ಎಕರೆಗೆ ರು. 10 ಸಾವಿರ ಪರಿಹಾರ ನೀಡಿ: ಶಿವರಾಜ ಸಜ್ಜನರ
ಹಾವೇರಿ: ರಾಜ್ಯದಲ್ಲಿಯೇ ಹೆಚ್ಚು ಬಿಟಿ ಹತ್ತಿ ಬೆಳೆಯುವ ಹಾವೇರಿ ಜಿಲ್ಲೆಯಲ್ಲಿ ಕಳಪೆ ಬೀಜದ ಪರಿಣಾಮ ಅರ್ಧಕ್ಕಿಂತ ಹೆಚ್ಚು ಬೆಳೆ ಹಾನಿಗೊಳಗಾಗಿದೆ. ಈಗಾಗಲೇ ಸೂಕ್ತ ಪರಿಹಾರಕ್ಕೆ ಒತ್ತಾಯಿಸಿ ರೈತರು ಪ್ರತಿಭಟನೆ ಆರಂಭಿಸಿದ್ದಾರೆ. ಅದಕ್ಕಾಗಿ ಸರ್ಕಾರ ರೈತರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಸಣ್ಣ, ದೊಡ್ಡ ರೈತರೆಂದು ವಿಂಗಡಣೆ ಮಾಡದೇ ಹಾನಿಗೊಳಗಾದ ಎಲ್ಲ ರೈತರಿಗೂ ಪ್ರತಿ ಎಕರೆಗೆ ರು. 10 ಸಾವಿರ ಪರಿಹಾರ ನೀಡಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಶಿವರಾಜ ಸಜ್ಜನರ ಒತ್ತಾಯಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳಪೆ ಹತ್ತಿ ಬೀಜದಿಂದ ಆಗಿರುವ ಹಾನಿಗೆ ಸರ್ಕಾರ ಹೆಕ್ಟೇರ್‌ಗೆ ರು. 4,500 ನೀಡುವುದಾಗಿ ತಿಳಿಸಿದೆ. ಆದರೆ, ಇದು ಅವೈಜ್ಞಾನಿಕ ಪರಿಹಾರವಾಗಿದೆ. ಇದರಲ್ಲಿ ಬೀಜ ಖರೀದಿ ಹಣವೂ ಬರುವುದಿಲ್ಲ. ಆದ್ದರಿಂದ ಎಕರೆಗೆ ಕನಿಷ್ಠ ರು. 10 ಸಾವಿರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರ ಪ್ರತಿ ಟನ್ ಕಬ್ಬಿಗೆ ರು. 2,500 ದರ ನಿಗದಿ ಮಾಡಿದೆ. ಬೆಳಗಾವಿ ಅಧಿವೇಶನದಲ್ಲಿ ರು. 150 ಪ್ರೋತ್ಸಾಹ ಧನ ಘೋಷಣೆ ಮಾಡಿದೆ. ಆದರೆ ಯಾವುದೇ ಕಾರ್ಖಾನೆಗಳು ಈವರೆಗೆ ಸರ್ಕಾರ ನಿಗದಿಪಡಿಸಿದ ದರ ನೀಡದೇ ಮೌನವಹಿಸಿವೆ. ಸರ್ಕಾರ ಕೂಡಾ ಪ್ರೋತ್ಸಾಹ ಧನವನ್ನು ಜಿಲ್ಲಾಧಿಕಾರಿಗಳ ಮೂಲಕ ರೈತರಿಗೆ ತಲುಪಿಸುವ ಭರವಸೆ ನೀಡಿದೆ. ಅದು ಇನ್ನೂ ರೈತರಿಗೆ ತಲುಪಿಲ್ಲ ಎಂದರು. ಕಾರ್ಖಾನೆ ಮಾಲೀಕರು ಸರ್ಕಾರ ಘೋಷಿಸಿದಷ್ಟು ದರ ನೀಡಲು ಸಾಧ್ಯವಿಲ್ಲ ಎಂದು ಕಬ್ಬು ಪೂರೈಸಿದ ರೈತರಿಗೆ ಕೇವಲ ಅರ್ಧದಷ್ಟು ಹಣ ಮಾತ್ರ ನೀಡಿವೆ. ಸರ್ಕಾರ ಮಧ್ಯಸ್ಥಿಕೆ ವಹಿಸಿ ತನ್ನ ಆದೇಶದಂತೆ ರೈತರಿಗೆ ಬಾಕಿ ಹಣ ಕೊಡಿಸಬೇಕು. ಒಂದು ವೇಳೆ ಕಾರ್ಖಾನೆಗಳು ಕೊಡಲು ನಿರಾಕರಿಸಿದರೆ ಸರ್ಕಾರವೇ ಉಳಿದ ಹಣ ನೀಡಿ ಬದ್ಧತೆ ಮೆರೆಯಬೇಕು ಎಂದು ಸಜ್ಜನರ ತಾಕೀತು ಮಾಡಿದರು.
ಸಮ್ಮೇಳನ ಗೊಂದಲ ಬೇಡ: 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ಕುರಿತು ಜಿಲ್ಲೆಯಲ್ಲಿ ವಾದ-ವಿವಾದ, ಗೊಂದಲಗಳು ನಿರ್ಮಾಣವಾಗಿರುವುದು ದುರದೃಷ್ಟಕರ. ಅನಗತ್ಯ ಗೊಂದಲ ಸೃಷ್ಟಿಸಿ ಜಿಲ್ಲೆಗೆ ಧಕ್ಕಿರುವ ಸಮ್ಮೇಳನ ಕೈತಪ್ಪುವಂತಾಗಬಾರದು. ಹಿಂದಿನಿಂದಲೂ ಜಿಲ್ಲಾ ಕೇಂದ್ರದಲ್ಲಿ ಮಾಡಬೇಕು ಎಂಬುದು ಜಿಲ್ಲೆಯ ಎಲ್ಲ ಜನರ ಅಪೇಕ್ಷೆಯಾಗಿದೆ. ಭಿನ್ನಾಭಿಪ್ರಾಯ ಮರೆತು ಒಗ್ಗಟ್ಟಿನಿಂದ ಸಮ್ಮೇಳನ ಯಶಸ್ಸಿಗೆ ಶ್ರಮಿಸೋಣ. ಆದ್ದರಿಂದ ಗೊಂದಲಗಳಿಗೆ ತೆರೆ ಎಳೆಯಬೇಕು ಎಂದು ಸಲಹೆ ನೀಡಿದರು.
ಮಾಜಿ ಶಾಸಕ ನೆಹರೂ ಓಲೇಕಾರ ಮಾತನಾಡಿ, ನಗರಸಭೆ ಆಡಳಿತದ ಇಚ್ಛಾಶಕ್ತಿ ಕೊರತೆಯಿಂದ ಅನೇಕ ಕಾಮಗಾರಿಗಳು ನೆನೆಗುದಿಗೆ ಬಿದ್ದಂತಾಗಿದೆ. ತಾವು ಶಾಸಕರಾಗಿದ್ದ ಅವಧಿಯಲ್ಲಿ 2 ಹಂತಗಳಲ್ಲಿ ನಗರೋತ್ಥಾನ ಯೋಜನೆಯಡಿ ತಲಾ ರು. 30 ಕೋಟಿಯಂತೆ ರು. 60 ಕೋಟಿ ಅನುದಾನ ಮಂಜೂರಾಗಿದೆ. ಅದರಲ್ಲಿ ಮೊದಲ ಹಂತದ ರು. 30 ಕೋಟಿ ಪೈಕಿ ಸುಮಾರು ರು. 16 ಕೋಟಿ ವೆಚ್ಚದ ಕಾಮಗಾರಿ ನಡೆದಿದೆ. ಉಳಿದ ರು. 44 ಕೋಟಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಅವಕಾಶವಿದೆ. ಆದರೆ, ನಗರಸಭೆ ಆಡಳಿತ ಈ ನಿಟ್ಟಿನಲ್ಲಿ ನಿರ್ಲಕ್ಷ್ಯ ತೋರುತ್ತಿದೆ ಎಂದು ಆಪಾದಿಸಿದರು. ನಗರಕ್ಕೆ ಕುಡಿಯುವ ನೀರು ಪೂರೈಸಲು ಈ ಹಿಂದೆ ರು. 10 ಕೋಟಿ ವೆಚ್ಚದಲ್ಲಿ ಹೆಗ್ಗೇರಿ ಕೆರೆ ತುಂಬುವ ಯೋಜನೆ ರೂಪಿಸಲಾಗಿತ್ತು. ಎಲ್ಲ ಕಾಮಗಾರಿ ಮುಗಿದಿತ್ತು. ನಂತರ ಈಗಿನ ಶಾಸಕರು ಅದನ್ನು ಉದ್ಘಾಟನೆ ಮಾಡಿದರು. ಆದರೆ, ನಂತರ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಿಲ್ಲ. ಬ್ಯಾರೇಜುಗಳಲ್ಲಿ ನೀರು ಸಂಗ್ರಹಿಸುವ ಹಾಗೂ ಅಲ್ಲಿಂದ ಹೆಗ್ಗೇರಿ ಕೆರೆಗೆ ನೀರು ತರುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಿಲ್ಲ. ಕಾಮಗಾರಿ ಮುಗಿದರೂ ಯೋಜನೆ ಬಳಕೆ ಬಗ್ಗೆ ಯಾಕೆ ನಿರ್ಲಕ್ಷ್ಯ ತೋರಲಾಗುತ್ತಿದೆ ಎಂಬುದು ಗೊತ್ತಿಲ್ಲ ಎಂದರು. ಜಿಪಂ ಸದಸ್ಯ ಪದ್ಮನಾಭ ಕುಂದಾಪುರ, ಗಿರೀಶ ತುಪ್ಪದ, ಸುರೇಶ ಹೊಸಮನಿ, ಕೆ.ಸಿ. ಕೋರಿ. ತಾಪಂ ಅಧ್ಯಕ್ಷೆ ಲಕ್ಷ್ಮವ್ವ ಮೇಲ್ಮುರಿ ಇದ್ದರು.