ಸುದ್ದಿ ಸಂಕ್ಷೇಪ
ತರಬೇತಿ ಕಾರ್ಯಕ್ರಮ
ಗದಗ: ರಾಜೀವಗಾಂಧಿ ಚೈತನ್ಯ ಯೋಜನೆಯಡಿ ಗ್ರಾಮ ಸಭೆಯ ಮುಖಾಂತರ ಆಯ್ಕೆಯಾಗಿರುವ ಫಲಾನುಭವಿಗಳಿಗೆ ಸಂಬಂಧಪಟ್ಟ ತಾಪಂ ಕಾರ್ಯಾಲಯದಲ್ಲಿ ಉಪಗ್ರಹ ಆಧಾರಿತ ತರಬೇತಿಯನ್ನು ಜ. 1 ರಿಂದ ಫೆ. 20 ರವರೆಗೆ ಏರ್ಪಡಿಸಲಾಗಿದೆ. ಕಾರಣ ಸಂಬಂಧಪಟ್ಟ ಫಲಾನುಭವಿಗಳು ತಾಲೂಕು ಪಂಚಾಯತ್ ಕಾರ್ಯಾಲಯಕ್ಕೆ ಆಗಮಿಸಿ ತರಬೇತಿಯ ಸೌಲಭ್ಯವನ್ನು ಪಡೆಯಲು ಕೋರಲಾಗಿದೆ.
ಕಡಲೆಗೆ ರು. 8 ಸಾವಿರ ಬೆಂಬಲ ಬೆಲೆ ನೀಡಿ
ಗದಗ: ಜಿಲ್ಲೆಯಲ್ಲಿ ಹೆಚ್ಚಿನ ರೀತಿಯಲ್ಲಿ ಕಡೆಲೆ ಬೆಳೆದಿದ್ದು, ಮಾರುಕಟ್ಟೆಯಲ್ಲಿ ರೈತರಿಗೆ ಅನ್ಯಾಯವಾಗುವ ರೀತಿಯಲ್ಲಿ ದರ ಇದ್ದು, ಇದರಿಂದ ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ. ಆದ ಕಾರಣ ಶೀಘ್ರವಾಗಿ ರೈತರಿಗೆ ಸರ್ಕಾರ ರು. 8 ಸಾವಿರ ಪ್ರತಿ ಕ್ವಿಂಟಾಲ್ಗೆ ಬೆಂಬಲ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾ ರೈತ ಸಂಘದ ಪದಾಧಿಕಾರಿಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಕೆ.ಜಿ. ಶಾಂತಸ್ವಾಮಿಮಠ, ಮಹಾದೇವಗೌಡ ಪಾಟೀಲ, ಬಸವರಾಜ ನಾವಿ. ಫಕ್ಕೀರಪ್ಪ ಹಕ್ಕಿ, ರಾಮಣ್ಣ ಕೊಂಚಿಗೇರಿ, ಬಿ.ಎಚ್.ಪೂಜಾರ, ಚೇತನ ಪಟ್ಟಣಶೆಟ್ಟಿ, ಶೇಖವ್ವ ಗಿಣಗೇರಿ, ಶಿವಾನಂದ ಇಟಗಿ, ಚಂದ್ರಕಾಂತ ಉಳ್ಲಾಗಡ್ಡಿ ಮುಂತಾದವರು ಹಾಜರಿದ್ದರು.
ಗಣರಾಜ್ಯೋತ್ಸವ ಆಚರಣೆ ಇಂದು
ಗದಗ: ಬೆಟಗೇರಿಯಲ್ಲಿರುವ ಮಹಾರಾಣಾ ಪ್ರತಾಪಸಿಂಹ ಶಿಕ್ಷಣ ಸಂಸ್ಥೆಯ ಸಯುಂಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಜ. 26ರ ಬೆಳಗ್ಗೆ 7.30 ಗಂಟೆಗೆ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಗಣೇಶಸಿಂಗ್ ಬ್ಯಾಳಿ ಧ್ವಜಾರೋಹಣ ನೆರವೇರಿಸುವರು. ಅಧ್ಯಕ್ಷತೆಯನ್ನು ಕೆ.ವಿ. ಗದಗಿನ ವಹಿಸುವರು. ವಿದ್ಯಾರ್ಥಿಗಳಿಂದ ಭಾಷಣ, ದೇಶಭಕ್ತಿ ಗೀತೆಗಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಶಿಕ್ಷಣಾಭಿಮಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪ್ರಾಚಾರ್ಯ ವೈ.ಆರ್. ಹಿರೇಗೌಡರ ಪ್ರಕಟಣೆಯ ಮೂಲಕ ಕೋರಿದ್ದಾರೆ.