ಗ್ರಾಮೀಣ ಗ್ರಂಥಪಾಲಕರಿಗಿಲ್ಲ ವೇತನ
ಕನ್ನಡಪ್ರಭ ವಾರ್ತೆ, ಗದಗ, ಜ. 23
ಗ್ರಾಮೀಣ ಜನರ ಜ್ಞಾನಾರ್ಜನೆ ಹೆಚ್ಚಿಸಿ, ಅವರ ಓದುವ ಹವ್ಯಾಸಕ್ಕೆ ನೀರೆರೆದು ಸದ್ದಿಲ್ಲದೇ ರಾಜ್ಯದ ಸಾಹಿತ್ಯ ಕ್ಷೇತ್ರಕ್ಕೆ ಓದುಗರನ್ನು ನೀಡುತ್ತಿರುವ ರಾಜ್ಯದ 30 ಜಿಲ್ಲೆಗಳ ವ್ಯಾಪ್ತಿಯ ಗ್ರಾಮೀಣ ಗ್ರಂಥಾಲಯಗಳಲ್ಲಿನ ಗ್ರಂಥಪಾಲಕರಿಗೆ ಸರ್ಕಾರ ಕಳೆದ 6 ತಿಂಗಳಿಂದ ವೇತನವನ್ನೇ ನೀಡಿಲ್ಲ.
ಹೌದು.. ಇದನ್ನೇ ನಂಬಿ ಜೀವನ ಸಾಗಿಸುತ್ತಿರುವ ಪ್ರತಿಯೊಬ್ಬ ಗ್ರಂಥಪಾಲಕರು, ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದ ಬೇಸತ್ತಿದ್ದು, ಚಾತಕ ಪಕ್ಷಿಯಂತೆ ವೇತನಕ್ಕಾಗಿ ಕಾಯುತ್ತಿದ್ದಾರೆ.
ರಾಜ್ಯದಲ್ಲಿ 5726 ಗ್ರಾಮೀಣ ಗ್ರಂಥಾಲಯ: ರಾಜ್ಯದ 30 ಜಿಲ್ಲೆಗಳ ವ್ಯಾಪ್ತಿಯಲ್ಲಿ ಒಟ್ಟು 5726 ಗ್ರಾಮೀಣ ಗ್ರಂಥಾಲಯಗಳು ಕಾರ್ಯನಿರ್ವಹಿಸುತ್ತಿವೆ. ಅವುಗಳಲ್ಲಿ ಪ್ರತಿಯೊಂದು ಗ್ರಂಥಾಲಯಕ್ಕೆ ಓರ್ವ ಸಿಬ್ಬಂದಿಯಂತೆ 5726 ಜನ ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ, ಅವರು ದುಡಿದ, ಅವರಿಗೆ ಸಲ್ಲಬೇಕಾದ ನ್ಯಾಯಯುತ ಸಂಬಳ ಕಳೆದ 6 ತಿಂಗಳಿಂದ ಸಂದಾಯವಾಗುತ್ತಿಲ್ಲ. ಸರ್ಕಾರದಲ್ಲಾಗಲಿ, ಗ್ರಂಥಾಲಯ ಇಲಾಖೆಯ ಹಿರಿಯ ಅಧಿಕಾರಿಗಳಾಗಲಿ ಈ ಬಗ್ಗೆ ಗಮನ ನೀಡದೇ ಇರುವುದರಿಂದ ತೊಂದರೆ ಅನುಭವಿಸುತ್ತಿರುವವರು ಮಾತ್ರ ಗ್ರಂಥಪಾಲಕರು.
6 ತಿಂಗಳಿಂದ ವೇತನವಿಲ್ಲ: ಕಳೆದ ಸಾಲಿನ ಸೆಪ್ಟೆಂಬರ್ ತಿಂಗಳಿಂದ ವೇತನ ಬಿಡುಗಡೆಯಾಗಿಲ್ಲ. ಕೆಲ ಜಿಲ್ಲೆಗಳಲ್ಲಿ ಸೆಪ್ಟೆಂಬರ್ ತಿಂಗಳ ಸಂಬಳ ನೀಡಲಾಗಿದೆ. ಆದರೆ, ಇನ್ನುಳಿದ 18ಕ್ಕೂ ಹೆಚ್ಚಿನ ಜಿಲ್ಲೆಗಳಲ್ಲಿ ಕಳೆದ 6 ತಿಂಗಳಿಂದ ವೇತನವನ್ನೇ ನೀಡಿಲ್ಲ. ಈ ಮೊದಲು ಪ್ರತಿ ತಿಂಗಳ ರು. 2500 ನೀಡಲಾಗುತ್ತಿತ್ತು. ಹಿಂದಿನ ಸರ್ಕಾರದ ಅವಧಿಯಲ್ಲಿ ಅದನ್ನು ರು. 5500 ಹೆಚ್ಚಿಸಲಾಗಿದ್ದು, ವೇತನ ಹೆಚ್ಚಳ ಮಾಡಿದಾಗಿನಿಂದಲೂ ಈ ಸಮಸ್ಯೆ ಸೃಷ್ಟಿಯಾಗಿದೆ. ಇದನ್ನೇ ನಂಬಿ ಜೀವನ ನಡೆಸುತ್ತಿರುವ ಗ್ರಂಥಪಾಲಕರ ಸಮಸ್ಯೆಗಳನ್ನು ಸರ್ಕಾರ ಆಲಿಸುತ್ತಲೇ ಇಲ್ಲ.
ಸಮಸ್ಯೆ ಹತ್ತಾರು: ಗ್ರಾಮೀಣ ಗ್ರಂಥಾಲಯಗಳು ಈಗಾಗಾಲೇ ಹತ್ತಾರು ರೀತಿಯ ಮೂಲ ಸೌಲಭ್ಯಗಳ ಕೊರತೆಯಿಂದ ನರಳುತ್ತಿವೆ. ಅವುಗಳ ಮಧ್ಯೆಯೇ ಗ್ರಂಥಪಾಲಕರು ಅವುಗಳನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. 1421ಕ್ಕೂ ಹೆಚ್ಚಿನ ಗ್ರಂಥಾಲಯಗಳು ಇಂದಿಗೂ ಬಾಡಿಗೆ ಕಟ್ಟಡದಲ್ಲಿವೆ. 2140 ಗ್ರಂಥಾಲಯಗಳಿಗೆ ಆಯಾ ಗ್ರಾಪಂಗಳು ಕಟ್ಟಡ ನೀಡಿವೆಯಾದರೂ, ಸರ್ಕಾರದ ಯಾವುದಾದರೂ ಯೋಜನೆಗೆ (ಇಲಾಖೆ ಕಚೇರಿ ಬೇಕಾದಲ್ಲಿ) ತಕ್ಷಣವೇ ಇವುಗಳನ್ನು ತೆರವುಗೊಳಿಸುತ್ತಿದ್ದು, ಈ ರೀತಿಯ ಹತ್ತಾರು ಸಮಸ್ಯೆಗಳ ಮಧ್ಯೆಯೇ ಕುಂಟುತ್ತಿರುವ ಗ್ರಂಥಾಲಯಗಳನ್ನು ಮುನ್ನಡೆಸುವ ಗ್ರಂಥಪಾಲಕರ ವೇತನಕ್ಕೂ ವಿಳಂಬವಾಗುತ್ತಿರುವುದು ಸಮಸ್ಯೆಯನ್ನು ಮತ್ತಷ್ಟು ಇಮ್ಮಡಿಗೊಳಿಸಿದೆ.
ಗಮನ ನೀಡಲಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಗ್ರಾಮೀಣಾಭಿವೃದ್ದಿ ಇಲಾಖೆ ಮೂಲಕ 15 ಅಂಶಗಳ ವಿಶೇಷ ಅಭಿವೃದ್ಧಿ ಕಾರ್ಯಕ್ರಮ ರೂಪಿಸಿದೆ. ಅವುಗಳಲ್ಲಿ ಗ್ರಾಮೀಣ ಮಕ್ಕಳಿಗೆ ಆಟದ ಮೈದಾನ, ರೈತರ ಅನುಕೂಲಕ್ಕಾಗಿ ಕಣ ಹೀಗೆ ಗ್ರಾಮೀಣ ಜನರ ಬದುಕು ಉನ್ನತೀಕರಿಸುವ ನಿಟ್ಟಿನಲ್ಲಿ ಕೆಲ ಉತ್ತಮ ನಿರ್ಧಾರಗಳನ್ನೇ ಇಲಾಖೆ ತೆಗೆದುಕೊಂಡಿದೆ. ಅದರಲ್ಲಿ ಗ್ರಾಪಂಗಳಲ್ಲಿ ಕಾರ್ಯನಿರ್ವಹಿಸುವ ಗ್ರಾಮೀಣ ಗ್ರಂಥಾಲಯಗಳ ಉತ್ತೇಜನ ಹಾಗೂ ಅವುಗಳಿಗೆ ಮೂಲಸೌಲಭ್ಯ ಕಲ್ಪಿಸಲು ಹೆಚ್ಚಿನ ಗಮನ ನೀಡಬೇಕಿದೆ.
ಶಿವಕುಮಾರ ಕುಷ್ಟಗಿ