ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಭರದಿಂದ ಸಾಗಿದ ಖಾತ್ರಿ ಕಾಮಗಾರಿ: ತಪ್ಪಿದ ಗುಳೆ

Vishwanath S
Updated On : 29 Jan 2014, 11:09 am

ಶಿರಹಟ್ಟಿ: ತಾಲೂಕಿನ ಬಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂದ್ರಳ್ಳಿ ತಾಂಡಾದಲ್ಲಿಯ ಕೆರೆ ಹೂಳು ತೆಗೆಯುವ ಕಾಮಗಾರಿಗೆ ರು. 6 ಲಕ್ಷ ಕ್ರಿಯಾ ಯೋಜನೆ ಸಿದ್ದಪಡಿಸಿದ್ದು, ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ನಿತ್ಯ 50ಕ್ಕೂ ಹೆಚ್ಚು ಕೂಲಿ ಕಾರ್ಮಿಕರು ಕೆರೆ ಹೂಳು ತೆಗೆಯುವ ಕಾರ್ಯದಲ್ಲಿ ತೊಡಗಿದ್ದಾರೆ. ಹೆಚ್ಚಿನ ಅನುದಾನ ಬಳಕೆ ಮಾಡಿಕೊಂಡು ಒಂದು ವಾರದಿಂದ ತಾಂಡಾದ ಜನತೆ ಅಭಿವೃದ್ಧಿ ಕಾಮಗಾರಿ ನಡೆಸಿದ್ದು, ಬರದಿಂದ ಸಾಗಿವೆ.
ತಾಂಡಾದ ಕೆರೆ 131 ಎಕರೆ ವಿಸ್ತೀರ್ಣ ಹೊಂದಿದೆ. ಈಗಾಗಲೆ ಕೆರೆಯಲ್ಲಿ ಅಲ್ಲಲ್ಲಿ ನೀರು ಕಾಣಿಸುತ್ತಿದ್ದು, ದನ, ಕರುಗಳಿಗೆ ಕುಡಿಯಲು ಅನುಕೂಲವಾಗಿವೆ. ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುತ್ತಿರುವ ಎಲ್ಲ ಕೂಲಿ ಕಾರ್ಮಿಕರು ಉದ್ಯೋಗ ಖಾತ್ರಿ ಚೀಟಿ ಹೊಂದಿದ್ದು, ಅದರ ಸಂಪೂರ್ಣ ಸದುಪಯೋಗಪಡಿಸಿಕೊಂಡಿದ್ದಾರೆ. ಕೆರೆ ಪಕ್ಕದಲ್ಲಿಯೇ ಶಾಲೆ ಕಾಂಪೌಂಡ್ ಕಾಮಗಾರಿಯೂ ಪ್ರಾರಂಭವಾಗಿದೆ.
ಎಲ್ಲರಿಗೂ ಕೆಲಸ: ಬಟ್ಟೂರು ಗ್ರಾಮ ಪಂಚಾಯಿತಿಗೆ ಕುಂದ್ರಳ್ಳಿ ತಾಂಡಾದಿಂದ ಹೋಬಪ್ಪ ಲಮಾಣಿ, ನೀಲವ್ವ ನಾಗಪ್ಪ ಲಮಾಣಿ ಇಬ್ಬರು ಸದಸ್ಯರು ಆಯ್ಕೆಯಾಗಿದ್ದಾರೆ. ಹೆಚ್ಚು ಮುತುವರ್ಜಿ ವಹಿಸಿ ಗ್ರಾಮದ ಜನತೆ ಬರಗಾಲ ಸಮಯದಲ್ಲಿ ಕೆಲಸ ಅರಸಿ ಗುಳೆ ಹೋಗುವುದನ್ನು ತಪ್ಪಿಸಿ ಖಾತ್ರಿ ಯೋಜನೆಯಡಿ ಕೆಲಸ ಕೊಡಿಸುವ ಜತೆಗೆ ತಾಂಡಾದ ಸಮಗ್ರ ಅಭಿವೃದ್ಧಿಗೆ ಮುಂದಾಗಿದ್ದಾರೆ. ಇನ್ನೂ ಹೆಚ್ಚು ಜನ ಕೂಲಿ ಕಾರ್ಮಿಕರು ಕೆಲಸಕ್ಕೆ ಬರುತ್ತಿದ್ದು, ಎಲ್ಲರಿಗೂ 150 ದಿನಗಳವರೆಗೆ ಕೆಲಸ ಕೊಡಿಸುವುದಾಗಿ ಹೇಳಿದ್ದಾರೆ. ತಾಂಡಾದ ಮುಖಂಡ ಸುರೇಶ ಲಮಾಣಿ, ರವಿ ಲಮಾಣಿ ಮಾತನಾಡಿ, ಕೂಲಿ ಕಾರ್ಮಿಕರು ಕಚ್ಚಿ ಹಾಕಿಕೊಂಡು ಕೆಲಸ ಮಾಡಿದ್ದಕ್ಕೆ ನಮ್ಮ ತಾಂಡಾ ಕೆರೆ ಸುಧಾರಣೆ ಕಂಡಿದೆ. ಕೆರೆಯಲ್ಲಿ ನೀರು ನಿಂತಿದ್ದು, ಅಂತರ್ಜಲ ಹೆಚ್ಚಳವಾಗಿದ್ದು, ನೀರಾವರಿಗೂ ಅನುಕೂಲವಾಗಿದೆ. ಯೋಜನೆ ಅಂದರೆ ಲೋಪ-ದೋಷ ಸಾಮಾನ್ಯ. ಅನುದಾನವನ್ನು ಯಾವ ರೀತಿ ಬಳಕೆ ಮಾಡಿಕೊಳ್ಳುತ್ತೇವೆ ಎಂಬುದರ ಮೇಲೆ ಅಭಿವೃದ್ಧಿ ಕಾರ್ಯ ನಡೆಯಲು ಸಾಧ್ಯ. ಯೋಜನೆ ಯಶಸ್ಸಿಗೆ ಜನಪ್ರತಿನಿಧಿಗಳ ಪ್ರಯತ್ನ ಸಾಲದು. ಅಧಿಕಾರಿ ವರ್ಗ ಮತ್ತು ಸಾರ್ವಜನಿಕರ ಸಹಕಾರವೂ ಮುಖ್ಯ ಎಂದು ಪ್ರಗತಿ ಕುರಿತು ತಿಳಿಸಿದರು.
ತಾಲೂಕಿನ ಕೊಂಚಿಗೇರಿ ಗ್ರಾಮದಲ್ಲಿ 7 ದನದ ಕೊಟ್ಟಿಗೆ (ದೊಡ್ಡಿ) ಕಾಮಗಾರಿ ಮಾಡಲಾಗಿದೆ. 7,920 ಶೌಚಾಲಯ ನಿರ್ಮಾಣದ ಗುರಿ ಹೊಂದಿದ್ದು, ಸದ್ಯ 3,330 ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಮಹತ್ವಪೂರ್ಣ ಯೋಜನೆಯಾಗಿದ್ದು, ಸಾಕಷ್ಟು ಅನುದಾನ ಇರುವುದರಿಂದ ಎಲ್ಲ ಪಂಚಾಯಿತಿ ವ್ಯಾಪ್ತಿಯ ಕೂಲಿ ಕಾರ್ಮಿಕರು ತಮ್ಮ ಗ್ರಾಮಗಳ ಅಭಿವೃದ್ಧಿಗೆ ಮುಂದಾಗಬೇಕು ಎಂದರು.


ವಿಶೇಷ ವರದಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement