ಪತ್ರಕರ್ತನ ಮೇಲೆ ಹಲ್ಲೆ: ಕ್ರಮಕೈಗೊಳ್ಳಿ
ಶಿರಹಟ್ಟಿ: ಗಜೇಂದ್ರಗಡದಲ್ಲಿನ ಪತ್ರಕರ್ತ ಡಿ.ಜಿ. ಮೋಮಿನ ಅವರ ಮೇಲೆ ಹಲ್ಲೆ ನಡೆಸಿರುವುದನ್ನು ಖಂಡಿಸಿ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಗುರುವಾರ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
ಹಿರಿಯ ಪತ್ರಕರ್ತ ಜಿ.ಬಿ. ಹೆಸರೂರ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯ ನಾಲ್ಕನೇ ಪ್ರಮುಖ ಅಂಗವಾಗಿರುವ ಪತ್ರಿಕಾ ರಂಗಕ್ಕೆ ಬೆಲೆ ಇಲ್ಲದಂತಾಗಿದೆ. ಪತ್ರಿಕೆ, ಮಾಧ್ಯಮ ಪ್ರತಿನಿಧಿಗಳಿಗೆ ಸೂಕ್ತರಕ್ಷಣೆ, ಸಹಕಾರ ಮತ್ತು ಮುಕ್ತವಾಗಿ ನಿರ್ಭೀತಿಯಿಂದ ವರದಿ ಮಾಡಲು ಸೂಕ್ತ ಭದ್ರತೆ ನೀಡಬೇಕು ಎಂದು ಆಗ್ರಹಿಸಿದರು. ವರದಿಗಾರರ ಮೇಲೆ ರಾಜಕೀಯ ನಾಯಕರ ಬಂಟರು ಹಲ್ಲೆ ಮಾಡುವುದು ಮೇಲಿಂದ ಮೇಲೆ ನಡೆಯುತ್ತಿರುವುದು ಸರಿಯಾದ ಬೆಳವಣಿಗೆಯಲ್ಲ. ಹಲ್ಲೆ ಮಾಡಲು ಮುಂದಾದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಅಪ್ರಸ್ತುತ ವರದಿಯನ್ನು ಮಾಡಿದರೆ, ಅದಕ್ಕೆ ನಿಯಮಾನುಸಾರವಾಗಿ ಕಾನೂನು ಕ್ರಮಕ್ಕೆ ಅವಕಾಶಗಳಿದ್ದು, ಅದನ್ನು ಬಿಟ್ಟು ಹಲ್ಲೆ, ದೌರ್ಜನ್ಯ ಮಾಡುವುದು ಸರಿಯಲ್ಲ ಎಂದರು. ತಹಸೀಲ್ದಾರ್ ಆರ್.ಬಿ. ನಿಂಗನಗೌಡ್ರ ಮನವಿ ಸ್ವೀಕರಿಸಿ ಮಾತನಾಡಿ, ವರದಿಗಾರರ ಮೇಲೆ ನಡೆದ ಹಲ್ಲೆ ಕುರಿತು ಕ್ರಮ ಜರುಗಿಸಲು ಜಿಲ್ಲಾಧಿಕಾರಿಗೆ ಮನವಿ ಕಳುಹಿಸಿಕೊಡುವುದಾಗಿ ತಿಳಿಸಿದರು. ವರದಿಗಾರರಾದ ಎ.ಎಚ್. ಖಾಜಿ, ಮಂಜುನಾಥ ಅರೇಪಲ್ಲಿ, ಮಹದೇವಪ್ಪ ಎಂ. ಸ್ವಾಮಿ, ಬಸವರಾಜ ವಡವಿ, ಶ್ರೀಕಾಂತ ಈಳಗೇರ, ನಾಗನಗೌಡ ಮರಿಗೌಡ್ರ ಮನವಿ ನೀಡುವಲ್ಲಿ ಇದ್ದರು.