ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಶಾಲಾ ಆವರಣದಲ್ಲೇ ಕಸಾಯಿಖಾನೆ!

Vishwanath S
Updated On : 25 Jan 2014, 12:24 pm

ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ. ಜ. 24
ಶಾಲೆಗಳೆಂದರೆ ದೇವಾಲಯಗಳಿದ್ದಂತೆ. ಮಕ್ಕಳನ್ನು ತಿದ್ದಿ, ತೀಡಿ ಸುಸಂಸ್ಕೃತರನ್ನಾಗಿಸುವ ಸ್ಥಳಗಳು. ಇಲ್ಲಿ ಉತ್ತಮ ಪರಿಸರ ಇರುವುದು ಅವಶ್ಯ. ಆದರೆ, ಈ ಶಾಲೆಗೆ ಮಾತ್ರ ಇದು ಅನ್ವಯಿಸುವುದಿಲ್ಲ.
ಇಲ್ಲಿಗೆ ನೀವು ಕಾಲಿಟ್ಟರೆ ಗಬ್ಬು ದುರ್ವಾಸನೆ ನಿಮ್ಮನ್ನು ಸ್ವಾಗತಿಸುತ್ತದೆ. ಸತ್ತು, ಕೊಳೆತು ಹೋಗಿರುವ ದನಗಳ ವಾಸನೆ  ಬಡಿದು ನಿಮ್ಮನ್ನು ದಂಗಾಗಿಸುತ್ತದೆ. ಇದು ಪಟ್ಟಣದ ಉರ್ದು ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲಾ ಶಾಲಾ ಆವರಣದ ದುಸ್ಥಿತಿ.
ಹೌದು, ಶಾಲಾ ಆವರಣದಲ್ಲಿಯೇ ಆಡು, ಕುರಿ, ಎತ್ತು ಎಮ್ಮೆಗಳನ್ನು ಕಡಿದು ಮಾರಾಟ ಮಾಡುವ ಕಸಾಯಿಖಾನೆ ಇದ್ದು, ಇದು ಶಾಲಾ ವಾತಾವರಣವನ್ನು ಹದಗೆಡಿಸಿದೆ.
ಕಸಾಯಿಖಾನೆಯ ತ್ಯಾಜ್ಯದ ಗಬ್ಬುವಾಸನೆ ಇಡೀ ಶಾಲಾ ಆವರಣದ ತುಂಬೆಲ್ಲ ಹರಡಿ, ಇದು ಶಾಲಾ ಆವರಣವೋ, ಕಸಾಯಿಖಾನೆಯೋ ಎನ್ನುವಂತಾಗಿದೆ. ಅಲ್ಲದೇ ಕಸಾಯಿಖಾನೆಯ ತ್ಯಾಜ್ಯವನ್ನು ತಿನ್ನಲು ಬರುವ ನಾಯಿಗಳ ಕಚ್ಚಾಟ, ಕಾಗೆ, ಹದ್ದುಗಳು ಕಿರುಚಾಟ, ಮಾಂಸ ಖರೀದಿಸಲು ಬರುವ ಗಿರಾಕಿಗಳ ಸದ್ದು ಇವುಗಳ ಮಧ್ಯೆ ಮಕ್ಕಳು ಹೇಗೆ ವಿದ್ಯಾಭ್ಯಾಸ ಮಾಡಬೇಕು? ಇದು ಮಕ್ಕಳ ಮನಸ್ಸಿನ ಮೇಲೆ ಹಾಗೂ ವಿದ್ಯಾಭ್ಯಾಸದ ಮೇಲೆ ಯಾವು ಪರಿಣಾಮ ಬೀರಬಹುದು ಎನ್ನುವ ಕಲ್ಪನೆ ಪುರಸಭೆಯ ಆಡಳಿತ ಮಂಡಳಿಗೆ ಹಾಗೂ ಶಿಕ್ಷಣ ಇಲಾಖೆಗೆ ತಿಳಿಯುತ್ತಿಲ್ಲವೆ ?
ಆದೇಶ ಉಲ್ಲಂಘನೆ: ಶಾಲಾ ಕಾಲೇಜುಗಳ ಅಕ್ಕಪಕ್ಕದ 100 ಮೀಟರ್ ಅಂತರದಲ್ಲಿ ಯಾವುದೇ ಮದ್ಯದಂಗಡಿ, ಮಾಂಸದ ಅಂಗಡಿಗಳು, ಸಿಗರೇಟ್ ಹಾಗೂ ಗುಟಖಾ ಮಾರಾಟ ಮಾಡುವ ಅಂಗಡಿಗಳು ಇರುವಂತಿಲ್ಲ ಎಂದು ಎರಡು ವರ್ಷಗಳ ಹಿಂದೆ ಸುಪ್ರೀಂಕೋರ್ಟ್ ಆದೇಶ ನೀಡಿದೆ. ಆದರೆ, ಇಲ್ಲಿ ಮಾತ್ರ ಅದಕ್ಕೆ ಕವಡೆ ಕಾಸಿನ ಕಿಮ್ಮತ್ತನ್ನು ನೀಡಿಲ್ಲ.
ಪಟ್ಟಣದ ಉರ್ದು ಪ್ರಾಥಮಿಕ ಶಾಲೆ ಹಾಗೂ ಉರ್ದು ಹೈಸ್ಕೂಲ್ನಲ್ಲಿ 500 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು, ಇವರ ಆರೋಗ್ಯದ ಹಾಗೂ ಮಾನಸಿಕವಾಗಿ ಇವರ ಮೇಲೆ ಎಷ್ಟು ಪರಿಣಾಮ ಕಸಾಯಿಖಾನೆ ಬೀರುತ್ತಿದೆ ಎನ್ನುವುದನ್ನು ಅರಿತು, ಮಕ್ಕಳಿಗೆ ತೊಂದರೆಯಾಗದಂತೆ ಕ್ರಮಕ್ಕೆ ಪುರಸಭೆಯವರಾಗಲಿ ಯಾವುದೇ ಸಂಘ ಸಂಸ್ಥೆಗಳಾಗಲಿ ಚಕಾರವೆತ್ತುತ್ತಿಲ್ಲ. ಇನ್ನು ಶಾಲಾ ಆವರಣದ ಕಾಂಪೌಂಡ್ ಗೋಡೆಯ ಕಾಮಗಾರಿಯು ಅರ್ಧಕ್ಕೆ ನಿಂತುಕೊಂಡಿದ್ದರಿಂದ ಶಾಲೆ ಪ್ರಾರಂಭಕ್ಕೂ ಮೊದಲು ಹಾಗೂ ಶಾಲೆ ಬಿಟ್ಟ ನಂತರ ಸಾರ್ವಜನಿಕರ ಬಯಲು ಶೌಚಕ್ಕೆ ಹೇಳಿ ಮಾಡಿಸಿದ ಜಾಗ ಆಗಿದೆ. ಈ ಎಲ್ಲ ಹದಗೆಟ್ಟ ವಾತಾವರಣದಲ್ಲಿ ಮಕ್ಕಳು ಹೇಗೆ ಶಿಕ್ಷಣ ಪಡೆಯುತ್ತಾರೆ ಎಂದು ಇಲ್ಲಿನ ಸಾರ್ವಜನಿಕರು, ಮಕ್ಕಳ ಪಾಲಕರು ಯೋಚಿಸದಿರುವುದು ಮಾತ್ರ ದುರದೃಷ್ಟಕರ.
ಮನವಿಗೆ ಸ್ಪಂದಿಸಿಲ್ಲ: ಉರ್ದು ಶಾಲೆಯ ಆವರಣದಲ್ಲಿನ ಕಸಾಯಿಖಾನೆಯನ್ನು ತೆರವುಗೊಳಿಸುವಂತೆ ಹಲವಾರು ಬಾರಿ ಅಲ್ಲಿನ ಶಿಕ್ಷಕರು ಮನವಿ ಮಾಡಿಕೊಂಡಿದ್ದರೂ ಅವರ ಮನವಿಗೆ ಪುರಸಭೆಯವರು ಯಾವುದಾದರೂ ಸಬೂಬು ಹೇಳಿ ಕಳುಹಿಸುತ್ತಿದ್ದಾರೆ ಎಂಬುದು ಶಿಕ್ಷಕರ ಅಳಲಾಗಿದೆ. ಪಟ್ಟಣದ ಪುರಸಭೆಯ ಅಧಿಕಾರಿಗಳಿಗೆ ಕಸಾಯಿಖಾನೆಯ ಎಲ್ಲ ವಿಷಯ ಗೊತ್ತಿದ್ದರೂ ಕ್ರಮಕ್ಕೆ ಮುಂದಾಗದೇ ಏನೂ ಗೊತ್ತಿಲ್ಲದವರಂತೆ ವರ್ತಿಸುತ್ತಿದ್ದಾರೆ.
ತ್ಯಾಜ್ಯ ವಿಲೇವಾರಿ ಘಟಕ: ಉರ್ದು ಶಾಲಾ ಆವರಣದಲ್ಲಿ ಕಸಾಯಿಖಾನೆಯ ತಾಜ್ಯ, ಅದರಿಂದ ಉಂಟಾಗುವ ಗಬ್ಬುವಾಸನೆಯ ಬಗ್ಗೆ ಗೊತ್ತಿದ್ದೂ ಯಾರೂ ಚಕಾರವೆತ್ತದೆ ಸುಮ್ಮನೆ ಇರುವುದು ಹಲವಾರು ಸಂಶಯಕ್ಕೆ ಕಾರಣವಾಗಿದೆ. ಇನ್ನು ಪುರಸಭೆಯವರು ಘನ ತಾಜ್ಯ ವಿಲೇವಾರಿ ಘಟಕವನ್ನು ಪಟ್ಟಣದ ಹೊರ ವಲಯದಲ್ಲಿ ಸ್ಥಾಪನೆ ಮಾಡಿದ್ದು, ಈ ತಾಜ್ಯ ಘಟಕದಲ್ಲಿ 2006-07ರಲ್ಲಿ ರು. 8 ಲಕ್ಷ ವೆಚ್ಚದಲ್ಲಿ ಕಸಾಯಿಖಾನೆ ನಿರ್ಮಾಣ ಮಾಡಿದ್ದರೂ ಇಲ್ಲಿಯವರೆಗೂ ಅವುಗಳ ಬಳಕೆ ಮಾಡುತ್ತಿಲ್ಲ. ಹಾಗಾದರೆ ಈ ಕಟ್ಟಡ ನಿರ್ಮಾಣ ಮಾಡಿದ್ದರ ಉದ್ದೇಶವಾದರೂ ಏನು ಎನ್ನುವುದೇ ತಿಳಿಯದಾಗಿದೆ.
ಪುರಸಭೆಯ ಆಡಳಿತ ಮಂಡಳಿಯವರು ಪಟ್ಟಣದ ಉರ್ದು ಶಾಲೆಯ ಆವರಣ ಹಾಗೂ ಪ್ರಸಿದ್ದ ಸೋಮೇಶ್ವರ ದೇವಾಲಯದ ಹೊರ ಭಾಗದಲ್ಲಿನ ಕಸಾಯಿಖಾನೆಗಳನ್ನು ಶೀಘ್ರವಾಗಿ ಸ್ಥಳಾಂತರ ಮಾಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಲಾಗುವುದು.
 ಚೆಂಬಣ್ಣ ಬಾಳಿಕಾಯಿ, ಶಂಕ್ರಣ್ಣ ಬಾಳಿಕಾಯಿ
ಸಾಮಾಜಿಕ ಹೋರಾಟಗಾರರು


-ಅಶೋಕ ಸೊರಟೂರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement