ನಿರಾಶ್ರಿತರಿಗೆ ಗ್ರಾಮೀಣ ಸಂತೆ ಮಾರುಕಟ್ಟೆ ಆಶ್ರಯ
ಕನ್ನಡಪ್ರಭ ವಾರ್ತೆ, ಗದಗ, ಜ. 28
ಜಿಲ್ಲೆಯ 5 ತಾಲೂಕುಗಳ ವ್ಯಾಪ್ತಿಯಲ್ಲಿ ಗ್ರಾಮೀಣ ರೈತರು ಬೆಳೆದ ಬೆಳೆಗಳನ್ನು ಮಾರಾಟ ಮಾಡುವ ನಿಟ್ಟಿನಲ್ಲಿ ಅನುಕೂಲವಾಗಲೆಂದು ನಿರ್ಮಿಸಲಾಗಿರುವ ಎಲ್ಲಾ ಗ್ರಾಮೀಣ ಸಂತೆ ಮಾರುಕಟ್ಟೆಗಳು ನಿರಾಶ್ರಿತರ ಕೇಂದ್ರಗಳಾಗಿ ಮಾರ್ಪಟ್ಟಿವೆ. ಯಾವ ಉದ್ದೇಶಕ್ಕಾಗಿ ನಿರ್ಮಾಣ ಮಾಡಲಾಗಿತ್ತೋ ಆ ಉದ್ದೇಶ ಮಾತ್ರ ಜಿಲ್ಲೆಯ ಯಾವ ಭಾಗದಲ್ಲಿಯೂ ಸಫಲವಾಗಿಲ್ಲ.
2007ರಿಂದ ಜಿಲ್ಲೆಯ ಪ್ರಮುಖ ಗ್ರಾಮಗಳು ಹಾಗೂ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಗ್ರಾಮಗಳಲ್ಲಿ ಆ ಗ್ರಾಮ ಹಾಗೂ ಸಮೀಪದ ಗ್ರಾಮಗಳಲ್ಲಿನ ರೈತರು ಬೆಳೆದ ತೋಟಗಾರಿಕೆ ಹಾಗೂ ಇನ್ನಿತರ ಉತ್ಪನ್ನಗಳನ್ನು ನೇರವಾಗಿ ಮಾರಾಟ ಮಾಡಲು ಅನುಕೂಲ ಮಾಡುವ ಉದ್ದೇಶದಿಂದ 18 ಗ್ರಾಮೀಣ ಸಂತೆ ಮಾರುಕಟ್ಟೆಗಳನ್ನು ನಿರ್ಮಾಣ ಮಾಡಲಾಗಿದೆ. ಪ್ರತಿ ಸಂತೆ ಮಾರುಕಟ್ಟೆ ನಿರ್ಮಾಣಕ್ಕೆ 12ರಿಂದ 15 ಲಕ್ಷ ವ್ಯಯ ಮಾಡಿ ನಿರ್ಮಾಣ ಮಾಡಲಾಗಿದೆ.
ಜಿಲ್ಲೆಯಲ್ಲಿ ಉದ್ದೇಶ ಈಡೇರಿಲ್ಲ
ಗ್ರಾಮೀಣ ಪ್ರದೇಶದ ರೈತರು ತಾವು ಬೆಳೆದ ಬೆಳೆಗಳನ್ನು ಮಾರಾಟ ಮಾಡಲು ನಗರ ಪ್ರದೇಶಕ್ಕೆ ಬರಬೇಕಾಗುತ್ತದೆ.
ಇದರಿಂದ ಅವರಿಗೆ ಸಾರಿಗೆ ವೆಚ್ಚವನ್ನು ಭರಿಸಬೇಕಾಗುತ್ತದೆ. ಅದನ್ನು ತಪ್ಪಿಸುವ ಹಾಗೂ ಗ್ರಾಹಕರಿಗೂ ಮಧ್ಯವರ್ತಿಗಳ ಹಾವಳಿಯಿಂದ ಮುಕ್ತಿ ನೀಡುವ ಉದ್ದೇಶದಿಂದ ಗ್ರಾಮಗಳಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಮೂಲಕ ಈ ರೀತಿಯ ಗ್ರಾಮೀಣ ಸಂತೆಗಳನ್ನು ನಿರ್ಮಾಣ ಮಾಡಿ, ಅಲ್ಲಿ ರೈತರು ಮತ್ತು ಗ್ರಾಹಕರಿಗೆ ಮಾರಾಟಕ್ಕೆ ಅವಕಾಶ ಕಲ್ಪಿಸುವುದು ಇದರ ಹಿಂದಿರುವ ಉದ್ದೇಶ. ಆದರೆ, ಜಿಲ್ಲೆಯಲ್ಲಿ ಮಾತ್ರ ಇದು ಯಶಸ್ಸು ಕಂಡಿಲ್ಲ.
ಮಾಹಿತಿಯೇ ಇಲ್ಲ
ರೋಣ ತಾಲೂಕಿನ ಅಬ್ಬಿಗೇರಿ ಮತ್ತು ಬೆಳವಣಕಿ, ಯಾವಗಲ್ಲ ಸೇರಿದಂತೆ ಜಿಲ್ಲೆಯಲ್ಲಿ ಗ್ರಾಮೀಣ ಸಂತೆ ಮಾರುಕಟ್ಟೆಗಳು ನಿರ್ಮಾಣವಾಗಿವೆ. ಆದರೆ ಇದರ ಮುಖ್ಯ ಉದ್ದೇಶ ಇಂದಿಗೂ ಗ್ರಾಮಸ್ಥರಿಗೆ ತಿಳಿದಿಲ್ಲ. ಇವುಗಳ ನಿರ್ಮಾಣಕ್ಕೆ ಆಯಾ ಗ್ರಾಪಂಗಳೇ ಸ್ಥಳವನ್ನು ನೀಡಿವೆ. ಎಪಿಎಂಸಿಗಳು ಸಂತೆ ಮಾರುಕಟ್ಟೆ ನಿರ್ಮಿಸಿ ಮರಳಿ ಕೆಲವೆಡೆ ಗ್ರಾಪಂಗಳಿಗೆ ಹಸ್ತಾಂತರಿಸಿವೆ. ಇನ್ನು ಕೆಲವೆಡೆ ಹಸ್ತಾಂತರಿಸಿಲ್ಲ. ಮುಖ್ಯವಾಗಿ ಇವುಗಳು ನಿರ್ಮಾಣ ಹಾಗೂ ಬಳಕೆಯ ವಿಷಯದಲ್ಲಿ ಗ್ರಾಮದಲ್ಲಿ ಗ್ರಾಮೀಣ ಸಂತೆ ಮಾರುಕಟ್ಟೆ ಪ್ರಾಂಗಣ ಯಾತಕ್ಕಾಗಿ ನಿರ್ಮಿಸಿದ್ದಾರೆ. ಇಲ್ಲಿ ಮಾಡುವಂತಹ ವ್ಯಾಪಾರ ವಹಿವಾಟಿನ ಬಗ್ಗೆ ಸಾರ್ವಜನಿಕರಿಗೆ ಇಂದಿಗೂ ಮಾಹಿತಿ ಇಲ್ಲ ಎನ್ನುವುದು ದುರಂತದ ಸಂಗತಿಯಾಗಿದೆ.
18ಕ್ಕೂ ಹೆಚ್ಚು ನಿರಾಶ್ರಿತರ ಕೇಂದ್ರಗಳು
ಜಿಲ್ಲೆಯಾದ್ಯಂತ 2 ಕೋಟಿ 16 ಲಕ್ಷಕ್ಕೂ ಹೆಚ್ಚಿನ ವೆಚ್ಚದಲ್ಲಿ 18ಕ್ಕೂ ಹೆಚ್ಚು ಸ್ಥಳಗಳಲ್ಲಿ ನಿರ್ಮಾಣವಾಗಿರುವ ಈ ಗ್ರಾಮೀಣ ಸಂತೆಗಳು ಇಂದು ನಿರಾಶ್ರಿತರ ಕೇಂದ್ರಗಳಾಗಿ ಮಾರ್ಪಟ್ಟಿವೆ. ಗ್ರಾಮಗಳಿಗೆ ಬರುವ ಸಣ್ಣಪುಟ್ಟ ವ್ಯಾಪಾರಸ್ಥರು, ಮಾನಸಿಕವಾಗಿ ಅಸ್ವಸ್ಥರು, ವಿವಿಧ ಗಂಭೀರ ಕಾಯಿಲೆಯಿಂದ ಮನೆಯಿಂದ ಹೊರ ಹಾಕಲ್ಪಟ್ಟವರು ಇಂದು ವಸತಿಗಾಗಿ ಆಶ್ರಯಿಸಿರುವುದು ಈ ಗ್ರಾಮೀಣ ಸಂತೆ ಮಾರುಕಟ್ಟೆಗಳನ್ನು. ಕೆಲವೆಡೆ ಅವುಗಳಿಗೆ ಸರಿಯಾದ ವಿದ್ಯುತ್ ಸಂಪರ್ಕ ಕಲ್ಪಿಸದೇ ಇರುವುದು ಮತ್ತು ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸದೇ ಇರುವುದು ಇವುಗಳ ಇಂದಿನ ದುಸ್ಥಿತಿಗೆ ಕಾರಣವಾಗಿದೆ.
ಗ್ರಾಪಂಗಳು ಗಮನಿಸಲಿ
ಜಿಲ್ಲಾ ಎಪಿಎಂಸಿ ಹಿರಿಯ ಅಧಿಕಾರಿಗಳು ಗ್ರಾಮೀಣ ಸಂತೆ ಮಾರುಕಟ್ಟೆಗಳಿಗೆ ಅಗತ್ಯವಿರುವ ಎಲ್ಲ ಮೂಲಭೂತ ಸೌಕರ್ಯಗಳನ್ನು ಶೀಘ್ರದಲ್ಲಿಯೇ ಕಲ್ಪಿಸಿ ರೈತರು ಮತ್ತು ಗ್ರಾಹಕರಿಗೆ ಅನುಕೂಲ ಕಲ್ಪಿಸಿಕೊಡಬೇಕು ಹಾಗೂ ಅಲ್ಲಿಯೇ ಸಂತೆಗಳನ್ನು ನಡೆಸಬೇಕು ಎಂದು ಪ್ರತಿಯೊಂದು ಗ್ರಾಪಂಗಳಿಗೆ ಕಟ್ಟುನಿಟ್ಟಿನ ಸೂಚನೆಯನ್ನು ನೀಡಬೇಕು. ಆ ನಿಟ್ಟಿನಲ್ಲಿ ಗ್ರಾ.ಪಂ. ಆಡಳಿತ ಕಾರ್ಯ ನಿರ್ವಹಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.
-ಶಿವಕುಮಾರ ಕುಷ್ಟಗಿ