ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ತಾಡಪತ್ರಿ ವಿತರಣೆಗೆ ಒತ್ತಡ

Vishwanath S
Updated On : 25 Jan 2014, 12:24 pm

ಶಿರಹಟ್ಟಿ: ಪ್ರಸಕ್ತ ವರ್ಷ ಕೃಷಿ ಇಲಾಖೆಗೆ ಕೇವಲ 428 ತಾಡಪತ್ರಿಗಳು ಬಂದಿದ್ದು, ವಿತರಣೆ ಮಾಡುವುದು ಕಷ್ಟವಾಗಿದೆ. ಕಳೆದ ಸಾಲಿನಲ್ಲಿ ಒಂದು ಸಾವಿರಕ್ಕಿಂತ ಹೆಚ್ಚು ಪೂರೈಕೆಯಾಗಿದ್ದವು. ಈ ಬಾರಿ ಕಡಿಮೆ ಬಂದಿರುವುದರಿಂದ ಹಾಗೂ ತಾಡಪತ್ರಿ ವಿತರಣೆಯಲ್ಲಿ ಅನೇಕ ಒತ್ತಡಗಳು ಬರುತ್ತಿದ್ದು, ಇದರಿಂದಾಗಿ ವಿತರಣೆ ಮಾಡುವಲ್ಲಿ ತಾಪತ್ರಯವುಂಟಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿ ಪ್ರಹ್ಲಾದರಾವ್ ತಮ್ಮ ಗೋಳು ತೋಡಿಕೊಂಡರು.
ಶುಕ್ರವಾರ ತಾಲೂಕು ಪಂಚಾಯತ ಸಾಮರ್ಥ್ಯ ಸೌಧದಲ್ಲಿ ನಡೆದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇಲಾಖೆ ಮೇಲೆ ನಡೆದ ಚರ್ಚೆ ವೇಳೆ ಮಾತನಾಡಿದ ಅವರು, ಈಗಾಗಲೇ ಶಾಸಕರು ಒಂದು ಯಾದಿಯನ್ನು ನೀಡಿದ್ದು, ಅದರಂತೆ ವಿತರಿಸಲು ಮುಂದಾದರೆ ರೈತರು ಹಾಗೂ ಸಾರ್ವಜನಿಕರು ಇಲ್ಲಸಲ್ಲದ ದಾಖಲೆಗಳನ್ನು ಕೇಳುತ್ತಿದ್ದು, ಈ ವಿಷಯ ತಮಗೆ ಗೋಳು ತಂದಿದೆ ಎಂದು ಸಭೆಯ ಗಮನಕ್ಕೆ ತಂದರು. ಆಗ ಮಧ್ಯೆ ಪ್ರವೇಶಿಸಿದ ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಕೋಟೆಪ್ಪ ವರ್ದಿ ಪ್ರತಿ ವರ್ಷವೂ ಈ ವಿಷಯ ಗೊಂದಲ ಸೃಷ್ಟಿಸುತ್ತಿದೆ. ಇದನ್ನು ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಸಹಕರಿಸಿಕೊಂಡು ಸಾರ್ವಜನಿಕರಿಗೆ ತಿಳಿ ಹೇಳಿ ಸರಿಪಡಿಸಿಕೊಳ್ಳಬೇಕೆಂದು ಸಮಜಾಯಿಸಿದರು. ತೋಟಗಾರಿಕೆ ಇಲಾಖೆಯ ಯೋಜನೆಗಳ ಬಗ್ಗೆ ಕೋಟೆಪ್ಪ ವರ್ದಿ ಮಾಹಿತಿ ಪಡೆಯುತ್ತಿದ್ದಂತೆ ಅಧಿಕಾರಿ ಸುರೇಶ ಕುಂಬಾರ ಮಾತನಾಡಿ, 2013-14ನೇ ಸಾಲಿನಲ್ಲಿ 750 ಸಸಿಗಳು ವಿತರಣೆ ಮಾಡಬೇಕಾಗಿದ್ದು, ಸದ್ಯ ತಾಲೂಕಿನ ಸರ್ಕಾರಿ ಶಾಲೆಗಳಿಗೆ ಹಾಗೂ ಪಟ್ಟಣದ ಕ್ರೀಡಾಂಗಣದಲ್ಲಿ ನೆಡಲು 200 ಸಸಿಗಳನ್ನು ಮಾತ್ರ ವಿತರಣೆ ಮಾಡಲಾಗಿದೆ ಎಂದು ಹೇಳುತ್ತಿದ್ದಂತೆ ಸಭೆಗೆ ಎಲ್ಲ ಯೋಜನೆಗಳ ಬಗ್ಗೆ ಸರಿಯಾದ ಮಾಹಿತಿ ನೀಡುವಂತೆ ತಾಕೀತು ಮಾಡಿದರು.
ತಾಲೂಕಿನ ಗ್ರಾಮೀಣ ಪ್ರದೇಶದ ಕೆಲ ಕಡೆಗಳಲ್ಲಿ ಹೆಸ್ಕಾಂ ಇಲಾಖೆಯ ವಿದ್ಯುತ್ ತಂತಿಗಳು ಜೋತು ಬಿದ್ದಿವೆ. ಇದರಿಂದ ಜನರಿಗೆ ಅಪಾಯ ಉಂಟಾಗುವ ಸಾಧ್ಯತೆ ಕಂಡುಬರುತ್ತಿದ್ದು, ಇಲಾಖೆಯ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮವಾಗಿ ಜಾಗೃತಿ ವಹಿಸಬೇಕು ಎಂದು ಹೆಸ್ಕಾಂ ಇಲಾಖೆ ತಾಲೂಕು ಕಾರ್ಯನಿರ್ವಾಹಕ ಎಂಜಿನಿಯರ್ ಬಿ. ಅಂಜನಪ್ಪ ಅವರಿಗೆ ಕೋಟೆಪ್ಪ ವರ್ದಿ ತಿಳಿಸಿದರು.
ಸಾಮಾಜಿಕ ಅರಣ್ಯ ಇಲಾಖೆಯವರು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಲಕ್ಷಾಂತರ ಹಣ ಖರ್ಚು ಮಾಡಿ, ತಾಲೂಕಿನ 24 ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿನ ಸ್ಮಶಾನ, ರಸ್ತೆ, ಶಾಲೆಗಳಲ್ಲಿ ಸುಮಾರು 12 ಸಾವಿರ ಹೊಂಗೆ ಸಸಿಗಳನ್ನು ನೆಟ್ಟಿರುವುದಾಗಿ ಸಭೆಗೆ ಮಾಹಿತಿ ನೀಡುತ್ತಿದ್ದು, ಯಾವ ಭಾಗದಲ್ಲಿಯೂ ಸರಿಯಾದ ನಿರ್ವಹಣೆ ಇಲ್ಲದೆ ಸಸಿಗಳಿಗೆ ನಿತ್ಯ ನೀರು ಹಾಕದೇ ಇರುವುದರಿಂದ ಬೆಳೆದಿಲ್ಲ. ಅಧಿಕಾರಿಗಳ ಬೇಜವಾಬ್ದಾರಿತನದಿಂದ ಯೋಜನೆಗಳು ಹಾಳಾಗುತ್ತಿವೆ ಎಂದು ಸದಸ್ಯರು ಗಂಭೀರ ಆರೋಪ ಮಾಡಿದರು. ಉಳಿದಂತೆ ಸಮಾಜ ಕಲ್ಯಾಣ, ಶಿಶು ಅಭಿವೃದ್ಧಿ, ಲೋಕೋಪಯೋಗಿ, ಜಿಪಂ, ಶಿಕ್ಷಣ, ಆರೋಗ್ಯ, ಜಲಾನಯನ ಮತ್ತಿತರ ಇಲಾಖೆಗಳ ಮೇಲೆ ಚರ್ಚೆ ನಡೆಯಿತು. ತಾಲೂಕು ಪಂಚಾಯತ ಅಧ್ಯಕ್ಷೆ ಸುನಂದಾ ಬಿದರಳ್ಳಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಶಾರದಾ ಕವಲೂರ, ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ವೈ.ಎಲ್. ಹಂಪಣ್ಣ ಸಭೆಯಲ್ಲಿ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement