ಬದುಕು ಹಾಳು ಮಾಡುವ ದುರ್ಗುಣ ದೂರವಿಡಿ
ಲಕ್ಷ್ಮೇಶ್ವರ: ಮನುಷ್ಯನನ್ನು ದುಶ್ಚಟಗಳು ಹಾಳು ಮಾಡುವುದರ ಜತೆಯಲ್ಲಿ ಅವನ ಕುಟುಂಬವನ್ನು ಬೀದಿಗೆ ತರುವ ಕೆಲಸ ಮಾಡುತ್ತದೆ. ನಮ್ಮ ಬದುಕನ್ನು ಹಾಳು ಮಾಡುವ ದುರ್ಗುಣಗಳನ್ನು ದೂರ ಮಾಡಿ, ಸದ್ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಬಾಲೇಹೊಸೂರಿನ ಕುಮಾರ ದಿಂಗಾಲೇಶ್ವರ ಶ್ರೀಗಳು ಹೇಳಿದರು.
ಅವರು ಭಾನುವಾರ ಸಂಜೆ ಪಟ್ಟಣದಲ್ಲಿ 'ದುರ್ಗುಣಗಳ ಭಿಕ್ಷೆ ಸದ್ಗುಣಗಳ ದೀಕ್ಷೆ' ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡ ಪಾದಯಾತ್ರೆ ಅನಂತರ ನಡೆದ ಸಮಾರಂಭದಲ್ಲಿ ಮಾತನಾಡಿದರು. ದುಶ್ಚಟಗಳನ್ನು ಬಿಡುವುದಾಗಿ ಶ್ರೀಗಳ ಎದುರು ಪ್ರಮಾಣ ಮಾಡಿದವರಿಂದಲೇ ಕಾರ್ಯಕ್ರಮ ಉದ್ಘಾಟಿಸಲಾಯಿತು. ಇಂದಿನ ಯುವಕರಲ್ಲಿ ಬಹಳಷ್ಟು ಜನರು ಚಟಗಳ ದಾಸರಾಗಿದ್ದು, ನಮ್ಮ ಭಾರತದ ಭವಿಷ್ಯವನ್ನು ನೆನೆದರೆ ಬಹಳ ದುಃಖವಾಗುತ್ತದೆ. ದೇಶದ ಯುವ ಶಕ್ತಿ ನಮ್ಮ ರಾಷ್ಟ್ರದ ಸಂಪತ್ತಾಗಿದ್ದು, ಇಂತಹ ಸಂಪತ್ತು ಚಟಗಳ ಸೆರೆಯಲ್ಲಿ ಸಿಲುಕಿರುವುದು ನೋವಿನ ಸಂಗತಿ ಎಂದರು.
ಯುವಶಕ್ತಿ ಚಟಗಳನ್ನು ಬಿಟ್ಟು ಉತ್ತಮ ಜೀವನ ಸಾಗಿಸಲು ಮುಂದಾಗಬೇಕು. ಸಮಾಜದಲ್ಲಿನ ಮೇಲು-ಕೀಳುಗಳನ್ನು ತೊಡೆದು ಹಾಕಿ, ನೆಮ್ಮದಿಯ ಸಮಾಜ ನಿರ್ಮಿಸುವುದು ನಮ್ಮ ಕನಸು. ಸಹಬಾಳ್ವೆಯೇ ನಮ್ಮ ಮಂತ್ರವಾಗಿದೆ. ಜೀವನದಲ್ಲಿ ಬರುವ ಸಮಸ್ಯೆಗಳಿಗೆ ಅಂಜಿ ದುಶ್ಚಟಗಳ ದಾಸರಾಗುವುದರಿಂದ ನಮ್ಮ ಮನೆಯ ಕೀರ್ತಿ, ಆರೋಗ್ಯ, ಸಂಪತ್ತು ಹಾಳಾಗಿ ಹೋಗುತ್ತವೆ. ಮಾನಸಿಕ ಅಸ್ವಾಸ್ಥ್ಯ ಉಂಟಾಗಿ ದೈಹಿಕ ಸಾಮರ್ಥ್ಯ ಕುಂದಿಹೋಗುತ್ತದೆ. ಇದರಿಂದ ನಮ್ಮ ಭವಿಷ್ಯ, ಕುಟುಂಬ ಬೀದಿಗೆ ಬರುತ್ತದೆ. ಅದಕ್ಕಾಗಿ ನಮ್ಮ ಜೋಳಿಗೆಗೆ ನಿಮ್ಮ ದುಶ್ಚಟಗಳನ್ನು ಹಾಕಿ ಸದ್ಗುಣಗಳನ್ನು ಹೊಂದಿ, ಜೀವನದ ಮುಕ್ತಿಯನ್ನು ಕಾಣುವುದು ಇಂದಿನ ಅಗತ್ಯವಾಗಿದೆ ಎಂದರು.
ಹಾವೇರಿ ಹುಕ್ಕೇರಿಮಠದ ಸದಾಶಿವ ಶ್ರೀಗಳು ಮಾತನಾಡಿ, ದೇಶದಲ್ಲಿ ಸಾರಾಯಿ ನಿಷೇಧವಾಗಬೇಕು ಎನ್ನುವುದು ಗಾಂಧೀಜಿಯವರ ಕನಸಾಗಿತ್ತು. ಆ ಕನಸು ಇಂದು ಬರಿ ಕನಸಾಗಿ ಉಳಿದಿದ್ದು ನೋವಿನ ಸಂಗತಿ. ಬಾಲೇಹೊಸೂರಿನ ದಿಂಗಾಲೇಶ್ವರ ಶ್ರೀಗಳು ದುಶ್ಚಟಗಳ ಭಿಕ್ಷೆ ಮಾಡುವ ಮೂಲಕ ಸಮಾಜದ ಹಿತ ಕಾಪಾಡುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಡಾ. ವೈ.ಎಫ್. ಹಂಜಿ, ಶಾಸಕ ರಾಮಕೃಷ್ಣ ದೊಡ್ಡಮನಿ, ಮಾಜಿ ಶಾಸಕ ರಾಮಣ್ಣ ಲಮಾಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾರಂಭಕ್ಕೂ ಮೊದಲು ಪಂಪ ವೃತ್ತದಿಂದ ಶ್ರೀಗಳ ಪಾದಯಾತ್ರೆ ಸಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹಾಯ್ದು, ಅನಂತರ ಸೋಮೇಶ್ವರ ದೇವರ ತೇರಿನ ಮನೆಯ ಹತ್ತಿರ ಸಮಾರಂಭ ಜರುಗಿತು. ಮೆರವಣಿಗೆಯಲ್ಲಿ ಡೊಳ್ಳು ಮೇಳ, ಜಾಂಜ್ ಮೇಳ, ಕುದುರೆ ಕುಣಿತದೊಂದಿಗೆ ನೂರಾರು ಮಹಿಳೆಯರು ಕುಂಭ ಹೊತ್ತು ಸಾಗಿದರು. ದೇವರ ಹಿಪ್ಪರಗಿಯ ಮಹಾಂತ ಶ್ರೀಗಳು, ಧುದನಿಯ ಶಾಂತಲಿಂಗ ಶ್ರೀಗಳು, ಮಂಟೂರಿನ ಹರನಾಳದ ಶ್ರೀಗಳು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಸಮಾರಂಭದಲ್ಲಿ ಪುರಸಭೆ ಅಧ್ಯಕ್ಷೆ ಗಂಗಮ್ಮ ಫಕ್ಕೀರಸ್ವಾಮಿಮಠ, ಉಪಾಧ್ಯಕ್ಷ ಎಂ.ಆರ್.ಪಾಟೀಲ, ಎಲ್.ಸಿ. ಲಿಂಬಯ್ಯಸ್ವಾಮಿಮಠ, ಆರ್.ಎಫ್. ಪುರಾಣಿಕಮಠ, ಚೆಂಬಣ್ಣ ಬಾಳಿಕಾಯಿ, ಚೆನ್ನಪ್ಪ ಜಗಲಿ, ಎಸ್.ಪಿ. ಪಾಟೀಲ, ಸಿ.ವಿ. ಕೆರಿಮನಿ, ಡಾ. ಎಸ್.ಬಿ. ಜವಾಯಿ, ಎಂ.ಎಸ್. ದೊಡ್ಡಗೌಡರ, ಶಿವಣ್ಣ ನೆಲುವಿಗಿ, ಸುನೀಲ ಮಹಾಂತಶೆಟ್ಟರ್, ಬಸವೇಶ ಮಹಾಂತಶೆಟ್ಟರ ಹಾಗೂ ಪುರಸಭೆಯ ಸದಸ್ಯರು ಪಾಲ್ಗೊಂಡಿದ್ದರು.