ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ. ಇಮ್ರಾಪುರ

Mainashree
Updated On : 20 Jan 2014, 11:59 am

ಗದಗ: ಫೆಬ್ರವರಿ 2ನೇ ವಾರದಲ್ಲಿ ಜಿಲ್ಲೆಯ ರೋಣ ಪಟ್ಟಣದಲ್ಲಿ ಜರುಗುವ ಗದಗ ಜಿಲ್ಲಾ 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಜಾನಪದ ತಜ್ಞ, ವಿದ್ವಾಂಸ, ಕವಿ ಡಾ. ಸೋಮಶೇಖರ ಇಮ್ರಾಪುರ ಅವರನ್ನು ಸರ್ವಾನುಮತದಿಂದ ಆಯ್ಕೆಗೊಳಿಸಲಾಗಿದೆ ಎಂದು 6ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ಹಾಗೂ ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಅವರು ಭಾನುವಾರ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಾಹಿತ್ಯ, ಸಂಸ್ಕೃತಿಗೆ ಹೆಸರುವಾಸಿಯಾದ ರೋಣ ತಾಲೂಕಿನಲ್ಲಿ ಈ ಬಾರಿ ಗದಗ ಜಿಲ್ಲಾ 6ನೇ ಕನ್ನಡ ಸಾಹಿತ್ಯ ಸಮ್ಮೇಳನ ಫೆಬ್ರವರಿ 2ನೇ ವಾರದಲ್ಲಿ ನಡೆಯಲಿದೆ. ಸಮ್ಮೇಳನವನ್ನು ಅರ್ಥಪೂರ್ಣವಾಗಿ ನಡೆಸಬೇಕೆಂಬುದು ಸ್ವಾಗತ ಸಮಿತಿಯ ಆಶಯವಾಗಿದೆ. ನಾಡಿನ, ಜಿಲ್ಲೆಯ ಏಳ್ಗೆಯ ದೃಷ್ಟಿಯನ್ನಿಟ್ಟುಕೊಂಡು ಸಮ್ಮೇಳನದ ರೂಪು ರೇಷೆಗಳನ್ನು ತಯಾರಿಸಲಾಗುತ್ತಿದೆ.
ಈ ಸಮ್ಮೇಳನದ ಪೂರ್ವ ಸಿದ್ಧತೆ ಪ್ರಾರಂಭಿಸಲಾಗಿದೆ. ಸಮ್ಮೇಳನದ ಕಾರ್ಯಾಲಯವನ್ನು ಮಕರ ಸಂಕ್ರಾಂತಿಯಂದು ಚಾಲನೆ ನೀಡಲಾಗಿದೆ. ಕರ್ತವ್ಯ ನಿಷ್ಠರನ್ನೊಳಗೊಂಡ ವಿವಿಧ ಉಪಸಮಿತಿಗಳು ರಚನೆಯಾಗಿವೆ. ಗದಗ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಜನ ಪ್ರತಿನಿಧಿಗಳೊಂದಿಗೆ ಸಾಹಿತ್ಯಾಸಕ್ತರೊಂದಿಗೆ ಚರ್ಚಿಸಲಾಗಿದೆ. ಪೂರ್ವಭಾವಿ ಸಭೆಗಳಲ್ಲಿ ರೋಣ ತಾಲೂಕಿನ ಎಲ್ಲ ಜನಪ್ರತಿನಿಧಿಗಳು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ನೌಕರ ಸಂಘಟನೆಗಳ ಪದಾಧಿಕಾರಿಗಳು, ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು, ತಾಲೂಕಿನ ಸ್ವಸಹಾಯ ಗುಂಪಿನವರು, ವ್ಯಪಾರಸ್ಥರು, ಗಣ್ಯರು, ಅಂಗನವಾಡಿ ಕಾರ್ಯಕರ್ತೆಯರು, ವಿವಿಧ ಸಂಘ-ಸಂಸ್ಥೆಯವರು ಹಾಗೂ ಕನ್ನಡಪರ ಸಂಘಟನೆಗಳ ಮುಖಂಡರುಗಳು ಪಾಲ್ಗೊಂಡು ಉತ್ತಮ ಸಹಕಾರ ನೀಡುವುದಾಗಿ ಭರವಸೆ ನೀಡಿರುತ್ತಾರೆ.
ಸಮ್ಮೇಳನದ ಉದ್ಘಾಟನೆಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಆಹ್ವಾನಿಸಲಾಗಿದೆ. ಅವರು ಫೆ. 9ರಂದು ತಾತ್ಕಾಲಿಕ ದಿನಾಂಕವನ್ನು ನೀಡಿದ್ದಾರೆ. ಗೋಷ್ಠಿಗಳಲ್ಲಿ ಜಿಲ್ಲೆಯ ಸಾಹಿತ್ಯ, ಸಂಸ್ಕೃತಿ, ಕೃಷಿ, ವ್ಯಾಪಾರ, ಕೈಗಾರಿಕೆ, ನಿರುದ್ಯೋಗ, ಶಿಕ್ಷಣ, ಆರೋಗ್ಯ, ಮಕ್ಕಳು, ಯುವಕರು, ಮಹಿಳೆಯರು ಮೊದಲಾದವರಿಗೆ ಸಂಬಂಧಿಸಿದ ವಿಷಯಗಳು ಒಳಗೊಂಡಿರುತ್ತವೆ. ಸಮ್ಮೇಳನಕ್ಕೆ ನಾಡಿನ ವಿದ್ವಾಂಸರು, ಸಾಹಿತಿಗಳು, ಕಲಾವಿದರು, ಸಂಗೀತಗಾರರನ್ನು ಆಮಂತ್ರಿಸಲಾಗುವುದು ಎಂದರು.
ಕಸಾಪ ಜಿಲ್ಲಾಧ್ಯಕ್ಷ ಡಾ. ಶಿವಪ್ಪ ಕುರಿ, ಡಾ. ಶಿವರಾಜ ಗುರಿಕಾರ, ವಿ.ಆರ್. ಗುಡಿಸಾಗರ, ಪರಶುರಾಮ ಅಳಗವಾಡಿ, ಬಸವರಾಜ ನವಲಗುಂದ, ಶರಣು ಗೋಗೇರಿ, ಡಾ. ಸಂಗಮೇಶ ತಮ್ಮನಗೌಡ್ರ, ಮಲ್ಲೇಶ ಡಿ.ಎಚ್, ಪ್ರಾ. ಬಿ.ಎಫ್. ಚೇಗರಡ್ಡಿ, ವಿ.ಬಿ. ತಾಳಿ, ಡಿ.ಎಸ್. ತಳವಾರ, ವಿ.ಬಿ. ಸೋಮನಕಟ್ಟಿಮಠ, ಕೆ.ಎಸ್. ಕಳಕಣ್ಣವರ, ಕಿಶೋರಬಾಬು ನಾಗರಕಟ್ಟಿ, ಬಿ.ಜಿ. ಹಿರೇಮಠ, ಜಿ.ಎಸ್. ಯತ್ನಟ್ಟಿ, ಎಸ್.ಎಸ್. ತಳ್ಳಿಹಾಳ, ಕವಿತಾ ದಂಡಿನ, ಶಶಿಕಾಂತ ಕೊರ್ಲಹಳ್ಳಿ, ಮಲ್ಲಿಕಾರ್ಜುನ ಪೂಜಾರ, ಕೆ.ಕೆ. ಹೂಗಾರ, ವಿ.ಎನ್. ಅಮಾತಿಗೌಡ್ರ, ಬಸವರಾಜ ಬಳ್ಳಾರಿ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement