ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಕೈಮಗ್ಗ ನೇಕಾರಿಕೆಗೆ ಸರ್ಕಾರ ತಕ್ಷಣವೇ ಸ್ಪಂದಿಸಲಿ: ಮನವಿ

Mainashree
Updated On : 23 Jan 2014, 11:01 am

ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಜ. 22
ದೇಶದಲ್ಲಿ ಪಾರಂಪರಿಕವಾಗಿ ಬಂದಿರುವ ಕೈಮಗ್ಗ ನೇಕಾರಿಕೆಯು ಇಂದು ಅಳಿವಿನಂಚಿನಲ್ಲಿದೆ. ತಕ್ಷಣ ಸರ್ಕಾರವು ನೇಕಾರರ ಸಮಸ್ಯೆಗಳಿಗೆ ಸ್ಪಂದಿಸಿದರೆ ಮಾತ್ರ ನೇಕಾರಿಕೆ ಮತ್ತು ನೇಕಾರರನ್ನು ಉಳಿಸಿಕೊಳ್ಳಲು ಸಾಧ್ಯ ಎಂದು ಪಾಂಡುರಂಗ ಶಿಲವೇರಿ ಹೇಳಿದರು.
ಅವರು ಶನಿವಾರ ಸಂಜೆ ಪಟ್ಟಣದ ವಿಶೇಷ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿ ಮಾತನಾಡಿದರು.
ನೇಕಾರರ ಸಮಸ್ಯೆಗಳಿಗೆ ಸ್ಪಂದಿಸುವ ಜತೆಗೆ ಸರ್ಕಾರವು ನೇಕಾರರನ್ನು ಉಳಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಹಿಂದಿನಿಂದಲೂ ನೇಕಾರಿಕೆಗೆ ಹೆಸರಾದ ಗಜೇಂದ್ರಗಡ ಇಲ್ಲಿನ ಕೈ ಮಗ್ಗದ ಉದ್ಯಮ ತಲೆ ತಲಾಂತರದಿಂದ ತನ್ನ ಖ್ಯಾತಿಯನ್ನು ಉಳಿಸಿಕೊಂಡಿದೆ. ಇಲ್ಲಿ ಕೈಮಗ್ಗದಿಂದ ತಯಾರಾಗುವ ಸೀರೆ ಮತ್ತು ಖಣಗಳಿಗೆ ಮಹಾರಾಷ್ಟ್ರದ ಸತಾರಾ, ಕೊಲ್ಹಾಪುರ, ಕರಾಡ, ನಾಸಿಕ್ ಮೊದಲಾದ ಮಾರುಕಟ್ಟೆಗಳಲ್ಲಿ ಉತ್ತಮ ಬೇಡಿಕೆಯಿದೆ.
ಇಲ್ಲಿ ತಯಾರಾಗುವ ರೇಷ್ಮೆ ಖಣಗಳು ದೇಶದಲ್ಲಿಯೇ ಭಾರಿ ಪ್ರಸಿದ್ಧಿಯನ್ನು ಪಡೆದಿವೆ. ಅಲ್ಲದೇ ನಗರದಲ್ಲಿ ಸಾಮೂಹಿಕ ನೇಕಾರಿಕ ಕೇಂದ್ರಗಳಿಂದಾಗಿ ಸುಮಾರು 400ಕ್ಕೂ ಹೆಚ್ಚು ಪಾವರ್‌ಲೂಮ್ (ವಿದ್ಯುತ್ ಚಾಲಿತ) ಮಗ್ಗಗಳು ಕಾರ್ಯನಿರ್ವಹಿಸುತ್ತವೆ. ಹೀಗಾಗಿ ರಾಜ್ಯದ ಸಹಕಾರಿ ವಲಯದಲ್ಲಿ ತನ್ನದೇಯಾದ ವಿಶಿಷ್ಟ ನೇಕಾರಿಕೆಯನ್ನು ಉಳಿಸಿ, ಬೆಳೆಸಿಕೊಂಡು ಬಂದಿರುವ ಹಲವಾರು ಸಹಕಾರಿ ಸಂಘಗಳು ಇಂದು ಹೇಳ ಹೆಸರಿಲ್ಲದೆ ಮಾಯವಾಗುತ್ತಿವೆ. ಆದರೆ, ಪಟ್ಟಣದ ನೇಕಾರರ ಸಹಕಾರಿ ಸಂಘ, ಬನಶಂಕರಿ ನೇಕಾರರ ಸಹಕಾರಿ ಸಂಘ ಮತ್ತು ಆದಿಶಕ್ತಿ ನೇಕಾರರ ಸಹಕಾರಿ ಸಂಘಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದರು.
ವಿವಿಧ ಸಂಘಟನೆಗಳ ಮುಖಂಡರಾದ ಮಾರುತಿ ಮಾಳೋತ್ತರ, ಎಸ್.ಎಂ. ಇಂಜನಿ, ಶೇಖಪ್ಪ ಆಶಾಪುರ, ಎಂ.ಬಿ.ತೋರಗಲ್, ಎಸ್.ಎಂ. ಇಂಗಳಗಿ, ಹನುಮಂತ ಕೆಂಚಿ. ವೀರಣ್ಣ ಕುದರಿಮೋತಿ, ಮಂಜುನಾಥ ಸಂಚಾಲಿ, ಗಿಡ್ಡಪ್ಪ ಪೂಜಾರ, ಈರಪ್ಪ ಕಲ್ಲಿಗನೂರ, ಈರಣ್ಣ ಪಟ್ಟಣಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement