ಡಿಸೋಜಾ ಸಾಹಿತ್ಯ ಸಮಬಾಳು ಕಲ್ಪಿಸಲು ಪ್ರೇರಣೆ
ಗದಗ: ವಾಸ್ತವ ಜನರ ಬದುಕು, ಪರಿಸರ ಕಾಳಜಿ, ಬುಡಕಟ್ಟು ಜನಾಂಗದ ಜೀವನ, ನೊಂದ ಜನತೆಯ ನೋವು, ಮಲೆನಾಡ ಸೊಬಗು, ಪರಿಸರದ ಸೌಂದರ್ಯ ಹೀಗೆ ಡಾ. ನಾ. ಡಿಸೋಜಾ ಅವರ ಸಾಹಿತ್ಯ ಎಲ್ಲರಿಗೂ ಸಮಬಾಳು ಕಲ್ಪಿಸುವ ಪ್ರೇರಣೆ ನೀಡುತ್ತದೆ ಎಂದು ಉಪನ್ಯಾಸಕ ಎಸ್.ಯು. ಸಜ್ಜನಶೆಟ್ಟರ ಹೇಳಿದರು.
ಅವರು ತಾಪಂ ಆವರಣದಲ್ಲಿರುವ ಜಿಲ್ಲಾ ಕಸಾಪ ಹಮ್ಮಿಕೊಂಡಿದ್ದ ಶನಿವಾರ ಸಾಹಿತ್ಯ ಸಂಜೆ ಕಾರ್ಯಕ್ರಮದಲ್ಲಿ 80ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಬದುಕು ಬರಹ ಕುರಿತು ಮಾತನಾಡಿದರು. ಜಿಲ್ಲಾ ಕಸಾಪದ ಮಲ್ಲೇಶ ಡಿ.ಎಚ್. ಮಾತನಾಡಿ, ಮನುಷ್ಯ ಮತ್ತು ಪ್ರಕೃತಿಯ ನಡುವಿನ ಅವಿನಾಭಾವ ಸಂಬಂಧ, ಪ್ರೀತಿ, ಸ್ನೇಹ, ಕರುಣೆ, ವಿಶ್ವಾಸ ಚರಾಚರಾ ವಸ್ತುಗಳ ಬಗ್ಗೆ ಅಧ್ಯಯನ, ಮಾನವೀಯ ಸಂಬಂಧವನ್ನು ತಮ್ಮ ಕೃತಿಗಳಾದ ವಿಷಾದಯೋಗ, ಗಾಂಧಿ ಬಂದರು, ಬಂಜೆ ಬೆಂಕಿ, ದೇವರು ಅಲ್ಲೇ ಇರುತ್ತಾನೆ, ಹಕ್ಕಿಗೊಂದು ಗೂಡು ಕೊಡಿ, ತಬ್ಬಲಿ, ಭೂತದ ಎದುರು ಬೇತಾಳ, ಜೋಗ ಜಲಪಾತ, ಕೊಂಕಣಿ ಜನಪದ, ಕಥೆಗಳ ಚಿತ್ತಾರ, ಹೂವು ಚೆಲ್ಲುತ್ತಾ ಬಾ, ಹೀಗೆ 75 ಕ್ಕೂ ಹೆಚ್ಚು ಕೃತಿಗಳಲ್ಲಿ ಸಾಹಿತ್ಯದ ಹಿರಿಮೆಯನ್ನು ಹೆಚ್ಚಿಸಿದ್ದಾರೆ ಎಂದರು. ನಿಡಗುಂದಿಕೊಪ್ಪದ ಶರಣಪ್ಪ ಬಾಲಣ್ಣವರ ಸ್ವರಚಿತ ಕವನ ವಾಚಿಸಿದರು. ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಶಿವಪ್ಪ ಕುರಿ, ತಾಲೂಕು ಅಧ್ಯಕ್ಷ ಕಿಶೋರಬಾಬು ನಾಗರಕಟ್ಟಿ, ಶಶಿಕಾಂತ ಕೊರ್ಲಹಳ್ಳಿ, ಕೆ.ಎಚ್. ಬೇಲೂರ, ಬಿ.ಎಸ್. ಹಿಂಡಿ, ವೆಂಕಟೇಶಪ್ಪ ಲಮಾಣಿ, ಸಂಜೀವಸ್ವಾಮಿ, ಬಸವರಾಜ ಅಂಬಿಗೇರ, ಡಾ. ಅಶೋಕ ಮತ್ತಿಕಟ್ಟಿ, ರಾಜಶೇಖರ ಕರಡಿ, ಯಮನೂರಪ್ಪ, ವಾಸುಮಾಮಾ ಟಿಕಾನದಾರ, ರಾಜಶೇಖರಯ್ಯ ಕಾಲವಾಡಮಠ, ಎಂ.ಪಿ. ರಮೇಶ, ರಾಜಕುಮಾರ ತಳವಾರ, ಕನಕರಾಯ ಜಿಗಳೂರ, ನಾಗರಾಜ ಬಸೆವಡೆಯರ, ವಿ.ಎನ್. ಬೇಂದ್ರೆ, ಶಿವಾನಂದ ಹೊಸಹಳ್ಳಿ, ಬಿ.ಎಂ. ಕಬ್ಬಿನಹಾಳ, ಪ್ರಕಾಶ ಗಿಡ್ಡಣ್ಣವರ, ರವಿ ಶಿವಶಿಂಪಗೇರ, ಎಸ್.ಎ. ರಾಯಕರ, ಭಾಗ್ಯಶ್ರೀ, ರೇಣುಕಾ. ಶೋಭಾ ಶಲವಡಿ ಪ್ರಾರ್ಥಿಸಿದರು. ಮಲ್ಲಿಕಾರ್ಜುನ ಪ್ರಜಾರ ಸ್ವಾಗತಿಸಿದರು. ಗೌರವ ಕೋಶಾಧ್ಯಕ್ಷ ಮಲ್ಲೇಶ ಡಿ.ಎಚ್. ನಿರೂಪಿಸಿದರು. ಮರಳುಸಿದ್ದಪ್ಪ ದೊಡ್ಡಮನಿ ವಂದಿಸಿದರು.