ಮೂಢನಂಬಿಕೆಯಿಂದ ಅಭಿವೃದ್ಧಿಗೆ ಹಿನ್ನಡೆ
ಗದಗ: ಇಂದು ವಿಜ್ಞಾನ ಸಾಕಷ್ಟು ಮುಂದುವರಿದರೂ ಮೌಢ್ಯತೆ, ಕಂದಾಚಾರ ಅಷ್ಟೇ ಪ್ರಮಾಣದಲ್ಲಿ ಹೆಚ್ಚುತ್ತಿರುವುದು ವಿಷಾದಕರ. ಜನರಲ್ಲಿ ಮೂಢ ನಂಬಿಕೆಗಳು ಹೀಗೆ ಮುಂದುವರಿದಲ್ಲಿ ಅಭಿವೃದ್ಧಿಗೆ ಹಿನ್ನಡೆಯಾಗಲಿದೆ ಎಂದು ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ಹೇಳಿದರು.
ಅವರು ಗುರುವಾರ ನರಗದ ಜಗದ್ಗುರು ತೋಂಟದಾರ್ಯ ಕಾಲೇಜಿನ ಸಭಾಭವನದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಬೆಂಗಳೂರು, ಭಾರತ ಜ್ಞಾನ-ವಿಜ್ಞಾನ ಸಮಿತಿ ಕರ್ನಾಟಕ, ಸಾರ್ವಜನಿಕ ಶಿಕ್ಷಣ ಇಲಾಖೆ ಗದಗ, ಜೆ.ಟಿ. ಕಾಲೇಜ್ ವಿಜ್ಞಾನ ಸಂಘ ಹಾಗೂ ಪಿಜಿ ವಿಭಾಗ ಗದಗ ಇವುಗಳ ಆಶ್ರಯದಲ್ಲಿ ಪ್ರೌಢಶಾಲಾ ವಿಜ್ಞಾನ ಶಿಕ್ಷಕರಿಗಾಗಿ ಜರುಗಿದ ಆಕಾಶ ವೀಕ್ಷಣೆ ಹಾಗೂ ಖಗೋಳ ಅಧ್ಯಯನ ಒಂದು ದಿನದ ಜಿಲ್ಲಾ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಮೂಢನಂಬಿಕೆಯ ಹೆಸರಿನಲ್ಲಿ ಜನತೆ ಇಂದಿಗೂ ಸಾಕಷ್ಟು ಹಾಲು, ನೀರು, ಅನ್ನ ಸೇರಿದಂತೆ ಅನೇಕ ಆಹಾರ ಧಾನ್ಯ ಹಾಳುಮಾಡುತ್ತಿದ್ದಾರೆ. ಗ್ರಾಮೀಣ ಭಾಗದ ಜನರಲ್ಲಿ ಇಂದಿಗೂ ಸಹ ಮೂಢನಂಬಿಕೆ ಹೆಚ್ಚಿನ ಪ್ರಮಾಣದಲ್ಲಿ ಬೇರೂರಿದೆ. ಜನತೆ ಶಾಸ್ತ್ರ ಕೇಳುವುದು, ದೇವರ ಹೆಸರಿನಲ್ಲಿ ಆಣೆ, ಪ್ರಮಾಣ ಮಾಡುವುದನ್ನು ಇಂದಿಗೂ ಮುಂದುವರೆಸಿಕೊಂಡು ಬಂದಿದ್ದಾರೆ. ಇದರಿಂದ ಗ್ರಾಮೀಣ ಜನತೆಯ ಅಭಿವೃದ್ಧಿಯಲ್ಲಿ ಸಾಕಷ್ಟು ಹಿನ್ನಡೆಯಾಗಲಿದೆ. ಇಂದು ವಿಜ್ಞಾನವನ್ನು ನೋಡುವ ವಿಧಾನ ಬದಲಾವಣೆಯಾಗಬೇಕಿದೆ. ಪ್ರೌಢ ಶಾಲೆಗಳಲ್ಲಿ ವಿಜ್ಞಾನವನ್ನು ಬೋಧಿಸುವ ಶಿಕ್ಷಕರು ಮಕ್ಕಳಿಗೆ ಹಾಗೂ ಅವರ ಪಾಲಕರಿಗೆ ವಿಜ್ಞಾನದ ಹಾಗೂ ಅದರ ಮಹತ್ವದ ಕುರಿತು ತಿಳಿವಳಿಕೆ ನೀಡುವುದು ಹೆಚ್ಚು ಅವಶ್ಯವಾಗಿದೆ ಎಂದರು. ಜೆ.ಟಿ. ಕಾಲೇಜ್ ಪ್ರಾಚಾರ್ಯ ಎಸ್.ಎಸ್. ಯಂಕಂಚಿ ಮಾತನಾಡಿ, ಉಕ ಭಾಗದಲ್ಲಿನ ಜನರ ಮೂಢನಂಬಿಕೆಯನ್ನು ಹೊಡೆದೋಡಿಸಿ, ವೈಚಾರಿಕ ಮನೋಭಾವನೆಯನ್ನು ಬೆಳೆಸುವಲ್ಲಿ ಭಾರತ ಜ್ಞಾನ-ವಿಜ್ಞಾನ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಅನೇಕ ಜನಪರ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿವೆ ಎಂದರು. ಜೆ.ಟಿ.ದಾಸರ ಮಾತನಾಡಿ, ಇಂದು ವಿಜ್ಞಾನ ಶಿಕ್ಷಕರ ಮನೆಗಳಲ್ಲಿಯೇ ಅಜ್ಞಾನ, ಅಂಧಕಾರ, ಮೂಢನಂಬಿಕೆ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿರುವುದು ವಿಷಾದಕರ. ವಿಜ್ಞಾನ ಮುಂದುವರಿದಷ್ಟು ಮೂಢನಂಬಿಕೆಗಳೂ ಅಷ್ಟೇ ಪ್ರಬಲವಾಗಿ ಬೆಳೆಯುತ್ತಿರುವುದು ವಿಷಾದಕರ ಸಂಗತಿಯಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ.ರಾ.ವಿ.ಪ. ರಾಜ್ಯಾಧ್ಯಕ್ಷ ಎಸ್.ವಿ. ಸಂಕನೂರ ಮಾತನಾಡಿ, ಬಾಹ್ಯಾಕಾಶದಲ್ಲಿ ಅನೇಕ ಸಂಶೋಧನೆಗಳು ನಡೆದಿವೆ. ಅದಕ್ಕಾಗಿ ಅನೇಕ ಹಿರಿಯ ವಿಜ್ಞಾನಿಗಳು ತಮ್ಮ ಇಡೀ ಜೀವನವನ್ನೇ ತ್ಯಾಗ ಮಾಡಿದ್ದಾರೆ. ಆದ್ದರಿಂದ ವಿಜ್ಞಾನ ಬೋಧಕರು ಮಕ್ಕಳಲ್ಲಿ ಕುತೂಹಲ ಮೂಡಿಸಿ, ಆ ವಿಷಯವನ್ನು ಬೋಧಿಸಬೇಕು. ಎಲ್ಲ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಈ ಕಾರ್ಯಾಗಾರದ ಸದುಪಯೋಗ ಪಡಿಸಿಕೊಳ್ಳಬೇಕೆಂದರು. ಡಾ. ನಿಂಗು ಸೊಲಗಿ, ಎಸ್. ಮಂಜುನಾಥ ವಿಜ್ಞಾನ ಗೀತೆಗಳನ್ನು ಹಾಡಿದರು. ಎಸ್. ರವಿಶಂಕರ ಉಪಸ್ಥಿತರಿದ್ದರು. ಭಾರತ ಜ್ಞಾನ-ವಿಜ್ಞಾನ ಸಮಿತಿ ರಾಜ್ಯ ಉಪಾಧ್ಯಕ್ಷ ಎಫ್.ಸಿ. ಚೇಗರಡ್ಡಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್.ವಿ. ಜೋಶಿ ನಿರೂಪಿಸಿ, ಎಸ್.ವಿ. ಅಂಗಡಿ ವಂದಿಸಿದರು.