ನಿಗದಿತ ಅವಧಿಯಲ್ಲಿ ಮಾಹಿತಿ ನೀಡಿ
ಕನ್ನಡಪ್ರಭ ವಾರ್ತೆ, ರೋಣ, ಜ. 24
ಸರ್ಕಾರದ ಯೋಜನೆಗಳ ಮಾಹಿತಿ, ಮಹತ್ವ ಮತ್ತು ಸಮಸ್ಯೆಗಳ ಪರಿಹಾರಕ್ಕೆ ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಿದವರಿಗೆ ಅಧಿಕಾರಿಗಳು ಸ್ಪಂದಿಸಬೇಕು. ಆ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಮಾಹಿತಿ ಹಕ್ಕು 2005 ಅಧಿನಿಯಮ ಅತ್ಯಂತ ಸಹಕಾರಿಯಾಗಿದೆ ಎಂದು ತಹಸೀಲ್ದಾರ್ ಎ.ಜಿ. ಪಂಡೀತ ಹೇಳಿದರು. ಅವರು ಈಚೆಗೆ ಪಟ್ಟಣದ ಅಂದಾನಪ್ಪ ದೊಡ್ಡಮೇಟಿ ಸಭಾಭವನದಲ್ಲಿ ಆಡಳಿತ ತರಬೇತಿ ಸಂಸ್ಥೆ ಮೈಸೂರು ವತಿಯಿಂದ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳಿಗಾಗಿ ಏರ್ಪಡಿಸಿದ್ದ ಮಾಹಿತಿ ಹಕ್ಕು 2005ರ ಅಧಿನಿಯಮ ಕುರಿತು ಜರುಗಿದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಸಾರ್ವಜನಿಕರು ಯೋಜನೆಗಳ ಮಾಹಿತಿ ನೀಡಲು ಮಾಹಿತಿ ಹಕ್ಕು ಮೂಲಕ ಅರ್ಜಿ ಸಲ್ಲಿಸಿದ್ದಲ್ಲಿ, ಆಯಾ ಇಲಾಖೆಯ ಮುಖ್ಯ ಅಧಿಕಾರಿಗಳು ಅಗತ್ಯ ಮಾಹಿತಿ ನೀಡುವ ಅಧಿಕಾರ ಹೊಂದಿರುತ್ತಾರೆ. ಅರ್ಜಿಯನ್ನು ಕೂಲಂಕಷವಾಗಿ ಪರಿಶೀಲಿಸಿ ಸಮರ್ಪಕ ಮಾಹಿತಿ ನೀಡುವಲ್ಲಿ ಅಧಿಕಾರಿಗಳ ಪಾತ್ರ ಪ್ರಮುಖವಾಗಿದೆ ಎಂದರು.
ತಾಪಂ ಇಒ ಎಸ್.ಎಂ. ಪಿಡಶೆಟ್ಟಿ ಮಾತನಾಡಿ, ಸಾರ್ವಜನಿಕರು ಮಾಹಿತಿ ಹಕ್ಕಿನ ಮಹತ್ವವನ್ನು ತಿಳಿಯಬೇಕು. ಆ ದಿಸೆಯಲ್ಲಿ ಸರ್ಕಾರಿ ಅಧಿಕಾರಿಗಳ ಪಾತ್ರ ಅತ್ಯಂತ ಮುಖ್ಯವಾಗಿದೆ. ಸಾರ್ವಜನಿಕರು ಮಾಹಿತಿ ಹಕ್ಕಿನಡಿ ಕೇಳಿದ ಮಾಹಿತಿಯನ್ನು ಅಧಿಕಾರಿಗಳು ಯಾವದೇ ಕಾರಣಕ್ಕೂ ವಿಳಂಬ ಮಾಡದೇ ನಿಗಧಿತ ಅವಧಿಯಲ್ಲಿ ನೀಡಬೇಕು. ತಪ್ಪಿದಲ್ಲಿ ಅಥವಾ ಉದ್ದೇಶಪೂರ್ವಕವಾಗಿ ವಿಳಂಬ ಮಾಡಿದಲ್ಲಿ ಅಂತವರ ಮೇಲೆ ಕಾನೂನಿನ ಸೂಕ್ತ ಕ್ರಮ ಜರುಗುವುದು ಎಂದರು. ಮಾಹಿತಿ ಹಕ್ಕು 2005ರ ಅಧಿನಿಯಮ ಕುರಿತು ತರಬೇತಿಯನ್ನು ತರಬೇತಿ ಸಂಯೋಜಕರಾದ ಕೆ.ಎಂ. ಪ್ರಸಾದ ಮತ್ತು ಕೆ.ಎಸ್. ಸುರೇಶ ನೀಡಿದರು. ತರಬೇತಿ ಕಾರ್ಯಾಗಾರದಲ್ಲಿ ತಾಪಂ, ಸಿಡಿಪಿಒ ಸಮಾಜ ಕಲ್ಲಾಣ, ಬಿಸಿಎಂ, ಪುರಸಭೆ ಸೇರಿದಂತೆ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ತರಬೇತಿ ಪ್ರಯೋಜನ ಪಡೆದರು. ಅಧ್ಯಕ್ಷತೆಯನ್ನು ತಾಪಂ ಅಧ್ಯಕ್ಷೆ ತಿಪ್ಪವ್ವ ದೊಡ್ಡಮನಿ ವಹಿಸಿದ್ದರು. ಸಮಾಜ ಕಲ್ಯಾಣ ಅಧಿಕಾರಿ ಎಲ್.ಎಸ್. ಮೇಸ್ತಾ, ಸಿಡಿಪಿಒ ಬಿ.ಎಸ್. ಮೋಕಾಶಿ, ಉಪತಹಸೀಲ್ದಾರ್ ಎನ್.ಎಸ್. ಕೂಡಲ್, ಕೆಇಬಿ ಎಇಇ ಪ್ರಕಾಶ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ರವಿ ನಿರೂಪಿಸಿ, ವಂದಿಸಿದರು.