ನೀರು ಹರಿಯುವ ಮುನ್ನವೇ ಹದಗೆಟ್ಟ ಕಾಲುವೆ
ಶಿರಹಟ್ಟಿ: ಶಿರಹಟ್ಟಿ ತಾಲೂಕಿನ ರೈತರ ಆಶಾಕಿರಣವಾಗಿದ್ದ ಇಟಗಿ-ಸಾಸಲವಾಡ ಏತ ನೀರಾವರಿ ಯೊಛಜನೆ ಕಾಮಗಾರಿ ಮುಗಿದಿದ್ದು, ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದಾಗಿ ರೈತರಿಗೆ ಇದರ ಪ್ರಯೋಜನ ಪಡೆಯುವ ಭಾಗ್ಯ ಮಾತ್ರ ದೊರೆಯುತ್ತಿಲ್ಲ.
ಬರಗಾಲ ಉಂಟಾದರೆ ತಾಲೂಕಿನ ಜನತೆಗೆ ನೀರಿನ ಸಮಸ್ಯೆ ತಪ್ಪುತ್ತಿಲ್ಲ. 1992ನೇ ಸಾಲಿನಲ್ಲಿ ತುಂಗಭದ್ರಾ ನದಿಯ ಎಡ ದಂಡೆ ಮೇಲೆ ಕಾರ್ಯಗತಗೊಳಿಸಲು ಉದ್ದೇಶಿಸಲಾಗಿರುವ ಇಟಗಿ-ಸಾಸಲವಾಡ ಏತನೀರಾವರಿ ಯೋಜನೆ ಈ ಭಾಗದ ಪ್ರಮುಖ ಯೋಜನೆಯಾಗಿದೆ. ಸುಮಾರು 25 ವರ್ಷಗಳ ಹಿಂದೆ ಪ್ರಾರಂಭವಾದ ತಾಲೂಕಿನ ಏಕೈಕ ಏತ ನೀರಾವರಿ ಯೋಜನೆ ಕುಂಟುತ್ತಾ ಸಾಗಿ ಜುಲೈ 2011ರಂದು ರೈತರ ವಿರೋಧದ ಮಧ್ಯೆಯೂ ತರಾತುರಿಯಲ್ಲಿ ಸಮರ್ಪಣೆಯಾಯಿತು. ಕಾಲುವೆಗಳಿಗೆ ನೀರು ಹರಿಯದೇ ನಿರ್ಮಾಣಗೊಂಡ ಕಾಲುವೆಗಳೆಲ್ಲ ಹೂಳು ತುಂಬಿ, ಜಾಲಿ ಕಂಟಿಗಳು ಬೆಳೆದು ದುಸ್ಥಿತಿ ನಿರ್ಮಾಣವಾಗಿದೆ. ಈ ಯೋಜನೆ ಸಮರ್ಪಕ ಅನುಷ್ಠಾನಗೊಳ್ಳದಿರುವುದಕ್ಕೆ ಇದುವರೆಗಿನ ಎಲ್ಲ ಸರ್ಕಾರಗಳ, ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಅಸಡ್ಡೆ, ಇಚ್ಛಾಶಕ್ತಿಯ ಕೊರತೆಯೇ ಕಾರಣವೆಂದು ಇಲ್ಲಿನ ರೈತರು ತಮ್ಮ ಅಸಮಾಧಾನ ಹೊರಹಾಕುತ್ತಿದ್ದಾರೆ.
ಕಳಪೆ ಕಾಮಗಾರಿ: ಈ ಯೋಜನೆಯಡಿ ತುಂಗಭದ್ರಾ ನದಿಯಿಂದ ನೀರನ್ನು ಎತ್ತಿ ಒಟ್ಟು 1983 ಹೆಕ್ಟೇರ್ ಪ್ರದೇಶಗಳ ಸುಮಾರು 5 ಸಾವಿರ ಎಕರೆ ಪ್ರದೇಶದಲ್ಲಿ ಬೆಳೆಗಳಿಗೆ ನೀರು ಒದಗಿಸುವುದು ಈ ಯೋಜನೆಯ ಉದ್ದೇಶ. ತೆರೆದಹಳ್ಳಿ, ಮೇವುಂಡಿ, ಶಿರಹಟ್ಟಿ ತಾಲೂಕಿನ ಹೊಳೆ-ಇಟಗಿ, ಸಾಸಲವಾಡ, ಹೆಬ್ಬಾಳ, ಕನಕವಾಡ, ತಂಗೋಡ, ಚವಡಾಳ, ಬಸಾಪುರ, ಕಲ್ಲಾಗನೂರ, ತೊಳಲಿ, ಮುಂಡರಗಿ ತಾಲೂಕಿನ ವಿಠಲಾಪುರ ಗ್ರಾಮಗಳು ಇದರ ಪ್ರಯೋಜನ ಪಡೆಯಬೇಕಿತ್ತು. ಆದರೆ, ಯೋಜನೆ ರಾಜ್ಯ ನೀರಾವರಿ ನಿಗಮಕ್ಕೆ ಹಸ್ತಾಂತರಗೊಂಡ ನಂತರವೂ ಗುತ್ತಿಗೆದಾರರು ಕಾಲುವೆ ನಿರ್ಮಾಣ ಸೇರಿದಂತೆ ಅನೇಕ ಕಳಪೆ ಕಾಮಗಾರಿ ಮಾಡಿರುವುದರಿಂದ ಮುಖ್ಯ ಕಾಲುವೆ, ಉಪಕಾಲುವೆಗಳು ಒಡೆದು ಹೋಗಿದ್ದು, ನೀರು ಬಿಟ್ಟರೆ ಕಾಲುವೆಗಳ ಕೆಳಭಾಗದಲ್ಲಿಯೇ ಸೋರಿಕೆಯಾಗುತ್ತದೆ. ಇದರಿಂದ ಕಾಲುವೆ ಪಕ್ಕದ ರೈತರ ಜಮೀನುಗಳು ಹೆಚ್ಚು ತೇವಾಂಶದಿಂದ ಬೆಳೆಬಾರದೇ ಹಾಳಾಗುವ ಸಾಧ್ಯತೆಯೇ ಹೆಚ್ಚು.
ಕಾಲುವೆಗಳ ದುಸ್ಥಿತಿ: ಮುಖ್ಯ ಕಾಲುವೆ ಹಾಗೂ ಉಪಕಾಲುವೆಗಳು ಸಂಪೂರ್ಣ ಹೂಳು ತುಂಬಿ, ಜಾಲಿ ಗಿಡಗಳು ಬೆಳೆದು ಕಾಲುವೆಗಳನ್ನು ಹುಡುಕಾಡುವ ಸ್ಥಿತಿಯಲ್ಲಿವೆ. ಜತೆಗೆ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳಿಗೆ ಅಳವಡಿಸಿದ ವಾಲ್ವ್ಗಳು ಕಿತ್ತುಹೋಗಿದ್ದು, ಈ ಕಾಲುವೆಗಳೆಲ್ಲವೂ ಕೊಳಚೆ ನೀರಿನಿಂದ ತುಂಬಿಕೊಂಡಿದ್ದು, ಕಸದ ರಾಶಿಯಿಂದ ಹೂತುಹೋಗಿವೆ. ಯಂತ್ರ ಚಾಲಕ ಗೃಹಕ್ಕೆ ಕಳಪೆ ಗುಣಮಟ್ಟದ ಮುರುಕು ತಗಡುಗಳನ್ನು ಹೊದಿಸಿದ್ದು, ಕಿಡಕಿಗಳ ಗಾಜುಗಳು ಸಂಪೂರ್ಣ ಒಡೆದಿವೆ. ಬೇಸಿಗೆ ಕಾಲದಲ್ಲಿ ಹೊಳೆಯ ನೀರು ಕೆಳಕ್ಕೆ ಸರಿಯುವುದರಿಂದ ಸದ್ಯ ನಿರ್ಮಿಸಿದ ಜಾಕ್ವೆಲ್ನ ಮುಖ್ಯ ಕಾಲುವೆಯಲ್ಲಿ ನೀರು ಹರಿಯುವುದಿಲ್ಲ. ಈ ಕಾಲುವೆಯನ್ನು ಇನ್ನೂ 1 ಮೀಟರ್ ಕೆಳಮಟ್ಟದಿಂದ ನಿರ್ಮಿಸುವಂತೆ ಅನೇಕ ಬಾರಿ ರೈತರು ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮ ಕೈಗೊಂಡಿಲ್ಲ. ಇದರಿಂದ ಬೇಸಿಗೆ ಕಾಲದ ಬೆಳೆಗಳಿಗೆ ನೀರು ದೊರಕದ ಕಾರಣ ರೈತರಿಗೆ ಸಮಸ್ಯೆಯಾಗುತ್ತಿದೆ.
ರೈತರ ಕನಸು ಈಡೇರಲಿಲ್ಲ: 2006ನೇ ಸಾಲಿನಲ್ಲಿ ಶಿರಹಟ್ಟಿ ತಾಲೂಕು ಹೋರಾಟ ಸಮಿತಿ ವತಿಯಿಂದ ಯೋಜನೆಯ ಕಾಮಗಾರಿ ತ್ವರಿತಗೊಳಿಸಿ ಪೂರ್ಣಗೊಳಿಸುವಂತೆ ಸತ್ಯಾಗ್ರಹ ಮಾಡಲಾಗಿತ್ತು. ಆಗಿನ ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀ ರಾಮುಲು ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿ ಕಾಮಗಾರಿ ತ್ವರಿತಗೊಳಿಸಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಯೋಜನೆಯಂತೆ ಕಾಮಗಾರಿ ನಡೆಯದೇ ಉದ್ಘಾಟನೆಯಾಗಿದ್ದು, ರೈತರ ನೀರಾವರಿ ಕನಸು ಈಡೇರಲಿಲ್ಲ ಎಂದು ಅಜ್ಜಪ್ಪ ದೊಡ್ಡಮನಿ, ಗುಡ್ಡಪ್ಪ ಚಿಗರಿ, ಅಜ್ಜಪ್ಪ ನಾವಿ ಆರೋಪಿಸುತ್ತಾರೆ.
ಮಹದೇವಪ್ಪ ಎಂ. ಸ್ವಾಮಿ