ಅಭಿವೃದ್ಧಿಗೆ ಭಯೋತ್ಪಾದನೆ ಮಾರಕ
ನರಗುಂದ: ಪ್ರಪಂಚದಲ್ಲಿ ಭಾರತ ದೇಶ ಸಂಪತ್ತಭರಿತವಾಗಿದೆ. ಇಂಥ ದೇಶದ ಅಭಿವೃದ್ಧಿಗೆ ಭಯೋತ್ಪಾದನೆಯಂತಹ ಚಟುವಟಿಕೆ ಮಾರಕವಾಗಿದ್ದು, ಇದನ್ನು ಬೇರು ಸಮೇತ ಕಿತ್ತು ಹಾಕುವ ನಿಟ್ಟಿನಲ್ಲಿ ಯುವಕರು ಮುಂದಾಗಬೇಕೆಂದು ಶಾಸಕ ಬಿ.ಆರ್. ಯಾವಗಲ್ ಹೇಳಿದರು. ಅವರು ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ 65ನೇ ಗಣರಾಜೋತ್ಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಈ ತಾಲೂಕು ಮುಖ್ಯವಾಗಿ ಕೃಷಿ ಪ್ರಧಾನವಾಗಿದ್ದು ಸಂಪೂರ್ಣ ಅಭಿವೃದ್ಧಿಗೆ ಶ್ರಮಿಸಿದ್ದೇವೆ. ಮುಂದಿನ ದಿನಗಳಲ್ಲಿ ಪಟ್ಟಣ ಸೇರಿದಂತೆ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡಲಾಗುವುದು ಎಂದರು. ತಹಸೀಲ್ದಾರ್ ಎಂ. ಸಂತೋಷ ಮಾತನಾಡಿ, ಭಾರತ ದೇಶ ಜಾತ್ಯತೀತವಾಗಿದೆ. ಅದಕ್ಕೆ ಸರ್ವ ಜನಾಂಗದವರು ಸಹೋದರತ್ವ ಭಾವನೆಯಿಂದ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕು ಎಂದರು.
ತಾಪಂ ಅಧ್ಯಕ್ಷ ಗುರಪ್ಪ ಆದಪ್ಪನವರ, ಚಂಬಣ್ಣ ವಾಳದ, ಗುರುಪಾದಪ್ಪ ಕುರಹಟ್ಟಿ, ಪುರಸಭೆ ಸದಸ್ಯ ಸಿ.ಬಿ. ಪಾಟೀಲ, ಎಸ್.ಆರ್. ಪಾಟೀಲ, ನಾಗಪ್ಪ ನವಲಗುಂದ, ಮಹೇಶ ಬಡಿಗೇರ, ರಫೀಕ ಧಾರವಾಡ, ಜಿಪಂ ಸದಸ್ಯ ಶಾಂತಾ ದಂಡಿನ, ವಿಠ್ಠಲ ಶಿಂದೆ, ಬಸಪ್ಪ ನರಗುಂದ, ದ್ಯಾಮಣ್ಣ ಸವದತ್ತಿ, ತಾಪಂ ಅಧಿಕಾರಿ ನಂದಕುಮಾರ ಗುಂಡಾ, ಆರೋಗ್ಯ ಅಧಿಕಾರಿ ಎಸ್.ಎ. ವಸ್ತ್ರದ, ಪುರಸಭೆ ಅಧಿಕಾರಿ ಎಸ್. ರಾಜಶೇಖರ, ಮುಂತಾದವರು ಹಾಜರಿದ್ದರು.
ಅವ್ಯವಸ್ಥೆ
ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಬಂದವರಿಗೆ ಸರಿಯಾದ ಆಸನದ ವ್ಯವಸ್ಥೆ ಮಾಡಿರಲಿಲ್ಲ. ಸುಡು ಬಿಸಿಲಲ್ಲಿ ನೌಕರರು ಮತ್ತು ಸಾರ್ವಜನಿಕರು ಪರದಾಡಬೇಕಾಯಿತು. ಪ್ರತಿ ವರ್ಷ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಪ್ರತ್ಯೇಕ ಬಹುಮಾನಗಳನ್ನು ನೀಡಲಾಗುತ್ತಿತ್ತು. ಆದರೆ, ಈ ಬಾರಿ ಆ ವ್ಯವಸ್ಥೆಯೂ ಮಾಡಿರಲಿಲ್ಲ. ಇದರಿಂದಾಗಿ ನಿರ್ಣಾಯಕರಿಗೆ ಮತ್ತು ಶಾಲೆಗಳು ಮುಖ್ಯಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು.