ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸಮಸ್ಯೆ ಸವಾಲಾಗಿ ಸ್ವೀಕರಿಸಿ

Mainashree
Updated On : 21 Jan 2014, 12:30 pm

ಲಕ್ಷ್ಮೇಶ್ವರ: ಜೀವನದಲ್ಲಿ ಬರುವ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ ಮುನ್ನುಗ್ಗಬೇಕು ಎಂದು ಅಂತರ್ರಾಷ್ಟ್ರೀಯ ಖ್ಯಾತಿಯ, ಅಂಧರ ಪ್ರಗತಿಗಾಗಿ ಶ್ರಮಿಸುತ್ತಿರುವ ಅಶ್ವಿನಿ ಅಂಗಡಿ ಅಭಿಪ್ರಾಯಪಟ್ಟರು.
ಅವರು ಭಾನುವಾರ ಸಂಜೆ ಪಟ್ಟಣದ ಆಕ್ಸ್ಫರ್ಡ್ ಶಾಲೆಯಲ್ಲಿ ಜರುಗಿದ ವಾರ್ಷಿಕೋತ್ಸವ ಉದ್ಘಾಟಿಸಿ ಶಾಲೆಯ ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಿಮ್ಮ ಜೀವನದಲ್ಲಿ ನಿಮಗೆ ಸ್ಫೂರ್ತಿ ಯಾರು? ಎಂದು ಶಾಲೆಯ ವಿದ್ಯಾರ್ಥಿನಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಶ್ವಿನಿ ಅಂಗಡಿ, ನಾನು ಚಿಕ್ಕವಳಿದ್ದಾಗ ಆದ ಘಟನೆಯಿಂದ ನನ್ನ ಕಣ್ಣುಗಳು ಕಾಣದಾಗಿ ಕತ್ತಲು ಆವರಿಸಿದಾಗ, ಈ ಅಂಧ ಹುಡುಗಿ ಮುಂದೆ ಏನು ತಾನೇ ಮಾಡಬಲ್ಲಳು. ಎಂಬ ಕುಹಕದ ಮಾತುಗಳು ಹಾಗೂ ನಾನು ಅನುಭವಿಸಿದ ಇತರ ಕಹಿ ಘಟನೆಗಳು ನನ್ನನ್ನು ಇಷ್ಟು ಎತ್ತರಕ್ಕೆ ಬೆಳೆಯಲು ಸ್ಫೂರ್ತಿಯಾಗಿವೆ ಎಂದರು. ನಿಮ್ಮ ಮುಂದಿನ ಗುರಿ ಏನು?  ಎನ್ನುವ ಪ್ರಶ್ನೆಗೆ, ನಾನು ಮುಂಬರುವ ದಿನಗಳಲ್ಲಿ ಹಾವೇರಿಯಲ್ಲಿ ಅಂಧ ಮಕ್ಕಳ ಶಿಕ್ಷಣಕ್ಕಾಗಿ ಅಂತರ್ರಾಷ್ಟ್ರೀಯ ಮಟ್ಟದ ಶಾಲೆಯನ್ನು ತೆರೆಯಬೇಕೆಂದು ಯೋಜನೆಯನ್ನು ಹಾಕಿಕೊಂಡಿದ್ದು, ಈಗ ಅಂಧ ಮಕ್ಕಳಿಗೆ ಕೇವಲ ಬ್ರೈಲ್ ಲಿಪಿಯಲ್ಲಿ ಶಿಕ್ಷಣವನ್ನು ಹೇಳಿಕೊಡುವ ಕಾರ್ಯ ನಡೆಯುತ್ತಿದೆ. ಇದು ಕೇವಲ 10ನೇ ತರಗತಿಯವರೆಗೆ ಮಾತ್ರ ಇದ್ದು, ಇಲ್ಲಿಯೂ ಕೂಡ ಪರೀಕ್ಷೆ ಬರೆಯಲು ಬೇರೆಯವರ ಸಹಾಯ ಪಡೆಯಬೇಕಾಗುತ್ತದೆ. ತಾವು ಬರೆಯುವ ಪರೀಕ್ಷೆಗಾಗಿ ಬೇರೆಯವರನ್ನು ಅವಲಂಬಿಸಬೇಕಾಗಿದೆ. ಇದು ಹೋಗಬೇಕು. ನಾನು ಹಾವೇರಿಯಲ್ಲಿ ಪ್ರಾರಂಭಿಸಲು ಯೋಜಿಸಿರುವ ಶಾಲೆಯಲ್ಲಿ ಅಂಧ ಮಕ್ಕಳಿಗೆ ಎಲ್ಲ ರೀತಿಯ ಶಿಕ್ಷಣವನ್ನು ಕಂಪ್ಯೂಟರ್ ಮೂಲಕ ನೀಡಬೇಕು ಹಾಗೂ ಅಂಧ ಮಕ್ಕಳು ಇನ್ನೊಬ್ಬರಿಗೆ ಭಾರವಾಗದ ರೀತಿಯಲ್ಲಿ ಬೆಳೆಯಬೇಕು ಎನ್ನುವ ಗುರಿಹೊಂದಿರುವುದಾಗಿ ತಿಳಿಸಿದರು.
ಶಿಕ್ಷಣ ತಜ್ಞ, ಲೇಖಕ ಅರಿಂದಮ್ರಾಯ್ ಚೌಧರಿ ಮಾತನಾಡಿ, ಕಷ್ಟ, ಅಡೆ ತಡೆಗಳನ್ನು ಯಶಸ್ವಿಯಾಗಿ ಧೈರ್ಯದಿಂದ ದಾಟಿ ಸಾಗಿದಾಗ ಉತ್ತಮ ಭವಿಷ್ಯ ನಿಮಗಾಗಿ ಕಾಯುತ್ತಿರುತ್ತದೆ ಎಂದರು.
ಡಾ. ಪ್ರಕಾಶ ಮಾಡಲಗೇರಿ, ಸಂಸ್ಥೆಯ ಅಧ್ಯಕ್ಷ ಮಹಾಬಳೇಶ್ವರಪ್ಪ ಬೇವಿನಮರದ, ಸಂಸ್ಥೆಯ ಮಾರ್ಗದರ್ಶಕ ರೇಖಾ ತುಪ್ಪದ ಮಾತನಾಡಿದರು. ಲಕ್ಷ್ಮೇಶ್ವರ ರೋಟರಿ ಸಂಸ್ಥೆಯ ಅಧ್ಯಕ್ಷ ಬಸವರಾಜ ಬಾಳೇಶ್ವರಮಠ, ನಿರ್ದೇಶಕ ವಸಂತ ಬೇವಿನಮರದ, ಎಸ್.ಎಂ. ಬೇವಿನಮರದ, ರೋಹಿಣಿ ಬೇವಿನಮರದ, ಸುಮಂಗಲಾ ಬೇವಿನಮರದ, ಅನಂತರಾಜ ಮಿಣಜಗಿ, ಮುಖ್ಯೋಪಾಧ್ಯಾಯಿನಿ ಪಿ.ಬಿ. ದೇಸಾಯಿ ಮುಂತಾದವರು ಉಪಸ್ಥಿತರಿದ್ದರು. ಲೋಕೇಶ ಗೌಡರ ಸ್ವಾಗತಿಸಿದರು. ಶಿಕ್ಷಕಿ ಎನ್.ಎಂ. ಮುಳಗುಂದ ನಿರೂಪಿಸಿದರು. ಸಿ.ಜಿ. ಶಿವಶೆಟ್ಟರ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement