ವಿವಿಧ ಬೇಡಿಕೆಗೆ ಆಗ್ರಹಿಸಿ ಅನಿರ್ದಿಷ್ಟ ಧರಣಿ
ಗದಗ: ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು ಮಂಗಳವಾರ ನಗರದ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿದರು. ನಂತರ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಕೇಚರಿ ಮುಂಭಾಗದಲ್ಲಿ ಅನಿರ್ದಿಷ್ಟ ಅವಧಿ ಧರಣಿ ಸತ್ಯಾಗ್ರಹ ಪ್ರಾರಂಭಿಸಿದರು.
ಈ ಸಂದರ್ಭ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಅತಿಥಿ ಉಪನ್ಯಾಸಕರ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಹನಮಂತಗೌಡ ಕಲ್ಮನಿ, ರಾಜ್ಯದಲ್ಲಿ 10600 ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದು. ಗದಗ ಜಿಲ್ಲೆಯಲ್ಲಿ 9 ಮಹಾವಿದ್ಯಾಲಯಗಳಲ್ಲಿ 288 ಜನ ಸರ್ಕಾರ ವರ್ಷದಲ್ಲಿ 2 ಬಾರಿ ನೀಡುತ್ತಿರುವ ಗೌರವಧನದ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿಗಳ ಬದುಕನ್ನು ರೂಪಿಸುವ ಉಪನ್ಯಾಸಕರು ಸರ್ಕಾರದ ನಿರ್ಲಕ್ಷ್ಯ ಭಾವದಿಂದಾಗಿ ಸಂಕಷ್ಟದಲ್ಲಿ ಕಾಲ ಕಳೆಯುವಂತಾಗಿದೆ ಎಂದರು. ಪ್ರತಿಭಟನಾ ನಿರತರು ಗಾಂಧಿ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೂ ಪಾದಯಾತ್ರೆ ಮೂಲಕ ತೆರಳಿದರು. ಪ್ರತಿಭಟನೆಯಲ್ಲಿ ಜಿ.ಎಸ್. ಪರ್ವಣ್ಣವರ, ಎಸ್.ಎಸ್. ಸರ್ವಿ, ಜಿ.ಕೆ. ಯೋಗೀಶ್, ಸೋಮು ಲಮಾಣಿ, ತೌಸಿಫ್ ಖಾಜಿ, ನಾಗರಾಜ ಪಾಟೀಲ, ಸಂತೋಷಕುಮಾರ, ಬಿ.ಡಿ. ಗುತ್ತೆಣ್ಣವರ, ಆರ್.ಎಂ. ಹೂಗಾರ, ಎಂ.ವಿ. ರಡ್ಡೇರ, ವಿ.ಐ. ಬೆಳ್ಳಿಕಟ್ಟಿ, ಬಿ.ಆರ್. ಯಳವತ್ತಿ, ಎನ್.ಬಿ. ಕದಾಂಪೂರ, ವಿ.ಎಸ್. ಮೂಲಿಮನಿ, ಐ.ಟಿ. ಪೂಜಾರ, ಟಿ.ಎಂ.ಅಂಗಡಿ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಆಗಮಿಸಿದ್ದ ಅತಿಥಿ ಉಪನ್ಯಾಸಕರು ಪಾಲ್ಗೊಂಡಿದ್ದರು.