ರೈತರ ಸಮಸ್ಯೆ ಪರಿಹಾರಕ್ಕೆ ಶ್ರಮಿಸಿ
ಕನ್ನಡಪ್ರಭ ವಾರ್ತೆ, ಗದಗ, ಜ. 21
ಪ್ರಕೃತಿ ವಿಕೋಪ ಹಾಗೂ ಅನಿಯಮಿತ ಮಳೆಯಿಂದಾಗಿ ಜಿಲ್ಲೆಯಾದ್ಯಂತ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ರೈತರಿಗೆ ಧೈರ್ಯ ತುಂಬುವ ಮೂಲಕ ರೈತರ ಸಮಸ್ಯೆಗಳನ್ನು ಬಗೆಹರಿಸಲು ಬಿಜೆಪಿ ರೈತ ಮೋರ್ಚಾ ಪದಾಧಿಕಾರಿಗಳು ಶ್ರಮಿಸಬೇಕು ಎಂದು ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ ಹೇಳಿದರು.
ಬೆಟಗೇರಿ ಬಸ್ ನಿಲ್ದಾಣ ಬಳಿಯ ಬಿಜೆಪಿ ರೈತ ಮೋರ್ಚಾ ಶಹರ ಘಟಕದ ಸಹಯೋಗದಲ್ಲಿ ನಡೆದ ಬಿಜೆಪಿ ಶಹರ ರೈತ ಮೋರ್ಚಾ ಕಾರ್ಯಕಾರಿಣಿ ಸಭೆಯಲ್ಲಿ ಅವರು ಮಾತನಾಡಿದರು.
ರೈತರ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗುತ್ತಿಲ್ಲ. ಸರ್ಕಾರ ರೈತರ ಬೇಡಿಕೆ ಈಡೇರಿಸುವಲ್ಲಿ ಮೀನಮೇಷ ಎಣಿಸುತ್ತಿದೆ. ದೇಶದಲ್ಲಿ ಒಕ್ಕಲುತನ ಸಮೃದ್ಧಿಯಾಗಲು ಮಾಜಿ ಪ್ರಧಾನಿ ವಾಜಪೇಯಿ ಅವರ ನದಿ ಜೋಡಣೆ ಕನಸು ನನಸಾಗಬೇಕಾಗಿದೆ. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಬರುವ ಚುನಾವಣೆಯಲ್ಲಿ ಬೆಂಬಲಿಸುವ ಮೂಲಕ ಬಿಜೆಪಿ ಅಧಿಕಾರಕ್ಕೆ ತಂದಲ್ಲಿ ರೈತರ ಅಭ್ಯುದಯ ಸಾಧ್ಯ ಎಂದರು. ಬಿಜೆಪಿ ರೈತ ಮೋರ್ಚಾ ಪದಾಧಿಕಾರಿಗಳಿಗೆ ನೇಮಕ ಪತ್ರ ನೀಡಿದ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶೋಕ ನವಲಗುಂದ, ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ರೈತ ಮೋರ್ಚಾ ಸಂಘಟನೆ ಬಲಪಡಿಸಬೇಕಾಗಿದೆ. ರೈತರ ಬೇಡಿಕೆಗೆ ಸ್ಪಂದಿಸಿ ಹೋರಾಟಕ್ಕೆ ಅಣಿಯಾಗಬೇಕಾಗಿದೆ ಎಂದರು. ಜಿಲ್ಲಾಧ್ಯಕ್ಷ ಬಸವಣ್ಣೆಪ್ಪ ಚಿಂಚಲಿ ಮಾತನಾಡಿ, ಇಂದಿನ ದಿನಗಳಲ್ಲಿ ರೈತರು ಒಕ್ಕಲುತನ ಮಾಡಿ ಲಾಭ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸರ್ಕಾರ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ರೈತರ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಿಸಬೇಕು. ಬೆಂಬಲ ಬೆಲೆ, ಬೀಜ, ರಸಗೊಬ್ಬರಕ್ಕಾಗಿ ರೈತ ಹೋರಾಟ ಮಾಡುವಂತ ಸ್ಥಿತಿ ಬಂದೊದಗಿರುವುದು ವಿಪರ್ಯಾಸ ಎಂದರು.
ಶಹರ ಅಧ್ಯಕ್ಷ ಡಿ.ಆರ್. ಪರಕಾಳಿ ಅಧ್ಯಕ್ಷತೆ ವಹಿಸಿದ್ದರು. ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ನಿಂಗಪ್ಪ ಮಣ್ಣೂರ, ಸಿ.ಎಂ. ಪಟ್ಟಣಶೆಟ್ಟಿ, ಬಿಜೆಪಿ ಶಹರ ಘಟಕ ಅಧ್ಯಕ್ಷ ಈಶಣ್ಣ ಮುನವಳ್ಳಿ, ಜಿಲ್ಲಾ ಕಾರ್ಯದರ್ಶಿ ಎಂ.ಎಂ. ಹಿರೇಮಠ, ಎಚ್.ಬಿ. ಅಳವಂಡಿ, ಮಹೇಶ ಕೋಟಿ, ಬಸವಂತಪ್ಪ ಜಂತ್ಲಿ, ವೀರಭದ್ರಪ್ಪ ಗಂಜಿ, ರಾಜಶೇಖರ ಶೀಲವಂತರ, ಆನಂದ ಕಲ್ಮನಿ, ಶೇಖಪ್ಪ ಹೊಂಬಳ, ತಿಪ್ಪಣ್ಣ ಫಿರಂಗಿ, ಅಶೋಕ ಶಿಗ್ಲಿ, ಫಕೀರಪ್ಪ ಫಿರಂಗಿ ಮುಂತಾದವರು ಹಾಜರಿದ್ದರು. ಶ್ರೀನಿವಾಸ ಹುಬ್ಬಳ್ಳಿ ಪ್ರಾಸ್ತಾವಿಕ ಮಾತನಾಡಿದರು. ಬಸವರಾಜ ಅಬ್ಬಿಗೇರಿ ಸ್ವಾಗತಿಸಿದರು. ಗುರು ತಿರ್ಲಾಪುರ ನಿರೂಪಿಸಿದರು. ಗುರುಶಾಂತಗೌಡ ಮರಿಗೌಡರ ವಂದಿಸಿದರು.