ಸ್ಪರ್ಧಾತ್ಮಕ ತರಬೇತಿ ಅವಶ್ಯ: ದೊಡ್ಡಮನಿ
ಮುಂಡರಗಿ: ವಿದ್ಯಾರ್ಥಿಗಳು ಸ್ಪರ್ಧಾತ್ಮಕ ತರಬೇತಿಗಳನ್ನು ಪಡೆಯುವುದು ಅವಶ್ಯವಾಗಿದೆ ಎಂದು ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.
ಅವರು ಸೋಮವಾರ ಸ್ಥಳೀಯ ಜ.ಅ. ವಿದ್ಯಾ ಸಮಿತಿಯ ಕ.ರಾ. ಬೆಲ್ಲದ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಮೈಸೂರ ಮುಂಡರಗಿ ಶಾಖೆ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಂಡಿರುವ 10 ದಿನಗಳ ಬ್ಯಾಂಕಿಂಗ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಶಿಬಿರ ಮತ್ತು ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಮಾತನಾಡಿದರು.
ನಾಡೋಜ, ಡಾ. ಅನ್ನದಾನೀಶ್ವರ ಸ್ವಾಮೀಜಿ ಮಾತನಾಡಿ, ಬ್ಯಾಂಕ್‌ಗಳು ಇರುವುದರಿಂದ ಗ್ರಾಹಕರು ತಮ್ಮ ಹಣವನ್ನು ಬ್ಯಾಂಕುಗಳಲ್ಲಿ ತೊಡಗಿಸಿ ಸಮಾಧಾನದಿಂದ ಇರಬಹುದು. ಇಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳೆಲ್ಲರೂ ಬ್ಯಾಂಕಿಂಗ್ ಪರೀಕ್ಷೆಯಲ್ಲಿ ಯಶಸ್ವಿಯಾಗಲೆಂದು ಹಾರೈಸಿದರು. ಈ ಸಂದರ್ಭದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರ ಮುಂಡರಗಿ ಶಾಖೆ ಮತ್ತು ಶಾಸಕರ ಸಹಕಾರದಿಂದ ಕೊಡಮಾಡಿದ ಶುದ್ಧ ನೀರಿನ ಘಟಕವನ್ನು ಉದ್ಘಾಟಿಸಲಾಯಿತು.
ಸ್ಟೇಟ್ ಬ್ಯಾಂಕ್ ಆಫ್ ಮೈಸೂರ ಮುಂಡರಗಿ ಶಾಖೆಯ ಪ್ರಬಂಧಕ ಬಸವರಾಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಚಾರ್ಯ ಡಾ. ಎಂ.ಬಿ.ಬೆಳವಟಗಿ ಅಧ್ಯಕ್ಷತೆ ವಹಿಸಿದ್ದರು. ತರಬೇತಿ ಸಂಯೋಜಕ ಪ್ರೊ. ಆರ್.ಕೆ. ರಾಯನಗೌಡರ ಸ್ವಾಗತಿಸಿ, ಡಾ. ಬಿ.ಜಿ.ಜವಳಿ ನಿರೂಪಿಸಿ, ವಂದಿಸಿದರು.