ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮುಂಡರಗಿ ವಿದ್ಯಾರ್ಥಿ ಕಿರಣಗೆ ಒಲಿದ ದೆಹಲಿ ಪರೇಡ್ ಭಾಗ್ಯ

Vishwanath S
Updated On : 25 Jan 2014, 12:24 pm

ಕನ್ನಡಪ್ರಭ ವಾರ್ತೆ, ಮುಂಡರಗಿ, ಜ. 24
ಮುಂಡರಗಿ ಬರ ಪ್ರದೇಶ, ಅಭಿವೃದ್ಧಿಯಿಂದ ಹಿಂದುಳಿದಿದ್ದರೂ ಇಲ್ಲಿ ಸಾಧಕರಿಗೇನೂ ಕಮ್ಮಿಯಿಲ್ಲ.
ವಿದ್ಯೆ, ಸಾಹಿತ್ಯ, ಸಂಸ್ಕೃತಿ, ಕಲೆ, ಆಟ ವಿವಿಧ ರಂಗಗಳಲ್ಲಿ ತಮ್ಮ ಪ್ರತಿಭೆ ಮೆರೆದ ಹಲವು ಪ್ರತಿಭಾನ್ವಿತರಿದ್ದಾರೆ.
ಈಗ ಈ ಸಾಧನೆಯ ಹಾದಿಯಲ್ಲಿ ಮತ್ತೋರ್ವ ವಿದ್ಯಾರ್ಥಿ ಗಮನಸೆಳೆದಿದ್ದು, ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿ ಕಿರಣ ಶಾನಭಾಗ ಜನವರಿ 26ರಂದು ಜರುಗುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ದೆಹಲಿ ಪರೇಡ್ಗೆ ಆಯ್ಕೆಯಾಗಿದ್ದಾನೆ.
ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿಯಲ್ಲಿ ವಿಜ್ಞಾನ ವಿಷಯದಲ್ಲಿ ವ್ಯಾಸಂಗ ಮಾಡುತ್ತಿರುವ ಕಿರಣ್ ಎನ್ಸಿಸಿಯಲ್ಲಿ ಆಸಕ್ತಿ ಹೊಂದಿದ್ದರಿಂದ ಪಟ್ಟಣದ ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿಯ ಕೆ.ಆರ್. ಬೆಲ್ಲದ ಕಲಾ ಹಾಗೂ ವಾಣಿಜ್ಯ ಮಹಾ ವಿದ್ಯಾಲಯದಲ್ಲಿದ್ದ ಎನ್ಸಿಸಿಗೆ ಸೇರಿಕೊಳ್ಳುವ ಮೂಲಕ ಗದಗ, ದಾವಣಗೆರೆ, ಬಳ್ಳಾರಿ, ಮೈಸೂರು ಹಾಗೂ ಬೆಂಗಳೂರಿನಲ್ಲಿ ಒಂದು  ತಿಂಗಳ ಕಾಲ ಎನ್ಸಿಸಿ ತರಬೇತಿ ಪಡೆದು ಉತ್ತಮ ಹಾಗೂ ಕ್ರಿಯಾಶೀಲ ಕೆಡೆಟ್ ಆಗಿ ಹೊರಹೊಮ್ಮಿ, ಇದೀಗ ಕರ್ನಾಟಕ ಎನ್ಸಿಸಿಯಲ್ಲಿ ಗದಗ 38ನೇ ಬಟಾಲಿಯನ್ನಿಂದ ದೆಹಲಿಯಲ್ಲಿ ನಡೆಯಲಿರುವ ಪರೇಡ್ನಲ್ಲಿ ಪಾಲ್ಗೊಳ್ಳಲಿದ್ದಾನೆ.
ಪಠ್ಯೇತರ ಚಟುವಟಿಕೆಯಲ್ಲಿ ಎತ್ತಿದ ಕೈ: ಕಿರಣ್ ಶಾನಭಾಗ ಕೇವಲ ಓದುವುದು ಮಾತ್ರವಲ್ಲ. ಮಕ್ಕಳ ಹಬ್ಬ, ಪ್ರತಿಭಾ ಕಾರಂಜಿ, ಕಲಾಪ್ರತಿಭೋತ್ಸವ ಸೇರಿದಂತೆ ಅನೇಕ ಕಾರ್ಯಕ್ರಮಗಳಲ್ಲಿ ಜನಪದ ಗೀತೆ, ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ, ಶಿವಶರಣರ ವಚನಗಳು ಸೇರಿದಂತೆ ಅನೇಕ ಹಾಡುಗಳನ್ನು ಹಾಡಿ ಜನರ ಮನಸ್ಸನ್ನು ಗೆದ್ದಿದ್ದಾರೆ. ಏಕಪಾತ್ರ ಅಭಿನಯ, ಚಿಂತನ ಗಣಿತ ಸ್ಪರ್ಧೆ, ವಿಜ್ಞಾನ ವಸ್ತುಪ್ರದರ್ಶನ ಸೇರಿದಂತೆ ಅನೇಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಬಹುಮಾನ ಗಿಟ್ಟಿಸಿಕೊಂಡಿದ್ದಾರೆ.
ಪ್ರತಿಭಾವಂತರೆನಿಸಿಕೊಂಡವರು ಪ್ರತಿ ವಿಷಯದಲ್ಲಿಯೂ ಸಕ್ರಿಯರಾಗಿರುತ್ತಾರೆ ಎಂಬುವುದಕ್ಕೆ ಕಿರಣ್ ಹಾಗೂ ಅವನ ಗೆಳೆಯರೇ ಸಾಕ್ಷಿ. ಶಾಲಾ ಪಾಠದೊಂದಿಗೆ ಸಾಹಿತ್ಯ-ಸಾಂಸ್ಕೃತಿಕವಾಗಿ ಸಕ್ರಿಯವಾಗಿರುವ ಕಿರಣ ಶಾನಭಾಗ ಮುಂಡರಗಿಯಂತಹ ಗ್ರಾಮೀಣ ಪ್ರದೇಶದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಯಾಗಿ ಗಣರಾಜ್ಯೋತ್ಸವದ ಪರೇಡ್ಗೆ ಆಯ್ಕೆಯಾಗಿರುವುದು ಹೆಮ್ಮೆ ಎನಿಸುತ್ತದೆ.
 ಡಾ. ನಿಂಗು ಸೊಲಗಿ, ಮಕ್ಕಳ ಸಾಹಿತಿ, ವಿಮರ್ಶಕರು, ಮುಂಡರಗಿ


-ಶರಣು ಸೊಲಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement