ಪತ್ರಕರ್ತನ ಮೇಲೆ ಹಲ್ಲೆ: ಸಂಘಟನೆಗಳ ಆಕ್ರೋಶ
ಮುಂಡರಗಿ: ಜಿಲ್ಲೆಯ ರೋಣ ತಾಲೂಕಿನ ಗಜೇಂದ್ರಗಡ ಪಟ್ಟಣದ ಪತ್ರಕರ್ತ ಡಿ.ಜಿ. ಮೋಮಿನ ಅವರ ಮೇಲೆ ರಾಜಕಾರಣಿಯೊಬ್ಬರು ಹಲ್ಲೆ ಮಾಡಿರುವುದನ್ನು ಖಂಡಿಸಿ ಬುಧವಾರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಾಲೂಕು ಅಭಿವೃದ್ಧಿ ಹೋರಾಟ ವೇದಿಕೆ ಅಧ್ಯಕ್ಷ ವೈ.ಎನ್. ಗೌಡರ ಮಾತನಾಡಿ, ಪತ್ರಕರ್ತರ ಜತೆಗೆ ವರದಿಗಳ ವಿಷಯದಲ್ಲಿ ಏನೇ ವೈಮನಸ್ಸುಗಳಿದ್ದರೂ ಮಾತುಕತೆ ಮತ್ತು ಸಂವಿಧಾನಾತ್ಮಕ ಚೌಕಟ್ಟಿನಲ್ಲಿ ಬಗೆಹರಿಸಿಕೊಳ್ಳಬೇಕು. ಏಕಾಏಕಿ ಹಲ್ಲೆ ನಡೆಸುವುದು ಸರಿಯಲ್ಲ. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈ ಕೂಡಲೇ ಮಧ್ಯ ಪ್ರವೇಶಿಸಿ ಸರಿಪಡಿಸುವಂತೆ ನೋಡಿಕೊಳ್ಳಬೇಕು ಎಂದರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕಾಶೀನಾಥ ಬಿಳಿಮಗ್ಗದ ಮನವಿ ಓದಿ ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವ ಇಂತಹ ಪ್ರಯತ್ನ ಬಿಡಬೇಕು. ತಪ್ಪಿಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು. ಪತ್ರಕರ್ತರಾದ ಶಿವು ಹೊಂಬಳಗಟ್ಟಿ, ಶರಣು ಸೊಲಗಿ, ಸಿ.ಕೆ. ಗಣಪ್ಪನವರ, ಸಿ.ಎಸ್.ಅರಸನಾಳ, ಕವಿ ಬಂಕಾಪುರ, ಸಂತೋಷ ಮುರುಡಿ, ರಮೇಶ ಹುಳಕಣ್ಣವರ, ಪ್ರಕಾಶ ಅತ್ತಾರವಾಲ, ಕರವೇ ಅಧ್ಯಕ್ಷ ಶಿವಾನಂದ ಬಾರಕೇರ, ಜಿಪಂ ಸದಸ್ಯ ಹೇಮಗಿರೀಶ ಹಾವಿನಾಳ, ಕೊಟ್ರೇಶ ಅಂಗಡಿ, ದೇವಪ್ಪ ಕಂಬಳಿ, ಬಸವರಾಜ ನವಲಗುಂದ, ಲಕ್ಷ್ಮಣ ತಗಡಿಮನಿ, ರಾಮಚಂದ್ರ ಗಾರವಾಡ, ಯುವ ಸೇವಾ ಸಂಘಟನೆಯ ಅಧ್ಯಕ್ಷ ಪವನ ಚೋಪ್ರಾ, ದೇವಪ್ಪ ಇಟಗಿ, ಮಂಜುನಾಥ ಮುಧೋಳ, ಮಂಜುನಾಥ ಕಟ್ಟಿಮನಿ, ಕುರುವತ್ತೆಪ್ಪ ಅರಿಷಣದ, ಚಿ.ಎಚ್.ಬಂಡಿ, ನಾಗರಾಜ ಗುಡಿಮನಿ, ಬಿ.ಎಸ್. ಸಸಿಮಠ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ತಹಸೀಲ್ದಾರ್ ಪರವಾಗಿ ಶಿರಸ್ತೆದಾರ ರಮೇಶ ಬಾಲೆಹೊಸೂರ ಮನವಿ ಸ್ವೀಕರಿಸಿದರು.
ತಾಲೂಕು ಅಭಿವೃದ್ಧಿ ಹೋರಾಟ ವೇದಿಕೆ, ಯುವಸೇವಾ ಸಂಘಟನೆ, ಕನ್ನಡ ಕ್ರಾಂತಿ ಸೇನೆ, ಕನ್ನಡ ಜನಾಭಿವೃದ್ಧಿ ವೇದಿಕೆ, ತಾಲೂಕು ಸಾರ್ವಜನಿಕ ಹೋರಾಟ ವೇದಿಕೆ, ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆಗೆ ಕೈಜೋಡಿಸಿದ್ದವು.