ಅಂಬಿಗರು ಲಿಂಗಧಾರಣೆಗೆ ಪ್ರಾಮುಖ್ಯ ನೀಡಲಿ
ಗದಗ: ಬಸವ ಚಿಂತನೆಗಳ ಅಳವಡಿಕೆಯ ಮೂಲಕ ಅಂಬಿಗ ಸಮುದಾಯ ಲಿಂಗಧಾರಣೆಗೆ ಪ್ರಾಮುಖ್ಯತೆ ನೀಡಲಿ ಎಂದು ತೋಂಟದಾರ್ಯ ಮಠದ ಡಾ. ಸಿದ್ಧಲಿಂಗ ಶ್ರೀಗಳು ಹೇಳಿದರು.
ಅವರು ಮಂಗಳವಾರ ನಗರದ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಿಜ ಶರಣ ಅಂಬಿಗ ಚೌಡಯ್ಯನವರ ಸೇವಾ ಸಮಿತಿ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಕಠಿಣ ಪರಿಶ್ರಮಿಗಳಾದ ಅಂಬಿಗ ಸಮುದಾಯದಲ್ಲಿ ಧ್ರುವತಾರೆಯಾಗಿ ಹೊರಹೊಮ್ಮಿದ ಚೌಡಯ್ಯನವರ ಆದರ್ಶಗಳ ಪಾಲನೆಯ ಮೂಲಕ ಸಮಾಜ ಬಾಂಧವರು ಶೈಕ್ಷಣಿಕ ಜಾಗೃತಿಗೆ ಮಹತ್ವ ನೀಡಿ, ಉನ್ನತ ಪರಂಪರೆಯ ವಾರಸುದಾರರಾಗಬೇಕಿದೆ. ತರ್ಕಬದ್ದ ವಚನಗಳ ಮೂಲಕ ಸಮಾಜದಲ್ಲಿ ತುಂಬಿದ್ದ ಡಂಬಾಚಾರ, ಕಂದಾಚಾರ, ಜಾತೀಯತೆ, ಬಹುದೇವ ಸಂಸ್ಕೃತಿಯನ್ನು 12ನೇ ಶತಮಾನದಲ್ಲಿಯೇ ವಿರೋಧಿಸುವ ಮೂಲಕ ಸಮಾಜದಲ್ಲಿ ಜಾಗೃತಿಗೆ ಶ್ರಮಿಸಿದ ಚೌಡಯ್ಯನವರ ಆದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು.
12ನೇ ಶತಮಾನ ಜಗತ್ತಿನ ಮಹತ್ವದ ಯುಗವಾಗಿದ್ದು, ಕತ್ತಲೆಯ ಯುಗದಲ್ಲಿ ಬೆಳಕು ಪಸರಿಸಿದ ಕೀರ್ತಿ ಬಸವಣ್ಣವರಿಗೆ ಸಲ್ಲುತ್ತದೆ. ದೇಶದ 3 ಸಾವಿರಗಳ ಜಾತಿ, ಜನಾಂಗಗಳಲ್ಲಿ ಬಹುಜಾತಿ, ಬಹು ಧರ್ಮ, ಬಹು ಸಂಸ್ಕೃತಿ ಹೊಂದಿದ ದೇಶದಲ್ಲಿ ವರ್ಗಭೇದ, ವರ್ಣಭೇದ, ಜಾತಿಭೇದ ವ್ಯವಸ್ಥಿತವಾಗಿ ಸಾಗಿದ್ದು. ಇವುಗಳ ತಡೆಗೆ ಚೌಡಯ್ಯನವರ ವಚನಗಳು ಉತ್ತಮ ಆದರ್ಶಗಳಾಗಿವೆ. ಕಲಿಯುಗದಲ್ಲಿ ಸಂಘ ಶಕ್ತಿಯ ಮೇಲೆ ಅಪಾರವಾದ ನಂಬುಗೆ ಇದೆ ಎಂದರು.
ಚೌಡಯ್ಯನವರ ಕುರಿತು ಬಾದಾಮಿ ವೀರಪುಲಕೇಶಿ ಪಪೂ ಕಾಲೇಜಿನ ಉಪನ್ಯಾಸಕಿ ಡಾ. ಪಾರ್ವತಿ ಲಂಕೆಣ್ಣವರ ವಿಶೇಷ ಉಪನ್ಯಾಸ ನೀಡಿದರು. ಆಕಾಶವಾಣಿ ಕಲಾವಿದ ಡಿ.ಕುಮಾರದಾಸ ಅವರಿಂದ ಚೌಡಯ್ಯನವರ ವಚನಗಳ ಗಾಯನ ಜರುಗಿತು. ಕಾರ್ಯಕ್ರಮದಲ್ಲಿ ಜಿಪಂ ಅಧ್ಯಕ್ಷ ಕಮಲವ್ವ ಸಜ್ಜನ, ಉಪಾಧ್ಯಕ್ಷ ರಮೇಶ ಮುಂದಿನಮನಿ, ತಾಪಂ ಹನುಮಪ್ಪ ಇಂಗಳಳ್ಳಿ, ಜಿ.ಎಸ್. ಷಡಕ್ಷರಪ್ಪ, ನಗರಸಭೆ ಸದಸ್ಯರಾದ ಜ್ಯೋತಿ ಇರಾಳ, ಜಯಶ್ರೀ ಭೈರವಾಡೆ, ಮೇಘಾ ಮುದಗಲ್ಲ, ಶಿವಲೀಲಾ ಅಕ್ಕಿ, ಅಪರ ಜಿಲ್ಲಾಧಿಕಾರಿ ನಾಗರಾಜ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬನಶಂಕರಿ ಅಂಗಡಿ ಮುಂತಾದವರು ಹಾಜರಿದ್ದರು. ಉಪವಿಭಾಗಾಧಿಕಾರಿ ಇಸ್ಲಾಉದ್ದೀನ್ ಗದ್ಯಾಳ ಸ್ವಾಗತಿಸಿದರು. ದತ್ತಪ್ರಸನ್ ಪಾಟೀಲ ನಿರೂಪಿಸಿದರು. ಬಿ.ಎನ್.ಯರನಾಳ ವಂದಿಸಿದರು.
ಆಕರ್ಷಕ ಮೆರವಣಿಗೆ: ಕಳೆದ ವರ್ಷದಿಂದ ಸರ್ಕಾರಿ ಕಾರ್ಯಕ್ರಮವಾಗಿ ಆಚರಣೆಯಲ್ಲಿರುವ ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವ ಅಂಗವಾಗಿ ನಗರದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಅವರ ಭಾವಚಿತ್ರದ ಮೆರವಣಿಗೆಗೆ ಅಪರ ಜಿಲ್ಲಾಧಿಕಾರಿ ನಾಗರಾಜ ನಗರದ ಉಡಚಮ್ಮ ದೇವಸ್ಥಾನದ ಬಳಿ ಚಾಲನೆ ನೀಡಿದರು. ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕಾರ್ಯಕ್ರಮ ಸ್ಥಳ ತೋಂಟದಾರ್ಯ ಕಲ್ಯಾಣ ಕೇಂದ್ರಕ್ಕೆ ತಲುಪಿತು. 250ಕ್ಕೂ ಹೆಚ್ಚಿನ ಮಹಿಳೆಯರು ಕುಂಭದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಚೌಡಯ್ಯ ಕೊಡುಗೆ ಅನನ್ಯ: ಪಾಟೀಲ
ರೋಣ: ನಿತ್ಯ ಕಾಯಕದಲ್ಲಿ ಬದುಕು ಹಸನಾಗುವುದು, ಜೀವನಕ್ಕೆ ಮುಕ್ತಿ ಸಿಗುವುದು ಎಂದು ವಚನಗಳ ಮೂಲಕ ನೀತಿ ಸಂದೇಶವನ್ನು ಸಾರಿದ ನಿಜಶರಣ ಅಂಬಿಗರ ಚೌಡಯ್ಯ ಅವರ ಕೊಡುಗೆ ಇಂದಿಗೂ ಅನನ್ಯವಾಗಿದೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಅವರು ಮಂಗಳವಾರ ಪಟ್ಟಣದ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ತಾಲೂಕು ಆಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರುಗಳ ಆಶ್ರಯದಲ್ಲಿ ಜರುಗಿದ ನಿಜಶರಣ ಅಂಬಿಗರ ಚೌಡಯ್ಯರವರ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರೌಡಶಾಲಾ ಸಹ ಶಿಕ್ಷಕ ಸಿ.ಎಂ. ವಡಗೇರಿ ಮಾತನಾಡಿ, ಬಸವಣ್ಣ, ಅಕ್ಕಮಹಾದೇವಿ, ಆಯ್ದಕ್ಕಿ ಲಕ್ಕಮ್ಮ, ಹರಳಯ್ಯ ಮುಂತಾದ ಶರಣರಂತೆ ಅಂಬಿಗರ ಚೌಡಯ್ಯನವರು ವಚನಗಳ ಮೂಲಕ ನಾಡಿಗೆ ಮಹಾನ್ ಕೊಡುಗೆ ನೀಡಿದ್ದಾರೆ ಎಂದರು. ಗುಲಗಂಜಿಮಠದ ಗುರುಪಾದ ಸ್ವಾಮೀಜಿ ಆಶೀರ್ವಚನ ನೀಡಿದರು. ತಾಪಂ ಅಧ್ಯಕ್ಷೆ ತಿಪ್ಪವ್ವ ದೊಡ್ಡಮನಿ, ಉತ್ಸವ ಸಮಿತಿ ಅಧ್ಯಕ್ಷ ಕಾಶಪ್ಪ ಬಳಗಾನೂರ, ಪುರಸಭೆ ಅಧ್ಯಕ್ಷ ಮುತ್ತಣ್ಣ ಸಂಗಳದ, ವಿ.ಆರ್. ಗುಡಿಸಾಗರ, ದಶರಥ ಗಾಣಿಗೇರ, ಪರಶುರಾಮ ಅಳಗವಾಡಿ, ಬಿಇಓ ಡಿ.ಐ. ಅಸುಂಡಿ, ಸಿಡಿಪಿಓ ಬಿ.ಎಸ್. ಮೋಕಾಶಿ, ಬಸವಂತಪ್ಪ ತಳವಾರ, ವೀರಣ್ಣ ಹರದಾರಿ, ಬಸವರಾಜ ಅಂಬೀಗೇರ, ಅಂದಪ್ಪ ವೀರಾಪೂರ, ಉಮಾ ಜಾಲಗಾರ, ಶಿವಪುತ್ರಪ್ಪ ದೊಡ್ಡಮನಿ, ಶರಣಪ್ಪ ಕಬ್ಬೆರಿ ಇದ್ದರು. ತಹಸೀಲ್ದಾರ್ ಎ.ಜಿ. ಪಂಡಿತ ಸ್ವಾಗತಿಸಿದರು. ಪರಿಮಳಾ ದೇಶಪಾಂಡೆ ನಿರೂಪಿಸಿದರು. ಕೆ.ಎಸ್. ಬಾರಕೇರ ವಂದಿಸಿದರು.