಸಿ ಸಿಪಿಐಎಂ ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಕೂಡಲೇ ವಸತಿ ಶಾಲೆಗೆ ತೆರಳುವ ರಸ್ತೆ ಸೇರಿದಂತೆ ಬೋಧಕ-ಬೋಧಕೇತರ ಕಾಯಂ ಸಿಬ್ಬಂದಿ, ಜತೆ ಮೂಲ ಸೌಲಭ್ಯ ನೀಡಲು ಮುಂದಾಗದಿದ್ದಲ್ಲಿ ಸಂಘಟನೆ ವತಿಯಿಂದ ಉಗ್ರ ಪ್ರತಿಭಟನೆ ಕೈಗೊಳ್ಳಲಾಗುವುದು.
- ಎಂ.ಎಸ್. ಹಡಪದ, ಸಿಪಿಐಎಂ ಮುಖಂಡ
ಡಿ.ಜಿ. ಮೋಮಿನ್