ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಬಿಸಿಯೂಟಕ್ಕೆ ನುಸಿಯುಕ್ತ ತೊಗರಿ ಬೇಳೆ: ಶಿಕ್ಷಕರ ಮೇಲೆ ಆಕ್ರೋಶ

Vishwanath S
Updated On : 29 Jan 2014, 11:09 am

ರೋಣ: ನುಸಿ ಪೀಡಿತ ತೊಗರಿ ಬೇಳೆಯನ್ನು ಬಿಸಿಯೂಟಕ್ಕೆ ಬಳಸಲಾಗುತ್ತಿದೆ ಎಂಬ ವಿದ್ಯಾರ್ಥಿಗಳ ಖಚಿತ ಮಾಹಿತಿ ಮೇರೆಗೆ ಗ್ರಾಮದ ಪಾಲಕರು ಶಾಲೆಗಳಿಗೆ ಭೇಟಿ ನೀಡಿ, ಮೂಟೆಗಳನ್ನು ಪರಿಶೀಲಿಸಿ ಪ್ರತಿಭಟಿಸಿದ ಘಟನೆ ತಾಲೂಕಿನ ಇಟಗಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ತಿಂಗಳಿನಿಂದ ಗ್ರಾಮದ ಶಾಲೆಗಳಲ್ಲಿ ಸಿದ್ಧಪಡಿಸುವ ಬಿಸಿಯೂಟಕ್ಕೆ ನುಸಿ ಮಿಶ್ರಿತ ತೊಗರಿ ಬೇಳೆಗಳನ್ನು ಬಳಸಲಾಗುತ್ತಿದೆ ಎಂಬ ವಿದ್ಯಾರ್ಥಿಗಳ ಮಾಹಿತಿ ಮೇರೆಗೆ ಇಟಗಿ ಗ್ರಾಮದ ಹಿರಿಯ ಮತ್ತು ಕಿರಿಯ ಪ್ರಾಥಮಿಕ ಹಾಗೂ ಉರ್ದು ಕಿರಿಯ ಪ್ರಾಥಮಿಕ ಶಾಲೆಗಳಿಗೆ ಪಾಲಕರು, ಗ್ರಾಮದ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿ ತೊಗರಿ ಬೇಳೆಗಳಲ್ಲಿ ನುಸಿ ಇರುವ ಸಂಗತಿ ದೃಢಪಟ್ಟಿದೆ. ತೊಗರಿ ಬೇಳೆ ಮೂಟೆಗಳಲ್ಲಿ ವ್ಯಾಪಕ ನುಸಿಗಳಿರುವ ಬಗ್ಗೆ ಮಾಹಿತಿ ಪಡೆದ ಪಾಲಕರು, ನುಸಿಯುಳ್ಳ ತೊಗರಿ ಬೇಳೆಯನ್ನು ಕಂಡ ಪಾಲಕರು ಹಾಗೂ ದಸಸಂ ಪದಾಧಿಕಾರಿಗಳು ಆಕ್ರೋಶಗೊಂಡು ಶಾಲೆಗಳ ಆಹಾರ ಧಾನ್ಯಗಳನ್ನು ದಾಸ್ತಾನು ಮಾಡಲಾದ ಅಕ್ಷರ ದಾಸೋಹ ಕೊಠಡಿಗಳಿಗೆ ನುಗ್ಗಿ ಮೂಟೆಗಳನ್ನು ಒಂದೆಡೆ ಸುರಿದು ಬೇಳೆಗಳಲ್ಲಿರುವ ನುಸಿಗಳನ್ನು ಸಾರ್ವಜನಿಕರ ದರ್ಶನಕ್ಕಿಟ್ಟರು.
ಇದರಿಂದ ಆಕ್ರೋಶಗೊಂಡ ಪಾಲಕರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಡಿ.ಎಸ್. ಪಿಳಬಂಟರ ಅವರನ್ನು ತೀವ್ರ ತರಾಟೆಗೆ ತಗೆದುಕೊಂಡು, ನಿಮ್ಮ ಮಕ್ಕಳಿಗೆ ಇಂತಹ ಅಯೋಗ್ಯ ಬೇಳೆಗಳಿಂದ ಊಟ ತಯಾರಿಸುತ್ತೀರಾ ಎಂದು ಛೀಮಾರಿ ಹಾಕಿದರು. ಪೋಷಕರ ಆಕ್ರೋಶದ ನುಡಿಗಳಿಗೆ ವಿಚಲಿತಗೊಂಡ ಮುಖ್ಯ ಶಿಕ್ಷಕ ಪಿಳಿಬಂಟರವರು, ಕಳೆದ ತಿಂಗಳು ತೊಗರಿ ಬೇಳೆ ಮಾಡುವ ಸಂದರ್ಭದಲ್ಲಿ ಮೂಟೆಗಳಲ್ಲಿ ನುಸಿ ಇರುವ ಸಂಗತಿಯನ್ನು ಬಿಇಒ ಡಿ.ಐ. ಅಸುಂಡಿಯವರ ಗಮನಕ್ಕೆ ತರಲಾಗಿತ್ತು. ಈ ಕುರಿತು ಬಿಇಓ ಡಿ.ಐ.ಅಸುಂಡಿ ಅವರು, ನುಸಿಗಳನ್ನು ಸ್ವಚ್ಛಗೊಳಿಸಿ ಬೇಳೆಯನ್ನು ಬಿಸಿಯೂಟಕ್ಕೆ ಬಳಸಿಕೊಳ್ಳುವಂತೆ ನಿರ್ದೇಶಿಸಿದ್ದರು ಎಂಬ ಉತ್ತರ ನೀಡಿದರು.
ಮುಖ್ಯ ಶಿಕ್ಷಕರ ಮಾತುಗಳಿಂದ ಆಕ್ರೋಶಗೊಂಡ ಪಾಲಕರು, ಜಿಲ್ಲಾ ಅಕ್ಷರ ದಾಸೋಹ ನಿರ್ದೇಶಕರಿಗೆ ದೂರವಾಣಿ ಮೂಲಕ ಸಂಪರ್ಕಿಸಿ, ತೊಗರಿ ಬೇಳೆಗಳ ಮೂಟೆಗಳಲ್ಲಿ ನುಸಿ ಇರುವ ಸಂಗತಿಯನ್ನು ತಿಳಿಸಿದರು. ಆಗ ಜಿಲ್ಲಾ ಅಕ್ಷರ ದಾಸೋಹ ನಿರ್ದೇಶಕರು, ಈ ಕೂಡಲೇ ತಾಲೂಕು ಅಕ್ಷರ ದಾಸೋಹ ಅಧಿಕಾರಿಗಳನ್ನು ಇಟಗಿ ಗ್ರಾಮದ ಶಾಲೆಗಳಿಗೆ ಭೇಟಿ ನೀಡಿ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಹಾಗೂ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸುವಂತೆ ಸೂಚಿಸಲಾಗುವುದು ಎಂದರು. ಬಳಿಕ ಪಾಲಕರು ಮತ್ತು ದಸಸಂ ಪದಾಧಿಕಾರಿಗಳು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಅಕ್ಷರ ದಾಸೋಹ ಕೊಠಡಿಗೆ ಭೇಟಿ ನೀಡಿ ಪರಿಶೀಲಿದಾಗ ಇಲ್ಲಿನ ಮೂಟೆಗಳಲ್ಲಿಯೂ ನುಸಿ ಇರುವುದು ಕಂಡುಬಂದಿತು. ಈ ಕುರಿತು ಶಾಲೆಯ ಮುಖ್ಯ ಶಿಕ್ಷಕ ಪರಶುರಾಮ ಅಡಗತ್ತಿ ಅವರನ್ನು ತರಾಟೆಗೆ ತೆಗೆದುಕೊಂಡರು. ಇಟಗಿ ಗ್ರಾಮದ ಸರ್ಕಾರಿ ಶಾಲೆಗಳಲ್ಲಿ ಮಾತ್ರ ನುಸಿಯುಕ್ತ ಬೇಳೆಗಳಿಲ್ಲ.
ತಾಲೂಕಿನ ಎಲ್ಲ ಸರ್ಕಾರಿ ಶಾಲೆಗಳಿಗೆ ಕಳೆದ ತಿಂಗಳು ಸರಬರಾಜು ಮಾಡಲಾದ 60 ಕ್ವಿಂಟಲ್ ತೊಗರಿ ಬೇಳೆಯೂ ಇದೇ ರೀತಿಯಿದೆ. ತಾಲೂಕಿನ ಎಲ್ಲ ಶಾಲೆಗಳು ಸಹ- ನುಸಿಯುಕ್ತ ತೊಗರಿ ಬೇಳೆಯನ್ನು ಬಳಸಿಯೇ ಬಿಸಿಯೂಟ ಸಿದ್ಧ ಪಡಿಸುತ್ತಿವೆ. ಇಂತಹ ಬಿಸಿಯೂಟ ಸೇವಿಸಿದ ವಿದ್ಯಾರ್ಥಿಗಳ ಆರೋಗ್ಯದಲ್ಲಿ ಏರುಪೇರಾದರೆ ಶಾಲೆಯ ಶಿಕ್ಷಕರು ಹಾಗೂ ಜಿಲ್ಲಾ ಮತ್ತು ತಾಲೂಕು ಅಕ್ಷರ ದಾಸೋಹ ನಿರ್ದೇಶಕರು ಹೊಣೆ ಹೊರಬೇಕಾಗುತ್ತದೆ ಎಂದು ಹನುಮಂತ ಹೊಸಳ್ಳಿ, ಮಲ್ಲಪ್ಪ ಮಾದರ ಎಚ್ಚರಿಸಿದರು. ಪ್ರಕಾಶ ಹೊಸಳ್ಳಿ, ಮಲ್ಲು ಮಾದರ, ಸಂಗಪ್ಪ ಮಡಿವಾಳರ, ಹುಲ್ಲಪ್ಪ ಹಲಗಿ, ಭೀಮಪ್ಪ ತಳವಾರ, ಸಿದ್ದಪ್ಪ ಕರಡಿ, ಭೀಮಪ್ಪ ಹುನಗುಂದ, ಬಸಪ್ಪ ಹಾದಿಮನಿ ಇನ್ನಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement