ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ರೈತರಿಗೆ ಮಾರ್ಗದರ್ಶಿಯಾದ ಕೃಷಿಮೇಳ

Vishwanath S
Updated On : 29 Jan 2014, 11:10 am

ಕನ್ನಡಪ್ರಭ ವಾರ್ತೆ, ಗದಗ, ಜ. 28
ತಾಲೂಕಿನ ಹುಲಕೋಟಿ ಗ್ರಾಮದಲ್ಲಿರುವ ಕೈಲಾಸ ಆಶ್ರಮದ 22ನೇ ವಾರ್ಷಿಕೋತ್ಸವ ಅಂಗವಾಗಿ ಮಂಗಳವಾರ ಕೆ.ಎಚ್. ಪಾಟೀಲ ಕೃಷಿ ವಿಜ್ಞಾನ ಕೇಂದ್ರ ಹುಲಕೋಟಿ, ರಾಜ್ಯ ಕೃಷಿ ಇಲಾಖೆಯ ಆತ್ಮ ಯೋಜನೆ ಗದಗ ಆಶ್ರಯದಲ್ಲಿ ಕೃಷಿಮೇಳ (ಕೃಷಿ ತಂತ್ರಜ್ಞಾನ ಸಪ್ತಾಹ) ಅಂಗವಾಗಿ ಏರ್ಪಡಿಸಿದ್ದ ಕೃಷಿ ತಂತ್ರಜ್ಞಾನ ಮತ್ತು ಯಂತ್ರೋಪಕರಣಗಳ ವಸ್ತು ಪ್ರದರ್ಶನವು ಜಿಲ್ಲೆ, ನೆರೆಯ ಜಿಲ್ಲೆಯ ರೈತರು, ರೈತ ಮಹಿಳೆಯರಿಗೆ ಕೃಷಿ ಪರಿಕರಗಳ ಮಾಹಿತಿ, ಹೊಸ ಹೊಸ ಆವಿಷ್ಕಾರಗಳ ಯಂತ್ರೋಪಕರಣಗಳ ಮಾಹಿತಿ ನೀಡುವ ವಸ್ತುಪ್ರದರ್ಶನವಾಗಿ ಮಾರ್ಪಟ್ಟಿತು.
ಮಂಗಳವಾರ ತಾಲೂಕಿನ ಹುಲಕೋಟಿಯ ಕೈಲಾಸ ಆಶ್ರಮದ 22ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಧಾರ್ಮಿಕ ಸಭೆಯೊಂದಿಗೆ ರೈತ ಸಮಾಜ ಬಾಂಧವರಿಗೆ ಸಹಕಾರಿಯಾಗಲಿ ಎಂಬ ಸದುದ್ದೇಶದಿಂದ ಕೃಷಿ ತಂತ್ರಜ್ಞಾನಗಳು ಮತ್ತು ಯಂತ್ರೋಪಕರಣಗಳ ವಸ್ತು ಪ್ರದರ್ಶನ ಹಮ್ಮಿಕೊಂಡಿರುವುದು ವಿಶೇಷ. ಕೃಷಿ ವಸ್ತು ಪ್ರದರ್ಶನದಲ್ಲಿ ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆ, ಗ್ರಾಮೀಣ ಮಹಿಳೆಯರ ತಾಂತ್ರಿಕತೆಗಳು, ಆಹಾರ ಸಂಸ್ಕರಣೆಯ ಯಂತ್ರೋಪಕರಣಗಳು ಸೇರಿ ತಂತ್ರಜ್ಞಾನಗಳ ಕುರಿತು ಮಾಹಿತಿ ಒದಗಿಸಲಾಯಿತು.
ಯಂತ್ರೋಪಕರಣಗಳ ಪ್ರದರ್ಶನ:ರೈತರಿಗೆ ಆವಿಷ್ಕರಿಸಿದ ನೂತನ ಯಂತ್ರೋಪಕರಣಗಳ ಕುರಿತು ಮಾಹಿತಿ ಮತ್ತು ಮಾರಾಟ ವ್ಯವಸ್ಥೆ ಕಲ್ಪಿಸಲಾಗಿತ್ತು. ಸುಧಾರಿತ ಕಳೆ ತಗೆಯುವ ಸಾಧನ, ಹಾಲು ಕರೆಯುವ ಯಂತ್ರ, ಕೈಯಿಂದ ಹಾಲು ಕರೆಯುವ ಸಾಧನ, ಸುಧಾರಿತ ಕುಡುಗೋಲು, ಶೇಂಗಾ ಒಡೆಯುವ ಮತ್ತು ಹುರಿಯುವ ಯಂತ್ರ, ರೋಟೋವೇಟರ್, ಸೈಕಲ್ ವೀಟರ್, ಹತ್ತಿಬೆಳೆ ಬಿಡಿಸುವ ಚೀಲ, ಬಂಡ್ ಫಾರ್ಮರ್, ಲೇಸರ್ ನಿರ್ದೇಶಿತ ಭೂಮಿ ಸಮ ಯಂತ್ರ, ಆಹಾರ ಸಂಸ್ಕರಣೆ ಮಾಡುವ ಯಂತ್ರೋಪಕರಗಳು, ಮೇವು ಕತ್ತರಿಸುವ ಯಂತ್ರ, ಮಿನಿ ಟ್ರ್ಯಾಕ್ಟರ್ ಸೇರಿ ವಿವಿಧ ನೀರಾವರಿ ಪದ್ಧತಿಗಳ ಸಲಕರಣೆಗಳು ಮತ್ತು ಉಪಕರಣಗಳ ಪ್ರದರ್ಶನ ಜರುಗಿತು.
ರೈತ ಮಹಿಳೆಯರಿಗಾಗಿ: ಧಾನ್ಯ ಸಂರಕ್ಷಣಾ ಪದ್ಧತಿಗಳು, ಗ್ರಾಮೀಣ ಮಹಿಳೆ ಶ್ರಮ ಕಡಿಮೆ ಮಾಡುವ ಸಾಧನಗಳು, ತಾರಸಿ ತೋಟ, ಕೈತೋಟದ ಪ್ರಾಮುಖ್ಯತೆ, ನೆಲ್ಲಿಕಾಯಿಯ ಮೌಲ್ಯವರ್ಧಿತ ಪದಾರ್ಥಗಳು, ಆಹಾರ ಸಂಸ್ಕರಣೆ ಯಂತ್ರೋಪಕರಣಗಳು, ಹುಣಸೆ ಹಣ್ಣಿನ ಮೌಲ್ಯವರ್ಧಿತ ಪದಾರ್ಥಗಳು, ನವಣೆ, ರಾಗಿ, ಸಜ್ಜೆ ಸಿರಿಧಾನ್ಯಗಳ ಮತ್ತು ಮೌಲ್ಯವರ್ಧಿತ ಪದಾರ್ಥಗಳು, ಜೋಳದಲ್ಲಿರುವ ಪೋಷಕಾಂಶಗಳು ಮತ್ತು ಮೌಲ್ಯವರ್ಧನೆ, ಕವಳಿಕಾಯಿ ಪದಾರ್ಥಗಳು, ನೆಲ್ಲಿಕಾಯಿ ಉತ್ಪನ್ನಗಳು, ಸ್ವಸಹಾಯ ಸಂಘದ ಸದಸ್ಯರು ಉತ್ಪಾದಿಸಿದ ವಸ್ತುಗಳ ಪ್ರದರ್ಶನ ಜರುಗಿತು.10 ವರ್ಷಗಳಿಂದ ಜಿಲ್ಲೆ ರೈತರು ಹಾಗೂ ರೈತ ಮಹಿಳೆಯರಿಗೆ ಸಹಕಾರಿಯಾಗಲಿ ಎಂಬ ಉದ್ದೇಶದಿಂದ ವಸ್ತು ಪ್ರದರ್ಶನ ಹಮ್ಮಿಕೊಳ್ಳಲಾಗುತ್ತಿದೆ. ಜನರಿಗೆ ಧರ್ಮದ ಜತೆ ರೈತರ ಆರ್ಥಿಕ ಪ್ರಗತಿಗೆ ಸಹಕಾರಿಯಾಗುವ ಆವಿಷ್ಕರಿಸಿದ ಹೊಸ ಕೃಷಿ ಪರಿಕರಗಳ ಕುರಿತ ಯಂತ್ರೋಪಕರಣಗಳ ಪ್ರದರ್ಶನ ಮತ್ತು ಮಾರಾಟ ಪ್ರದರ್ಶನ ಹಮ್ಮಿಕೊಂಡಿರುವುದು ಶ್ಲಾಘನೀಯ.
-ಎಚ್.ಕೆ. ಪಾಟೀಲ, ಸಚಿವ


-ವಿಶೇಷ ವರದಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement