ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಬಜಾರ್ ರಸ್ತೆ ಕಾಮಗಾರಿ ಕಳಪೆ

Mainashree
Updated On : 24 Jan 2014, 10:53 am

ಲಕ್ಷ್ಮೇಶ್ವರ: ಪಟ್ಟಣದ ಬಜಾರ್ ರಸ್ತೆ ಕಾಮಗಾರಿಯು ಗುಣಮಟ್ಟದಿಂದ ಕೂಡಿರದೆ, ಮುಂದಿನ ಮೂರು ತಿಂಗಳಲ್ಲಿ ಕಿತ್ತು ಹೋಗುವ ಹಂತದಲ್ಲಿ ರಸ್ತೆ ಕಾಮಗಾರಿ ಮಾಡಲಾಗಿದೆ ಎಂದು ಪುರಸಭೆ ಸದಸ್ಯ ಮಹೇಶ ಹೊಗೆಸೊಪ್ಪಿನ ಆರೋಪಿಸಿದರು.
ಪಟ್ಟಣದ ಪುರಸಭೆಯಲ್ಲಿ ಗುರುವಾರ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ರಸ್ತೆಯ ನಿರ್ಮಾಣಕ್ಕೆ ಅವೈಜ್ಞಾನಿಕವಾಗಿ ವರದಿಯನ್ನು ತಯಾರು ಮಾಡಲಾಗಿದೆ. ಕೇವಲ ಬೈಕ್‌ನ ಸ್ಟ್ಯಾಂಡ್ ಹಚ್ಚಿದರೆ ರಸ್ತೆಯು ಕಿತ್ತು ಹೋಗುತ್ತಿದೆ ಇದಕ್ಕೆ ಯಾರು ಹೊಣೆಗಾರರು ಎಂದು ಪ್ರಶ್ನಿಸಿದರು.
ಇದಕ್ಕೆ ಪುರಸಭೆಯ ಎಂಜಿನಿಯರ್ ಉತ್ತರಿಸಿ, ನಾವು ರಸ್ತೆಯ ನಿರ್ಮಾಣ ಕಾಲಕ್ಕೆ ರಸ್ತೆಯ ಮೇಲೆ ಸಂಚರಿಸುವ ವಾಹನ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಆ ರಸ್ತೆಗೆ ಬೇಕಾಗುವ ಡಾಂಬರೀಕರಣ ಪ್ರಮಾಣವನ್ನು ನಿರ್ಧರಿಸಲಾಗುತ್ತದೆ. ಅಲ್ಲದೆ ರಸ್ತೆಯ ನಿರ್ಮಾಣ ಮಾಡುವ ಸಮಯದಲ್ಲಿ ಸಾರ್ವಜನಿಕರು ಕೂಡಾ ಸಹಕಾರ ನೀಡಬೇಕಾಗುತ್ತದೆ. ರಸ್ತೆ ಕಾಮಗಾರಿಯು ಪ್ರಾರಂಭವಾಗಿರುವಾಗಲೇ ವಾಹನಗಳು ಸಂಚಾರ ಮಾಡುವುದರಿಂದ ರಸ್ತೆಗಳು ಹಾಳಾಗಿ ಹೋಗುತ್ತವೆ. ಇದು ಕೂಡಾ ರಸ್ತೆಗಳು ಹಾಳಾಗಲು ಪ್ರಮುಖ ಕಾರಣ ಎಂದು ಹೇಳಿದರು. ಸಭೆಯಲ್ಲಿ ಪುರಸಭೆಯ ಸರ್ಕಾರಿ ಆಸ್ತಿಯನ್ನು ಅತಿಕ್ರಮಿಸಿಕೊಂಡು ನಿರ್ಮಿಸಿರುವ ಕಟ್ಟಡಗಳನ್ನು ತೆರವುಗೊಳಿಸಿ ಅವುಗಳನ್ನು ಪುರಸಭೆಯ ಸುಪರ್ದಿಗೆ ತೆಗೆದುಕೊಳ್ಳಬೇಕು ಎನ್ನುವ ವಿಷಯವನ್ನು ಉಪಾಧ್ಯಕ್ಷ ಎಂ.ಆರ್.ಪಾಟೀಲ ಪ್ರಸ್ತಾಪಿಸಿದರು. ಅಲ್ಲದೆ ಪಟ್ಟಣದ ಒಳಗಡೆ ಇರುವ ಕಸಾಯಿಖಾನೆಗಳನ್ನು ಇನ್ನೊಂದು ವಾರದಲ್ಲಿ ತೆರವುಗೊಳಿಸಿ ಅದಕ್ಕೆ ಸೂಕ್ತ ಜಾಗೆಯನ್ನು ಒದಗಿಸಿಕೊಡಬೇಕು ಎಂದು ಮಹೇಶ ಹೊಗೆಸೊಪ್ಪಿನ ಹಾಗೂ ಗಣೇಶ ಬೇವಿನಮರದ ಆಗ್ರಹಿಸಿದರು. ಸಭೆಯ ಅಧ್ಯಕ್ಷತೆಯನ್ನು ಪುರಸಭೆ ಅಧ್ಯಕ್ಷೆ ಗಂಗಮ್ಮ ಫಕ್ಕೀರಸ್ವಾಮಿಮಠ, ಮುಖ್ಯಾಧಿಕಾರಿ ಉಮೇಶ ಗುಡ್ಡದ ಹಾಗೂ ಸದಸ್ಯರು ಮೊದಲಾದವರು ಹಾಜರಿದ್ದರು. ಹಿರಿಯ ಮುಖಂಡ ಮಾಜಿ ಅಧ್ಯಕ್ಷ ಶಂಕ್ರಣ್ಣ ಅಂದಲಗಿ ವಿಶೇಷ ಸಾಮಾನ್ಯ ಸಭೆ ಮುಗಿಯುವವರೆಗೆ ಶಾಂತವಾಗಿ ಕುಳಿತುಕೊಂಡಿದ್ದು ವಿಶೇಷವಾಗಿತ್ತು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement