ಮೋಸದಿಂದ ಹಣ ಸುಲಿಗೆ: ಗ್ರಾಮಸ್ಥರಿಂದ ತಡೆ
ವಿಶೇಷ ವರದಿ
ಶಿರಹಟ್ಟಿ: ಜಮಖಂಡಿ ಮೂಲದ ವೀರ ಜಿಜಾಬಾಯಿ ಮಹಿಳಾ ಮತ್ತು ಗ್ರಾಮೀಣ ಅಭಿವೃದ್ಧಿ ಸಂಘ (ಅರೆ ಸರ್ಕಾರಿ ಸಂಸ್ಥೆ) ಜಿಲ್ಲಾ ಉಪ ನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೀಡಿರುವ ಪತ್ರವೊಂದನ್ನು ಹಿಡಿದುಕೊಂಡು ತಾಲೂಕಿನ ಛಬ್ಬಿ ಗ್ರಾಮದಲ್ಲಿ ಹಿರಿಯ ನಾಗರಿಕರಿಗೆ ಗುರುತಿನ ಚೀಟಿ ನೀಡುವುದಾಗಿ ನಂಬಿಸಿ 2 ದಿನಗಳಿಂದ ಹಣ ಸುಲಿಗೆ ಕಾರ್ಯದಲ್ಲಿ ತೊಡಗಿರುವುದು ಬೆಳಕಿಗೆ ಬಂದಿದೆ.
ರಕ್ತ ತಪಾಸಣೆ ಮತ್ತು ಪೋಟೊ ತೆಗೆಯುವ ನಾಟಕವಾಡಿ ಗ್ರಾಮೀಣ ಪ್ರದೇಶದ ಪ್ರತಿಯೊಬ್ಬ ಹಿರಿಯ ನಾಗರಿಕರಿಂದ ರು. 100 ಸುಲಿಗೆ ಮಾಡುತ್ತಿರುವುದು ಗ್ರಾಮದಲ್ಲಿ ಸಂಶಯಕ್ಕೆ ಕಾರಣವಾಗಿದ್ದು, ಯುವಕರು ಇವರನ್ನು ಕೂಡಿ ಹಾಕಿ ಅವರಿಂದ ವಿಷಯ ತಿಳಿದಾಗ, ಯಾವುದೇ ಸ್ಪಷ್ಟನೆ ಬರದೇ ಅತ್ತು ಕರೆದು ಅಲ್ಲಿಂದ ಕಾಲ್ಕೀಳುವ ಪ್ರಸಂಗ ನಡೆದಿದೆ. ವೈದ್ಯಕೀಯ ಜ್ಞಾನವೂ ಇಲ್ಲದ ಔಷಧಿ ಮಾಹಿತಿಯೂ ಇಲ್ಲದ ಎನ್‌ಜಿಓ ಸಂಸ್ಥೆಯವರಿಗೆ ರಕ್ತ ತಪಾಸಣೆ ಮಾಡಲು ಹೇಳಿದವರಾರು ಎಂಬುದು ನಿಗೂಢವಾಗಿದೆ.
ಇದೇ ಗ್ರಾಮದ ಯುವ ಧುರೀಣ ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾದ ಅಧ್ಯಕ್ಷ ಜಾನು ಲಮಾಣಿ ಬಡ ಕೂಲಿಕಾರ ಜನರಿಂದ ಕಾನೂನು ಬಾಹೀರವಾಗಿ ಇಲಾಖೆ ಆದೇಶ ಧಿಕ್ಕರಿಸಿ ಸುಮಾರು 200ಕ್ಕೂ ಹೆಚ್ಚು ಜನರಿಂದ ನೂರು ರುಪಾಯಿಯಂತೆ ಹಣ ಸುಲಿಗೆ ಮಾಡುತ್ತಿರುವುದನ್ನು ಸ್ಥಳಕ್ಕೆ ಹೋಗಿ ಸೂಕ್ಷ್ಮವಾಗಿ ಪತ್ತೆ ಹಚ್ಚಿ ಸಂಸ್ಥೆಯವರಿಂದ ಸಮಗ್ರ ಮಾಹಿತಿ ಪಡೆದು ಹೆಚ್ಚುವರಿ ಹಣ ಸುಲಿಗೆ ಮಾಡುತ್ತಿರುವವರ ವಿರುದ್ಧ ಹರಿಹಾಯ್ದರು. ಇಲಾಖೆ ಹಿರಿಯ ಅಧಿಕಾರಿಗಳು ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಆಗ್ರಹ: ಸಂಸ್ಥೆಯೂ ಜಿಲ್ಲಾ ಉಪ ನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೋಹರು ತೋರಿಸಿ ಇವರೇ ಇಷ್ಟೆಲ್ಲ ಹಣ ಪಡೆದು ಗುರುತಿನ ಚೀಟಿ ನೀಡುವಂತೆ ಹೇಳಿದ್ದಾರೆ ಎಂದು ಜನರನ್ನು ವಂಚಿಸಿದ್ದಾರೆ ಎನ್ನಲಾಗಿದೆ. ಈಗಾಗಲೇ ಎಲ್ಲ ಸೌಲಭ್ಯ ಪಡೆಯುತ್ತಿರುವ ಹಿರಿಯ ನಾಗರಿಕರಿಂದಲೂ ಹೆಚ್ಚುವರಿ ಹಣ ಸುಲಿಗೆ ಮಾಡಿದ್ದು, ಸಂಬಂಧಪಟ್ಟ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಯಾವುದೇ ನೆಪ ಹೇಳದೆ ಗ್ರಾಮಕ್ಕೆ ಭೇಟಿ ನೀಡಿ ಮೋಸಕ್ಕೊಳಗಾಗಿ ಹಣ ಕಳೆದುಕೊಂಡ ಹಿರಿಯ ಜೀವಿಗಳ ನೆರವಿಗೆ ಬರಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಸೂಚನೆ
ಇಲಾಖೆ ಆದೇಶ ಧಿಕ್ಕರಿಸಿ ಹಿರಿಯ ನಾಗರಿಕರಿಂದ ಹೆಚ್ಚುವರಿ ಹಣ ಪಡೆಯುತ್ತಿರುವ ಸಂಗತಿ ತಹಸೀಲ್ದಾರ್ ಆರ್.ಬಿ. ನಿಂಗನಗೌಡ್ರ ಗಮನಕ್ಕೆ ಬಂದಾಗ ಕೂಡಲೇ ಅವರು ಅದನ್ನು ಸ್ಥಗಿತಗೊಳಿಸುವಂತೆ ಗ್ರಾಮ ಪಂಚಾಯತಿಯವರಿಗೆ ಸೂಚನೆ ನೀಡಿದರು. ಈ ರೀತಿ ಗ್ರಾಮೀಣ ಭಾಗದಲ್ಲಿ ಜನರನ್ನು ವಂಚಿಸುವ ಹಾಗೂ ಮೋಸಗೊಳಿಸುವ ಹಲವು ಸಂಸ್ಥೆಗಳು ಇಂತ ಕೃತ್ಯಗಳನ್ನು ಎಸಗುತ್ತಿದ್ದು, ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ.
ಎನ್‌ಜಿಓ ಸಂಸ್ಥೆಯವರು ಹೆಚ್ಚುವರಿ ಹಣ ಪಡೆದು ಜನರಿಗೆ ಮೋಸ ಮಾಡುತ್ತಿರುವುದು ಗಮನಕ್ಕೆ ಬಂದಿಲ್ಲ. 50 ಮತ್ತು ದಾಖಲೆ ಪಡೆದು ಮನೆ ಮನೆಗೆ ತೆರಳಿ ಸೌಲಭ್ಯ ಕಲ್ಪಿಸುವಂತೆ ಇಲಾಖೆ ಆದೇಶ ನೀಡಿದೆ. ಹೆಚ್ಚುವರಿ ಹಣ ಪಡೆದಿರುವ ಬಗ್ಗೆ ದೂರುಗಳು ಬಂದಲ್ಲಿ ಪರಿಶೀಲನೆ ನಡೆಸಿ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು.
ಡಿ.ಎನ್. ಮೂಲಿಮನಿ,
ಜಿಲ್ಲಾ ವಿಕಲಚೇತನ ಹಿರಿಯ ನಾಗರಿಕ ಕಲ್ಯಾಣ ಅಧಿಕಾರಿ